ವಿಜಯಪುರ: ವಿಜಯಪುರ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣನವರ ಹೆಸರಿಡುವ ನಿರ್ಧಾರ ಅತ್ಯಂತ ಸ್ವಾಗತಾರ್ಹ ಎಂದು ಅಖಿಲ ಭಾರತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಮಾಜ ಸುಧಾರಕ ಸಮಾಜದಲ್ಲಿ ಸಮಾನತೆಯನ್ನು ತರಲು ಹೋರಾಡಿದ ವಿಶ್ವಗುರು ಬಸವಣ್ಣನವರ ಹೆಸರನ್ನು ನಿರ್ಮಾಣ ಹಂತದಲ್ಲಿರುವ ವಿಜಯಪುರದ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಪ್ರಸ್ತಾವನೆಯನ್ನು ಅನುಮೋದಿಸಿರುವ ಕರ್ನಾಟಕ ರಾಜ್ಯ ಸರಕಾರಕ್ಕೆ ಸಮಸ್ತ ಬಸವಾಭಿಮಾನಿಗಳ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಈ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಹಾಗೂ ಎಲ್ಲ ಸಚಿವರು ಶಾಸಕರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಿದ ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ಬಸವ ನಾಡಿನ ಬಸವಾಭಿಮಾನಿಗಳಿಗೆ ಸಮಾನತೆಯ ಹರಿಕಾರರಾದ ಬಸವಣ್ಣನವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಟ್ಟಿರುವುದು ಇದೊಂದು ಐತಿಹಾಸಿಕ ನಿರ್ಧಾರ ಎಂದು ಅವರು ಬಣ್ಣಿಸಿದ್ದಾರೆ.
ನಾವು ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವವರಲ್ಲ ಒಳ್ಳೇ ಕೆಲಸ ಯಾರೇ ಮಾಡಿದರೂ ಅದನ್ನು ಅಭಿನಂದಿಸುವುದು ಗೌರವಿಸುವುದು ನಾಗರಿಕ ಸಮಾಜದಲ್ಲಿರುವ ನಮ್ಮೆಲ್ಲರ ನೈತಿಕ ಜವಾಬ್ದಾರಿ. ವಿಮಾನ ನಿಲ್ದಾಣದಿಂದಾಗಿ ಪ್ರವಾಸೋದ್ಯಮ, ತೋಟಗಾರಿಕೆಗೆ ಉತ್ತೇಜನ ದೊರೆತು ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯ ಜನರಿಗೆ ಅದು ವರದಾನವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ನಿರ್ಧಾರಕ್ಕೆ ಕಾರಣರಾಗಿರುವ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಈ ಮಹತ್ಕಾರ್ಯಕ್ಕೆ ಶ್ರಮಿಸಿದ ಸಕಲರನ್ನು ಅಭಿನಂದಿಸುವದಾಗಿ ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.