Deepavali Celebration: ಬಸವ ನಾಡಿನಲ್ಲಿ ದೀಪಾವಳಿ ಸಂಭ್ರಮ- ಪಟಾಕಿಗಳ ಮಾರಾಟ, ಖರೀದಿ ಜೋರು

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ, ಸಡಗರ ಮನೆ ಮಾಡಿದೆ.  ಬೆಳಿಗ್ಗೆಯಿಂದಲೇ ಹಿಂದೂಗಳು ಪವಿತ್ರ ದೀಪಾವಳಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದು, ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದಾರೆ.

ಈ ಮಧ್ಯೆ, ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಸಾಕಷ್ಟು ಕಡಿಮೆಯಾಗಿದ್ದ ಪಟಾಕಿಗಳ ಮಾರಾಟ ಮತ್ತು ಖರೀದಿ ಈ ಬಾರಿ ಮತ್ತೆ ಗತವೈಭವಕ್ಕೆ ಮರಳಿದೆ.  ವಿಜಯಪುರ ನಗರದ ವಿಠ್ಠಲ ಮಂದಿರ ರಸ್ತೆಯಲ್ಲಿರುವ ಪಟಾಕಿ ಅಂಗಡಿಗಳಲ್ಲಿ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ.

ಕೊರೊನಾ ಸೋಂಕಿನ ಭಯದಿಂದ ಕಳೆದ ಎರಡು ವರ್ಷಗಳಿಂದ ಜನರು ಪಟಾಕಿಗಳ ಖರೀದಿಗೆ ಹಿಂದೇಟು ಹಾಕಿದ್ದರು.  ಮೇಲಾಗಿ ಸರಕಾರಗಳೂ ಕೂಡ ಪಟಾಕಿ ಸಿಡಿಸಲು ತರಹೇವಾರಿ ಷರತ್ತು ಹಾಕಿತ್ತು. ಹೀಗಾಗಿ ಕಳೆದ ವರ್ಷ ಪಟಾಕಿ ಮಾರಾಟಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರು.  ಆದರೆ, ಈ ಬಾರಿ ಕೊರೊನಾಗೆ ಸಂಬಂಧಿಸಿದ ಬಹುತೇಕ ನಿರ್ಬಂಧಗಳನ್ನು ಹಿಂಪಡೆಯಲಾಗಿದೆ.

ಹೀಗಾಗಿ ಪಟಾಕಿ ಖರೀದಿಸಲು ಸಾರ್ವಜನಿಕರು ನಾನಾ ಪಟಾಕಿ ಅಂಗಡಿಗಳಿಗೆ ಆಗಮಿಸುತ್ತಿದ್ದಾರೆ.  ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪಟಾಕಿಗಳ ಮಾರಾಟ ತಕ್ಕಮಟ್ಟಿಗೆ ಉತ್ತಮವಾಗಿದೆ.  ಪಟಾಕಿ ಬೆಲೆಗಳೂ ಕೂಡ ಅಷ್ಟೋಂದು ಹೆಚ್ಚಾಗಿಲ್ಲ.  ಜನರು ತರಹೇವಾರಿ ಮಾದರಿಯ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ ಎಂದು ಪಟಾಕಿ ಅಂಗಡಿಯ ಮಾಲಿಕ ಶರಣು ಹಳಕಟ್ಟಿ ಬಸವ ನಾಡು ವೆಬ್ ಗೆ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ಕಳೆದ ಎರಡು ವರ್ಷಗಳಿಂದ ಆರ್ಥಿಕವಾಗಿಯೂ ಸಾಕಷ್ಟು ಸಂಕಷ್ಟ ಎದುರಿಸಿದ್ದ ನಾನಾ ವ್ಯಾಪಾರಿಗಳು ಈ ಬಾರಿ ಬೆಳಕಿನ ಹಬ್ಬದ ಆಚರಣೆಯನ್ನು ಹಿಂದಿನ ದಿನಗಳಂತೆ ಈಗ ಮುಂದುವರೆಸಿದ್ದಾರೆ.  ನಾನಾ ಬಣ್ಣ ಮತ್ತು ಗಾತ್ರದ ಸುರಸುರಬತ್ತಿ, ಚಕ್ರ, ಬತ್ತಿ, ಬಾಣ, ಮದ್ದಿನ ಕುಳ್ಳಿಗಳು, ಪಟಾಕಿಗಳ ಸರಗಳು, ಆಟಂ ಬಾಂಬ್ ಗಳು ಸೇರಿದಂತೆ ತಮಗಿಷ್ಟವಾದ ಸಿಡಿಮದ್ದುಗಳನ್ನು ಖರೀದಿಸುತ್ತಿದ್ದಾರೆ.  ಈ ಬಾರಿ ದೀಪಾವಳಿ ಈ ಹಿಂದಿನಂತೆ ಕಳೆಗಟ್ಟಿದೆ.  ಹಬ್ಬದ ಸಂಭ್ರಮ ಹೆಚ್ಚಾಗಿದೆ.  ತಮ್ಮ ವ್ಯಾಪಾರಗಳು ನಿರೀಕ್ಷೆಗೆ ತಕ್ಕಂತೆ ನಡೆಯುತ್ತಿಲ್ಲ ಎಂದು ವಿಜಯಪುರ ನಗರದ ಆಶ್ರಮ ರಸ್ತೆಯ ಆನಂದ ಹಾರ್ಡವೇರ್ ಮತ್ತು ಪೇಂಟ್ಸ್ ಅಂಗಡಿಯ ಮಾಲಿಕ ಆನಂದ ಮಠಪತಿ ಬಸವ ನಾಡು ವೆಬ್ ಗೆ ಮಾಹಿತಿ ನೀಡಿದ್ದಾರೆ.

ಒಟ್ಟಾರೆ, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದೀಪಾವಳಿ ಸಂಭ್ರಮ ಮಾತ್ರ ಜೋರಾಗಿದ್ದು, ಬಸವ ನಾಡಿನ ಜತೆ ಸಂತಸದಿಂದ ಹೊರ ಆರ್ಥಿಕ ವರ್ಷವನ್ನು ಭರ್ಜರಿಯಾಗಿಯೇ ಸ್ವಾಗತಿಸುತ್ತಿದ್ದಾರೆ.

Leave a Reply

ಹೊಸ ಪೋಸ್ಟ್‌