ವಿಜಯಪುರ: ಯತ್ನಾಳ ಬಿಜೆಪಿ ಲೀಡರ್ ಅಲ್ಲ. ಅವರ ಮಾತಿಗೆ ಮಹತ್ವ ಕೊಡುವ ಅಗತ್ಯವೂ ಇಲ್ಲ. ಅವರು ರಾಜ್ಯ ಅಥವಾ ರಾಷ್ಟ್ರೀಯ ಕೋರ್ ಕಮಿಟಿಯಲ್ಲಿ ಇಲ್ಲ. ಅವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ಅವರಿಗೆ ಹೇಳಿದರೂ ಸುಧಾರಿಸುತ್ತಿಲ್ಲ ಎಂದು ರವಿವಾರವಷ್ಟೇ ಹುಬ್ಬಳ್ಳಿಯಲ್ಲಿ ಹೇಳಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಅವರ ಮಾತಿಗೆ ಉಲ್ಟಾ ಎಂಬಂತೆ ವಿಜಯಪುರ ಜಿಲ್ಲೆಯ ಬಿಜೆಪಿಯಲ್ಲಿ ವಿದ್ಯಮಾನಗಳು ನಡೆದಿವೆ.
ವಿಜಯಪುರ ಮಹಾನಗರ ಪಾಲಿಕೆಗೆ ಅ. 28 ರಂದು ಚುನಾವಣೆ ನಡೆಯುತ್ತಿದ್ದು, ಒಟ್ಟು 35ರಲ್ಲಿ 30 ವಾರ್ಡುಗಳು ವಿಜಯಪುರ ನಗರ ಮತ್ತು ಐದು ವಾರ್ಡುಗಳು ನಾಗಠಾಣ(ಮೀ) ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಅರುಣಸಿಂಗ್ ಹೇಳಿಕೆಯ ನಡುವೆಯೂ ಬಿಜೆಪಿ ಘೋಷಣೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬೆಂಬಲಿಗರಿಗೆ ಬಹುತೇಕ ಟಿಕೇಟುಗಳು ಸಿಕ್ಕಿವೆ.
ಇದು ಯತ್ನಾಳ ಅವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಯತ್ನಾಳ ಅವರ ಕಟ್ಟಾ ವಿರೋಧಿಯಾಗಿರುವ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ ಬೆಂಬಲಿಗರಿಗೆ ಕೇವಲ ಒಂದೆರಡು ಹಾಗೂ ಸಂಸದ ರಮೇಶ ಜಿಗಜಿಣಗಿ ಹಾಗೂ ಸಚಿವ ಗೋವಿಂದ ಕಾರಜೋಳ ಅವರ ಬೆಂಬಲಿಗರಿಗೆ ಮೂರ್ನಾಲ್ಕು ಟಿಕೆಟ್ ಗಳು ಮಾತ್ರ ಸಿಕ್ಕಿವೆ.
ಯತ್ನಾಳ ಬೆಂಬಲಿಗರಲ್ಲಿಯೇ ಅತೀ ಹೆಚ್ಚು ಆಕಾಂಕ್ಷಿಗಳಿದ್ದರೂ ಅದೆಲ್ಲವನ್ನು ಸಂಭಾಳಿಸಿ ಯತ್ನಾಳ ಸುಮಾರು 24ಕ್ಕೂ ಹೆಚ್ಚು ಬೆಂಬಲಿಗರಿಗೆ ಟಿಕೆಟ್ ಕೊಡಿಸಿದ್ದಾರೆ. ಮೂರ್ನಾಲ್ಕು ಅಭ್ಯರ್ಥಿಗಳನ್ನು ಸರ್ವಸಮ್ಮತವಾಗಿ ಆಯ್ಕೆ ಮಾಡಿ ಟಿಕೆಟ್ ನೀಡಲಾಗಿದೆ. ಈ ಮಧ್ಯೆ, ಸಚಿವ ಬಿ. ಶ್ರೀರಾಮುಲು, ಕೆ. ಎಸ್. ಈಶ್ವರಪ್ಪ, ಶಾಸಕ ಪಿ. ರಾಜೀವ ಬೆಂಬಲಿಗರಾಗಿರುವ ತಲಾ ಒಬ್ಬರಿಗೆ ಟಿಕೆಟ್ ನೀಡಲಾಗಿದೆ ಎಂಬ ಮಾತುಗಳೂ ಕೇಳಿ ಬಂದಿವೆ.
ಒಂದು ಕಾಲದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬಣದಲ್ಲಿ ಗುರುತಿಸಿಕೊಂಡಿದ್ದ ನಾಲ್ಕಾರು ಜನರು ಈಗ ಟಿಕೆಟ್ ಆಸೆಯಿಂದ ಮತ್ತು ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಯತ್ನಾಳ ಅವರಿಗೆ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿ ಯತ್ನಾಳ ಬಣ ಸೇರಿಕೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ಬಸವ ನಾಡು ವೆಬ್ ಗೆ ಮಾಹಿತಿ ನೀಡಿವೆ.
ಯಾರೇನೇ ಹೇಳಿದರೂ ಯತ್ನಾಳ ಖದರ್ ಮತ್ತು ನೇರಾನೇರ ನುಡಿಗಳಿಗೆ ಬಿಜೆಪಿ ಹೈಕಮಾಂಡ್ ಕೂಡ ಕಣ್ಣುಮುಚ್ಚಿ ಕುಳಿತಂತಾಗಿದ್ದು, ಈಗ ಯತ್ನಾಳ ವಿಜಯಪುರ ನಗರದಲ್ಲಿ ಸಧ್ಯದ ಮಟ್ಟಿಗೆ ಸ್ಟ್ರಾಂಗ್ ಎನಿಸಿದ್ದಾರೆ. ಆದರೆ, ಇದೇ ಉತ್ಸಾಹ ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಯವರೆಗೆ ಹೇಗಿರುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.