BJP Tense: ಬಂಡಾಯಕ್ಕೆ ಬೆದರಿದ ಬಿಜೆಪಿ- ಆಭ್ಯರ್ಥಿಗಳ ಪಟ್ಟಿ ಪ್ರಕಟಿಸದೆ ಗುಪ್ತವಾಗಿ ಬಿ ಫಾರಂ ವಿತರಣೆ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಂತಿಮ ದಿನ ಕೊನೆ ಕ್ಷಣದವರೆಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸದೇ ಬಂಡಾಯಕ್ಕೆ ಬೆದರಿದಂತಾಗಿದೆ.

ಕಾಂಗ್ರೆಸ್ ನಿನ್ನೆ ಮಧ್ಯರಾತ್ರಿಯ ವೇಳೆಗೆ ಎಲ್ಲ 35 ವಾರ್ಡುಗಳಿಗೆ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ.  ಆದರೆ, ನಾಮಪತ್ರ ಸಲ್ಲಿಕೆಗೆ ಕೊನೆಯ ಕ್ಷಣದವರೆಗೂ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿಲ್ಲ.  ಮಾತ್ರವಲ್ಲ ರವಿವಾರ ಮಧ್ಯರಾತ್ರಿಯಿಂದಲೇ ಟಿಕೆಟ್ ನೀಡಲಾದ ಅಭ್ಯರ್ಥಿಗಳನ್ನು ಕರೆದು ಗುಪ್ತವಾಗಿ ಬಿ ಫಾರಂ ವಿತರಿಸಿದೆ.

ಬಿ ಫಾರಂ ಪಡೆದ ಬಿಜೆಪಿ ಅಭ್ಯರ್ಥಿಗಳು ತಮಗೆ ಟಿಕೆಟ್ ಸಿಕ್ಕಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿ ಫಾರಂ ಪಡೆಯುತ್ತಿರುವ ಫೋಟೋಗಳನ್ನು ಹಾಕಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.  ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆ್ಚಾಗಿದೆ.  ಮಾತ್ರವಲ್ಲ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಸಂಸದ ರಮೇಶ ಜಿಗಜಿಣಗಿ, ಸಚಿವ ಗೋವಿಂದ ಕಾರಜೋಳ ಅವರ ಗುಂಪುಗಳ ಮಧ್ಯೆ ತಂತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸುವ ಕುರಿತು ಸಿಕ್ಕಾಪಟ್ಟೆ ಪೈಪೋಟಿ ಏರ್ಪಟ್ಟಿದೆ.  ರವಿವಾರ ನಗರದಲ್ಲಿ ವೀಕ್ಷಕರಾಗಿ ಆಗಮಿಸಿದ್ದ ಬೆಳಗಾವಿ ಜಿಲ್ಲೆಯ ಶಾಸಕ ಪಿ. ರಾಜೀವ ಮತ್ತು ಅಭಯಕುಮಾರ ಪಾಟೀಲ ಅವರೊಂದಿಗೆ ಟಿಕೆಟ್ ಹಂಚಿಕೆ ಬಗ್ಗೆ ವಿಜಯಪುರ ಜಿಲ್ಲೆಯ ಜಿಲ್ಲೆಯ ಬಿಜೆಪಿ ನಾಯಕರು ತೀವ್ರ ಮಾತಿನಕ ಚಕಮಕಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಪೈಪೋಟಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ವೀಕ್ಷಕರಾಗಲಿ, ಜಿಲ್ಲಾಧ್ಯಕ್ಷರಾಗಲಿ 35 ವಾರ್ಡುಗಳ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆಯ ಪಟ್ಟಿಯನ್ನು ಪ್ರಕಟಿಸದೇ ಒಬ್ಬೊಬ್ಬ ಅಭ್ಯರ್ಥಿಯನ್ನು ಕರೆದು ಟಿಕೆಟ್ ಹಂಚಿಕೆ ಮಾಡಿರುವುದೂ ಕೂಡ ಬಿಜೆಪಿಯಲ್ಲಿ ಇರುವ ಆಂತರಿಕ ಬೇಗುದಿಗೆ ಸಾಕ್ಷಿಯಾಗಿದೆ ಎಂದೇ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಬಹುಷಃ ನಾಮಪತ್ರ ಸಲ್ಲಿಕೆಯ ಸಮಯ ಮುಗಿದ ನಂತರ ಎಲ್ಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

Leave a Reply

ಹೊಸ ಪೋಸ್ಟ್‌