ವಿಜಯಪುರ: ಎರಡು ವಾರ್ಡುಗಳಲ್ಲಿ ಯಾರನ್ನೂ ಕಣಕ್ಕಿಳಿಸದೇ ಬಿಜೆಪಿ ಮತದಾನಕ್ಕೂ ಮುಂಚೆಯೇ ಸೋಲೊಪ್ಪಿಕೊಂಡ ಘಟನೆ ನಡೆದಿದೆ.
ವಿಜಯಪುರ ಮಹಾನಗರ ಪಾಲಿಕೆಯ ಒಟ್ಟು 35 ವಾರ್ಡುಗಳಿಗೆ ಅ. 28 ರಂದು ಚುನಾವಣೆ ನಡೆಯುತ್ತಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ, ಎಂಪಿ ಮತ್ತು ಎಂಎಲ್‌ಎ ಬಿಜೆಪಿಯವರೇ ಆಗಿರುವುದರಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿತ್ತು. ತೀವ್ರ ಪೈಪೋಟಿಯಿಂದ ಕೂಡಿದ್ದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಕೊನೆ ಕ್ಷಣದವರೆಗೂ ತೀವ್ರ ಕಸರತ್ತು ನಡೆಯಿತು. ಆದರೆ, ಸಾಕಷ್ಟು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳದ ಮಧ್ಯೆಯೂ ಎರಡು ವಾರ್ಡುಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಬಿಜೆಪಿ ಮತದಾನಕ್ಕೂ ಮುಂಚೆಯೇ ಸೋಲೊಪ್ಪಿಕೊಂಡಂತಾಗಿದೆ.
ವಾರ್ಡ್ ಸಂಖ್ಯೆ 20 ಮತ್ತು 27ರಲ್ಲಿ ಬಿಜೆಪಿಯಿಂದ ಯಾರೊಬ್ಬರೂ ಕಣಕ್ಕಿಳಿದಿಲ್ಲ. ಮೇಲಾಗಿ ಕೊನೆಯ ಗುದ್ದಾಟ ನಡೆಸಿ ವಾರ್ಡ್ ಸಂಖ್ಯೆ 34ರಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇದರಿಂದಾಗಿ ಬಿಜೆಪಿಯಲ್ಲಿ ಎಲ್ಲವೂ ಸರಿಯಿದ್ದರೂ, ಪಕ್ಷ ಸಂಘಟನೆಯಲ್ಲಿ ಇನ್ನೂ ಹಲವಾರು ಲೋಪದೋಷಗಳಿರುವುದು ಬಹಿರಂಗವಾಗಿದೆ.
ಎರಡು ಕಡೆ ಸ್ಪರ್ಧಿಸದಿರಲು ಪಕ್ಷದ ನಿರ್ಧಾರ ಕಾರಣ
ಬಸವ ನಾಡು ವೆಬ್ ಗೆ ಲಭ್ಯವಾಗಿರುವ ಮಾಹಿತಿಯಂತೆ ವಾರ್ಡ್ ಸಂಖ್ಯೆ 20 ಮತ್ತು 27ರಲ್ಲಿ ಮುಸ್ಲಿಮರ ಮತದಾರರ ಬಾಹುಳ್ಯವಿದೆ. ಅಲ್ಲದೇ, ಮುಸ್ಮಿಮರಿಗೆ ಟಿಕೆಟ್ ನೀಡಬಾರದು ಎಂದು ನಿರ್ಧರಿಸಲಾಗಿತ್ತು. ಹೀಗಾಗಿ ಅಲ್ಲಿ ಅಲ್ಪಸಂಖ್ಯಾತರೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಹೀನಾಯವಾಗಿ ಸೋಲನುಭವಿಸುವುದಕ್ಕಿಂತ ಅಭ್ಯರ್ಥಿಗಳನ್ನು ಹಾಕದಿರುವುದೇ ಲೇಸು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೆ, ಬಿಜೆಪಿ ಬೆಂಬಲಿಗರ ಅನಿಸಿಕೆ ಪ್ರಕಾರ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಮೇಲಾಗಿ ಸಂಸದ ರಮೇಶ ಜಿಗಜಿಣಗಿ ಹಾಗೂ ಸ್ಥಳೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯವರೇ ಆಗಿದ್ದಾರೆ. ಅಲ್ಲದೇ, ವಿಧಾನ ಪರಿಷತ್ತಿನಲ್ಲಿ ಇಬ್ಬರು ಬಿಜೆಪಿ ಸದಸ್ಯರಿದ್ದಾರೆ. ಇಷ್ಟಾಗಿಯೂ ಎರಡು ವಾರ್ಡುಗಳಲ್ಲಿ ಅಭ್ಯರ್ಥಿಳನ್ನು ಕಣಕ್ಕಿಳಿಸದಿರುವುದು ಪಕ್ಷದ ಸಧ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಕಾರ್ಯಕರ್ತರ ಅಳಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಹೇಳಿದ್ದೇನು ಗೊತ್ತಾ?
ಈ ಕುರಿತು ಬಸವ ನಾಡು ವೆಬ್ ಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಿಜಯಪುರ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ವಾರ್ಡ್ ಸಂಖ್ಯೆ 20 ಮತ್ತು 27ರಲ್ಲಿ ಬಿಜೆಪಿ ವಿಚಾರ ಧಾರೆಗಳಿಗೆ ಹೊಂದಾಣಿಕೆಯಾಗುವ ಅಭ್ಯರ್ಥಿಗಳು ಯಾರೂ ಟಿಕೆಟ್ ಗಾಗಿ ಮುಂದು ಬರಲಿಲ್ಲ. ಹೀಗಾಗಿ ಅಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಕನಿಷ್ಠ 25 ವಾರ್ಡುಗಳಲ್ಲಿ ಗೆಲ್ಲಲಿದೆ
ಇದೇ ವೇಳೆ, ಈ ಬಾರಿ ಸರ್ವಸಮ್ಮತವಾಗಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪಕ್ಷದಲ್ಲಿ ಯಾವುದೇ ಭಿನ್ನಮತ, ಗುಂಪುಗಾರಿಕೆ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಕನಿಷ್ಠ 25 ಅಭ್ಯರ್ಥಿಗಳು ಜಯಗಳಿಸಲಿದ್ದು, ಬಿಜೆಪಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಆರ್. ಎಸ್. ಪಾಟೀಲ ಕೂಚಬಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.