ವಿಜಯಪುರ: ವಿಶ್ವ ಅರಿವಳಿಕೆ ದಿನಾಚರಣೆಯ ಅಂಗವಾಗಿ ಬಿ. ಎಲ್. ಡಿ. ಇ. ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಅರಿವಳಿಕೆ ವಿಭಾಗವು ಸೈಕಲ್ ಜಾಥಾವನ್ನು ಆಯೋಜಿದೆ ಎಂದು ಕಾಲೇಜಿನ ಅರವಳಿಕೆ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅರಿವಳಿಕೆಯ ಬಗ್ಗೆ ಜನ ಸಾಮಾನ್ಯರಲ್ಲಿ ತಿಳವಳಿಕೆ ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಜನಸಾಮಾನ್ಯರೂ ಕೂಡ ತುರ್ತು ಪರಿಸ್ಥಿತಿಯಲ್ಲಿ ಹೇಗೆ ಜೀವ ಉಳಿಸುವ ಆಪತ್ಭಾಂಧವರಾಗಬಹುದು ಎಂಬುದರ ಕುರಿತು ಸಾರ್ವಜನಿಕರಲ್ಲಿ ಮನವರಿಕೆ ಮೂಡಿಸುವುದು ಈ ಜಾಥಾದ ಉದ್ದೇಶವಾಗಿದೆ.
ಈ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಎಸ್. ಎಲ್. ಲಕ್ಕಣ್ಣವರ ಉದ್ಘಾಟಿಸುವರು. ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ, ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಸಮಉಪಕುಲಪತಿ ಡಾ. ಅರುಣ ಇನಾಮದಾರ, ಪ್ರಾಶುಂಪಾಲ ಡಾ. ಅರವಿಂದ ಪಾಟೀಲ, ಬಿ.ಎಲ್.ಡಿ.ಇ. ಆಸ್ಪತ್ರೆಯ ಅಧೀಕ್ಷಕ ಡಾ. ಆರ್. ಎಂ. ಹೊನ್ನುಟಗಿ, ಭಾರತೀಯ ಅರಿವಳಿಕೆ ಸಂಘದ ವಿಜಯಪುರ ಶಾಖೆಯ ಅಧ್ಯಕ್ಷ ಡಾ. ವಿಜಯಕುಮಾರ ಕಲ್ಯಾಣಪ್ಪಗೊಳ ಹಾಗೂ ಅರಿವಳಿಕೆ ವಿಭಾಗದ ಸಮಸ್ತ ವೈದ್ಯರು ಈ ಜನಜಾಗೃತಿಯಲ್ಲಿ ಪಾಲ್ಗೋಳ್ಳಲಿದ್ದಾರೆ.
ಈಗ ವೈದ್ಯರು ಎಲ್ಲ ಕಡೆಗಳಲ್ಲಿ ಲಭ್ಯವಿರುವುದು ಅಸಾಧ್ಯವಾಗಿದೆ. ಯಾರಾದರೂ ರಸ್ತೆಯಲ್ಲಿ, ಮನೆಯಲ್ಲಿ, ಕ್ರೀಡಾಕೂಟದಲ್ಲಿ, ಶಾಲೆ-ಕಾಲೇಜುಗಳಲ್ಲಿ, ಆಫೀಸ್ಗಳಲ್ಲಿ, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ವಿಮಾನಯಾನ ಹೀಗೆ ಎಲ್ಲೆಂದರಲ್ಲಿ ಯಾರಿಗಾದರೂ ಹೃದಯಾಘಾತವಾದರೆ ಅವರಿಗೆ ಹೇಗೆ ಪ್ರಾಥಮಿಕ ಚಿಕಿತ್ಸೆ ನೀಡಬೇಕು ಎಂಬುದರ ಮಾಹಿತಿ ನೀಡಲಾಗುತ್ತದೆ. ಹೃದಯ ಮತ್ತು ಮೆದುಳು ಒಬ್ಬ ಮನುಷ್ಯನ ಅತ್ಯಂತ ಪ್ರಮುಖವಾದ ಅಂಗಗಳಾಗಿವೆ. ಕೆಲವೇ ನಿಮಿಷಗಳು ಕೂಡ ಮೆದುಳು ಮತ್ತು ಹೃದಯಗಳು ಆಮ್ಲಜನಕದ ಆಭಾವವನ್ನು ತಡೆದುಕೊಳ್ಳಲಾರವು. ಸಮಯಕ್ಕೆ ಸರಿಯಾಗಿ ಇಂಥ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ದೊರಕಿದರೆ ಅದು ವರದಾನವಾಗಲಿದ.
ಕಂಪ್ರೆಷನ್ ಓನ್ಲಿ ಲೈಫ್ ಸಪೋರ್ಟ್ ಸಹಾಯದಿಂದ ಒಬ್ಬ ವ್ಯಕ್ತಿಗೆ ಹೊಸ ಜೀವ ಸಿಗಬಹುದು. ಮೊದಲು ಕೆಲವು ನಿಮಿಷಗಳಲ್ಲಿ ಸಿಕ್ಕಲ್ಲಿ ಬದುಕುವ ಸಾಧ್ಯತೆಗಳು ಹೆಚ್ಚುತ್ತದೆ. ಕೈಯಿಂದ ಒತ್ತುವ ಮೂಲಕ ಸಿಪಿಆರ್ ಮಾಡಿ ಜನಸಾಮಾನ್ಯರ ಜೀವ ಉಳಿಸುವಲ್ಲಿ ಸಹಾಯ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.