Health Camp: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಿ- ಡಾ. ಲಕ್ಷ್ಮಿ ಸಂಗೊಳ್ಳಿ

ವಿಜಯಪುರ: ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕು ಎಂದು ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಕೇಂದ್ರದ ಸ್ತ್ರಿರೋಗ ತಜ್ಞೆ ಡಾ. ಲಕ್ಷ್ಮಿ ಸಂಗೊಳ್ಳಿ ಹೇಳಿದರು. 

ವಿಜಯಪುರ ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ವೇದಿಕೆ ಹಾಗೂ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.

ಎ. ಎಸ್. ಪಿ. ಕಾಮರ್ಸ್ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು

ಉತ್ತಮ ಆರೋಗ್ಯವಿದ್ದಾಗ ಕಲಿಕೆ ಪ್ರಗತಿಯಾಗುತ್ತದೆ.  ಗುಣಮಟ್ಟದ ಆಹಾರ, ವ್ಯಾಯಾಮ, ವಿಶ್ರಾಂತಿ ಇವುಗಳನ್ನು ನಿಯಮಿತವಾಗಿ ಪಾಲಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ.  ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಡಾ. ಲಕ್ಷ್ಮಿ  ಸಂಗೊಳ್ಳಿ ಹೇಳಿದರು.

ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಮಂಜುನಾಥ ಸಾವಂತ ಮಾತನಾಡಿ. ಇತ್ತಿಚೆಗೆ ಯುವಕರಲ್ಲಿ ಧೂಮಪಾನ ಹಾಗೂ ಮಧ್ಯಪಾನ ಮಾಡುವುದು ಹೆಚ್ಚಾಗುತ್ತಿವೆ.  ಜೊತೆಗೆ ಯುವತಿಯರೂ ಕೂಡ ಜಂಕ್ ಫುಡ್, ಪಾಸ್ಟ್‍ ಫುಡ್ ಹಾಗೂ ತಂಪು ಪಾನಿಯಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದಾರೆ.  ಇದು ಆರೋಗ್ಯಕ್ಕೆ ಹಾನಿಕರ.  ವಿಟಾಮಿನ್ ಇರುವ ಧಾನ್ಯ ಮತ್ತು ತರಕಾರಿಗಳನ್ನು ಸೇವಿಸುವುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಮಹಿಳಾ ವೇದಿಕೆ ಮುಖ್ಯಸ್ಥೆ ಡಾ. ಮಹಾನಂದಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಯ ವ್ಯವಸ್ಥೆ ಮಾಡಲಾಗುತ್ತಿದೆ.  ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರೊ. ಪಿ. ಎಸ್. ತೋಳನೂರ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಐ. ಬಿ. ಚಿಪ್ಪಲಕಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಿ. ಎಲ್. ಡಿ. ಇ ಸಂಸ್ಥೆಯ ಬಿ. ಎಂ. ಪಾಟೀಲ ವೈದ್ಯಕೀಯ ಆಸ್ಪತ್ರೆಯ ಡಾ. ರಜನಿ ದುರ್ಗನ್ನವರ, ಆಸ್ಪತ್ರೆಯ ಶುಶ್ರೂಷಕರು, ತಂತ್ರಜ್ಞರು ವಿದ್ಯಾರ್ಥಿಗಳ ಆರೋಗ್ಯವನ್ನು ತಪಾಸಣೆ ಮಾಡಿದರು.  ಈ ಶಿಬಿರದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯದ ಸಿಬ್ಬಂದಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಪ್ರೊ. ವಿಜಯಕುಮಾರ ತಳವಾರ, ಡಾ. ಭಕ್ತಿ ಮಹೀಂದ್ರಕರ, ಪ್ರೊ. ಐಶ್ವರ್ಯ ಮಿರಜಕರ ಹಾಗೂ ಬೋಧಕ, ಬೋಧಕರ ಹೊರತಾದ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌