ವಿಜಯಪುರ: ದೇಶದಲ್ಲಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿಯವರು ಎಂಟು ವರ್ಷಗಳಲ್ಲಿ 16 ಕೋಟಿ ಉದ್ಯೋಗ ಸೃಷ್ಠಿ ಮಾಡಬೇಕಿತ್ತು. ಆದರೆ ಉದ್ಯೋಗ ಸೇರಬೇಕಿದ್ದವರು ಇದ್ದ ಉದ್ಯೋಗ ಕಳೆದುಕೊಂಡು ನಿರುದ್ಯೋಯಾಗಿದ್ದಾರೆ. ಇಂಥವರಿಗೆ ನೀವು ಮತ ನೀಡಬೇಕಾ? ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪ್ರಶ್ನಿಸಿದ್ದಾರೆ.
ವಿಜಯಪುರ ನಗರದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಅಂಗವಾಗಿ 26 ವಾರ್ಡುಗಳಲ್ಲಿ ಅವರು ಪ್ರಚಾರ ನಡೆಸಿದರು.
ವಾರ್ಡ್ ಸಂಖ್ಯೆ 12 ರಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಗೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದ ಬಿಜೆಪಿಯವರು ಈಗ ಅವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೆ ಏರಿದರೂ ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತಿದ್ದಾರೆ. ಶೇ. 40 ಕಮಿಷನ್ ಪಡೆದು ಗುತ್ತಿಗೆ ನೀಡುವ ಇಂಥವರಿಂದ ಅಭಿವೃದ್ಧಿ ಸಾಧ್ಯವಾ? ಎಂದು ಪ್ರಶ್ನಿಸಿದರು.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅತೀ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಲಿದ್ದು, ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯಕ, ಪಕ್ಷದ ಮುಖಂಡರಾದ ಹಮೀದ್ ಮುಶ್ರಿಫ್, ರಫೀಕ್ ಟಪಾಲ್ ಎಂಜಿನಿಯರ್, ಬಿಡಿಎ ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ ಸೇರಿದಂತೆ ನಗರದ ನಾನಾ ವಾರ್ಡುಗಳಲ್ಲಿ ಎಂ. ಬಿ. ಪಾಟೀಲ ಜೊತೆ ಸಂಚರಿಸಿ ಮತಯಾಚಿಸಿದರು.