ಬೆಂಗಳೂರು: ವಿಜಯಪುರ ವಿಮಾನ ನಿಲ್ದಾಣಕ್ಕೆ 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದಕ್ಕೆ ನೀರಾವರಿ ಸಚಿವ ಗೋವಿಂದ ಕಾರಜೋಳ ಅತ್ಯಂತ ಹರ್ಷ ವ್ಯಕ್ತಪಡಿಸಿದ್ದಾರೆ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಐತಿಹಾಸಿಕ ನಿರ್ಣಯಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯಪುರದಲ್ಲಿದಲ್ಲಿ ಎಟಿಆರ್-72 ಮಾದರಿ ವಿಮಾನ ಹಾರಾಟಕ್ಕಾಗಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣವನ್ನು ಏರ್ ಬಸ್-320 ಮಾದರಿಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲು ರೂ. 347.92 ಕೋ. (ಜಿ.ಎಸ್.ಟಿ. ಸೇರಿ) ಪರಿಷ್ಕೃತ ಅಂದಾಜು ಮೊತ್ತಕ್ಕೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ವಿಜಯಪುರ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆರ್ಥಿಕ, ವಾಣಿಜ್ಯ, ಪ್ರವಾಸೋದ್ಯಮ ಹಾಗೂ ಕೈಗಾರಿಕೆ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ವಿಜಯಪುರ ನಗರದಲ್ಲಿ ಗ್ರೀನ್ ಫೀಲ್ಡ್ ದೇಶೀಯ ವಿಮಾನ ನಿಲ್ದಾಣವನ್ನು ಎಟಿಆರ್-72 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಒಟ್ಟು ರೂ. 220 ಕೋ. ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ 14.12.2020ರಂದು ಸರಕಾರಿ ಆದೇಶ ಹೊರಡಿಸಿತ್ತು ಎಂದು ಅವರು ತಿಳಿಸಿದ್ದಾರೆ.
8.9.2022ರಂದು ಬೆಂಗಳೂರಿನ ಸಂಪರ್ಕ ಮತ್ತು ಕಟ್ಟಡಗಳು(ದ) ಮುಖ್ಯ ಅಭಿಯಂತರರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ತಾಂತ್ರಿಕ ಸಲಹಾ ಮತ್ತು ಅಂದಾಜುಪಟ್ಟಿ ಪರಿಶೀಲನಾ ಸಮಿತಿಯು ಧಾರವಾಡ ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡ (ಉತ್ತರ) ವಲಯದ ಮುಖ್ಯ ಅಭಿಯಂತರು ಸಲ್ಲಿಸಿರುವ ರೂ. 120 ಕೋ. ಹೆಚ್ಚುವರಿ ಅಂದಾಜು ಪಟ್ಟಿಯನ್ನು ಪರಿಶೀಲಿಸಿತು. ಹೆಚ್ಚುವರಿಯಾಗಿ ಮಂಡಿಸಿರುವ ರೂ. 120 ಕೋ. ಮೊತ್ತದ ಅಂಶಗಳು ಪ್ಯಾಕೇಜ್-1ರಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ರನ್-ವೇ ಮತ್ತು ಏಪ್ರಾನ್ ಗೆ ಸಂಬಂಧಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಕಾಮಗಾರಿಗಳನ್ನು ಪ್ಯಾಕೇಜ್-1ರ ಗುತ್ತಿಗೆದಾರರಿಗೆ ನೀಡುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಸುದೀರ್ಘ ಚರ್ಚೆಯ ನಂತರ ಪರಿಷ್ಕೃತ ಅಂದಾಜನ್ನು ಸರಕಾರದ ಅನುಮೋದನೆಯನ್ನು ಪಡೆಯಲು ಸಮಿತಿಯು ಸಹಮತಿ ನೀಡಿತ್ತು ಎಂದು ಸಚಿವರು ತಿಳಿಸಿದ್ದಾರೆ.
ಪ್ರಸ್ತುತ ನಿರ್ಮಾಣ ಹಂತದಲ್ಲಿಯೇ ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72ರ ಮಾದರಿಯ ವಿಮಾನಗಳ ಹಾರಾಟದಿಂದ ಎ-320 ವಿಮಾನಗಳ ಹಾರಾಟದ ಸಾಮರ್ಥ್ಯದ ಹಂತಕ್ಕೆ ಒಂದೇ ಬಾರಿಗೆ ಉನ್ನತೀಕರಿಸಿ ನಿರ್ಮಿಸಿದರೆ ಮುಂದೆ ಆಗಬಹುದಾದ ಹೆಚ್ಚುವರಿ ವೆಚ್ಚವನ್ನು ಉಳಿಸಬಹುದಾಗಿದೆ. ಅಲ್ಲದೇ, ಏರ್ ಬಸ್-320 ವಿಮಾನಯಾನಕ್ಕೆ ಅನುಕೂಲವಾಗುವಂತೆ ವಿಮಾನ ನಿಲ್ದಾಣ ಪಾದಚಾರಿ ಮಾರ್ಗಗಳನ್ನು(Airfield Pavements) ನಿರ್ಮಿಸಿದರೆ ಮುಂದಿನ 30 ವರ್ಷಗಳವರೆಗೆ ಯಾವುದೇ ವಿಸ್ತರಣೆಯ ಅಗತ್ಯವಿರುವುದಿಲ್ಲ. ಜೊತೊಗೆ ಎಲ್ಲಾ ಮಾದರಿಯ ವಿಮಾನಗಳ ಕಾರ್ಯಾಚರಣೆಯನ್ನು ಈ ವಿಮಾನ ನಿಲ್ದಾಣದಿಂದ ಕೈಗೊಳ್ಳಬಹುದಾಗಿರುತ್ತದೆ. ಮುಂದಿನ ದಿನಗಳಲ್ಲಿ ವಿಮಾನಯಾನ ಸಾಂದ್ರತೆ ಹೆಚ್ಚಾಗುವ ಸಂಭವವಿದ್ದು, ಆಗ ಮೇಲ್ದರ್ಜೆಗೇರಿಸಲು ಕ್ರಮಕೈಗೊಂಡಲ್ಲಿ ರನ್-ವೇ/ಏಪ್ರಾನ್/ಟ್ಯಾಕ್ಸಿ-ವೇ/ಐಸೋಲೇಷನ್-ಬೇ ವಿಸ್ತರಣೆ ಕಾರ್ಯಕಷ್ಟವಾಗುತ್ತದೆ ಹಾಗೂ ವಿಮಾನಗಳ ಕಾರ್ಯಾಚರಣೆಗೆ ಅಡಚಣೆಯಾಗುತ್ತದೆ ಎಂದು ತಾಂತ್ರಿಕ ಅಭಿಪ್ರಾಯ ಗಮನದಲ್ಲಿರಿಸಿಕೊಂಡು ಈ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.