BJP Dissidence: ಹಿಟ್ಲರ್ ಸಂಸ್ಕತಿ ತರಲು ಹೊರಟಿರುವ ವ್ಯಕ್ತಿಯಿಂದ ಬಿಜೆಪಿ ಟಿಕೆಟ್ ತಪ್ಪಿದೆ- ಯತ್ನಾಳ ಹೆಸರು ಹೇಳದೇ ವಾಗ್ದಾಳಿ ನಡೆಸಿದ ಬಂಡಾಯ ಅಭ್ಯರ್ಥಿ ರವಿಕಾಂತ ಬಗಲಿ

ವಿಜಯಪುರ: ಬಿಜೆಪಿಯಲ್ಲಿ ಹಿಟ್ಲರ್ ಸಂಸ್ಕೃತಿ ತರಲು ಹೊರಟಿರುವ ವ್ಯಕ್ತಿಯಿಂದಾಗಿ ತಮಗೆ ಬಿಜೆಪಿ ಟಿಕೆಟ್ ತಪ್ಪಿದ್ದು, ಬಿಜೆಪಿಗೆ ರಾಜೀನಾಮೆ ನೀಡಿ ಜನತಾ ನ್ಯಾಯಾಲಯದ ಮೊರೆ ಹೋಗುತ್ತಿರುವುದಾಗಿ ಬಿಜೆಪಿ ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ರವಿಕಾಂತ ಬಗಲಿ ಹೇಳಿದ್ದಾರೆ.

ವಿಜಯಪುರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರು ಹೇಳದೆ ತಮಗೆ ಟಿಕೆಟ್ ತಪ್ಪಲು ಹಿಟ್ಲರ್ ಮನೋಭಾವದ ವ್ಯಕ್ತಿಯೇ ಕಾರಣ ಎಂದು ವಾಗ್ದಾಳಿ ನಡೆಸಿದರು.

ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 22 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅವರು, ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾಗಿದೆ.  ಆದರೆ, ಅದು ಪಕ್ಷದಿಂದ ಆಗಿಲ್ಲ.  ಬದಲಾಗಿ ಓರ್ವ ವ್ಯಕ್ತಿಯಿಂದ ಆಗಿದೆ.  ನಾನು ಬಿಜೆಪಿಯಲ್ಲಿ ಕಳೆದ 30 ವರ್ಷಗಳಲ್ಲಿ ನಾನಾ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ.  ಭೂತ ಮಟ್ಟದ ಅಧ್ಯಕ್ಷ, ನಗರ ಮಂಡಲ ಅಧ್ಯಕ್ಷ, ಜಿಲ್ಲಾ ಮಟ್ಟದಲ್ಲಿ ನಾನಾ ಹುದ್ದೆಗಳಲ್ಲಿ ದುಡಿದು ಎರಡು ಅವದಿಗೆ ವಿಜಯಪುರ ನಗರಸಭೆ ಸದಸ್ಯನಾಗಿ ಇದೇ ವಾರ್ಡಿನಿಂದ ಆಯ್ಕೆಯಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ವಿಜಯಪುರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಬಂಡಾಯ ಅಭ್ಯರ್ಥಿ ರವಿಕಾಂತ ಬಗಲಿ

ವಾರ್ಡ್ ಸಂಖ್ಯೆ 22 ರಲ್ಲಿ ಸ್ಪರ್ಧಿಸಲು ಕನಕದಾಸ ಬಡಾವಣೆ, ಜಲನಗರ, ಕೆ. ಕೆ. ಕಾಲನಿ, ಎಸ್. ಆರ್. ಕಾಲನಿ, ವಿವೇಕನಗರ, ನವರಸಪುರ ಎಕ್ಸಟೆನ್ಶನ್ ಮತ್ತು ಗಿರೀಶ ಕಾಲನಿಗಳಲ್ಲಿ ಬರುವ ಸಾಮಾನ್ಯ ಕಾರ್ಯಕರ್ತನಿಗೆ ಕೊಡಬೇಕು ಎಂದು ವಿನಂತಿಸಿದ್ದೆ.  ಆದರೆ, 23ನೇ ವಾರ್ಡಿನ ವ್ಯಕ್ತಿ ಪ್ರೇಮಾನಂದ ಬಿರಾದಾರ ಅವರನ್ನು 22ನೇ ವಾರ್ಡ್ ಟಿಕೆಟ್ ಕೊಟ್ಟು ನಿಲ್ಲಿಸಿದ್ದಾರೆ.  ಈ ವ್ಯಕ್ತಿಯ ಹಿಂದೆ ಬೆನ್ನು ಹತ್ತಿರುವ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ.  ಪ್ರೇಮಾನಂದ ಬಿರಾದರಾ ಅವರ ಅಣ್ಣ ಜೆಡಿಎಸ್ ನಲ್ಲಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ ಎಂದು ರವಿಕಾಂತ ಬಗಲಿ ಆರೋಪಿಸಿದರು.

ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ.  ನಾನು ಹಾಗೂ ನನ್ನ ವಾರ್ಡಿನಲ್ಲಿ ಬರುವ 10 ಬೂತ್ ಸಮಿತಿ ಅಧ್ಯಕ್ಷರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದೇವೆ.  ಟಿಕೆಟ್ ಕೈತಪ್ಪಿದ್ದರಿಂದ ಮನಸ್ಸಿಗೆ ನೋವಾಗಿದೆ.  ನಾನು ಬಿಜೆಪಿ ವಿರುದ್ಧ ಬಂಡಾಯ ಎದ್ದಿಲ್ಲ.  ಬದಲಾಗಿ ನನಗೆ ಟಿಕೆಟ್ ತಪ್ಪಲು ಕಾರಣನಾದ ವ್ಯಕ್ತಿಯ ವಿರುದ್ಧ ಬಂಡಾಯ ಎದ್ದಿದ್ದೇನೆ.  ಆತನ ಹಿಟ್ಲರ್ ತರಲು ಹೊರಟಿರುವ ವ್ಯಕ್ತಿಯಿಂದ ನನಗೆ ಕೈತಪ್ಪಿದೆ ಎಂದು ಅವರು ನೋವು ತೋಡಿಕೊಂಡರು.

ಸ್ವಾಭಿಮಾನದ ಪ್ರಶ್ನೆ ಇಟ್ಟುಕೊಂಡು ಸ್ಪರ್ಧಿಸಿದ್ದೇನೆ

ಈ ಹಿಂದೆ ತಮಗೆ ವಿಧಾನ ಪರಿಷತ ಟಿಕೆಟ್ ತಪ್ಪಿದಾಗ ಅವರು ವಿಜಯಪುರ ಜಿಲ್ಲೆಯ ಗೌರವ, ಸ್ವಾಭಿಮಾನದ ಪ್ರಶ್ನೆ ಎತ್ತಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಅವರು ಸ್ಪರ್ಧಿಸಿದ್ದರು ಎಂದು ಯತ್ನಾಳ ಹೆಸರು ಹೇಳದೇ ಕಿಡಿ ಕಾರಿದ ಅವರು, ಈಗ ನಾನೂ ಕೂಡ ಸ್ವಾಭಿಮಾನಕ್ಕಾಗಿ ಸ್ಪರ್ಧೆ ಮಾಡುತ್ತಿದ್ದೇನೆ.  ಈ ಮೂಲಕ ಜನತಾ ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ.  ಮನೆ, ಮನೆ ಪ್ರಚಾರ ನಡೆಸಿದ್ದೇನೆ ಎಂದು ಅವರು ತಿಳಿಸಿದರು.

ಪ್ರೇಮಾನಂದ ಬಿರಾದಾರ ಸ್ವಯಂ ಘೋಷಿತ ಅಭ್ಯರ್ಥಿ

ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಐದಾರು ಜನ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಸಿಕ್ಕಿದೆ.  ಉಳಿದ ಟಿಕೆಟ್ ಗಳನ್ನು ಹಿಟ್ಲರ್ ಸಂಸ್ಕೃತಿ ವ್ಯಕ್ತಿಯ ಹಿಂಬಾಲಕರಿಗೆ ನೀಡಲಾಗಿದೆ.  ಪ್ರೇಮಾನಂದ ಬಿರಾದಾರ ಸ್ವಯಂ ಘೋಷಿತ ಅಭ್ಯರ್ಥಿಯಾಗಿದ್ದಾರೆ ಎಂದು ವಿಜಯಪುರ ನಗರಸಭೆಯ ಬಿಜೆಪಿ ಮಾಜಿ ಸದಸ್ಯರೂ ಆಗಿರುವ ರವಿಕಾಂತ ಬಗಲಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಲನಗರ ಬೂತ ಅಧ್ಯಕ್ಷ ಅಭಿಷೇಕ ಹಿರೇಮಠ, ದೇವೇಂದ್ರ, ಸಿದ್ದು ಕುಸೂರ, ಮಲ್ಲಿಕಾರ್ಜುನ ಕೆಂಗನಾಳ, ಅಕ್ಷಯಕುಮಾರ ಕಾಪಸೆ, ರವೀಂದ್ರ, ಮನೋಜ, ಸಂಗು ಮೆಂಡೆಗಾರ, ಮಲ್ಲಿಕಾರ್ಜುನ ವಾರಣಾಸಿ, ಶ್ರೀಕಾಂತ ಮುತ್ತಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌