Election Preparation: ಮಹಾನಗರ ಪಾಲಿಕೆ ಚುನಾವಣೆ: ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಡಿಸಿ, ಎಸ್ಪಿ

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ಮತದಾನ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮತಪೆಟ್ಟಿಗೆ ಮತ್ತು ಮತದಾನಕ್ಕೆ ಅಗತ್ಯವಾಗಿರುವ ಇವಿಎಂ ಮತ್ತೀತರ ಸಲಕರಣೆಗಳನ್ನು ವಿತರಿಸುವ ಕೇಂದ್ರಕ್ಕೆ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯಪುರ ಡಿಸಿ, ಎಸ್ಪಿ ದರಬಾರ ಹೈಸ್ಕೂಲಿಗೆ ತೆರಳಿ ಇವಿಎಂ ವಿತರಣೆ ವ್ಯವಸ್ಥೆ ಪರಿಶೀಲನೆ ನಡೆಸಿದರು

ಮಸ್ಟರಿಂಗ್ ಕೇಂದ್ರವಾಗಿರುವ ವಿಜಯಪುರ ನಗರದ ವಿ. ವಿ. ದರಬಾರ ಕೇಂದ್ರಕ್ಕೆ ಭೇಟಿ ನೀಡಿ, ಶಾಂತಿಯುತ ಮತದಾನ ನಡೆಸಲು ತಮಗೆ ವಹಿಸಿದ ಜವಾಬ್ದಾರಿಯಿಂದ ಅತ್ಯಂತ ಸಮರ್ಥವಾಗಿ ನಿಭಾಯಿಸಬೇಕು.  ಚುನಾವಣೆ ಕಾರ್ಯದಲ್ಲಿ ಯಾವುದೇ ಅಡೆ-ತಡೆ ಗೊಂದಲ ಉಂಟಾದಲ್ಲಿ  ಸಮಾಧಾನದಿಂದ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು.  ಆದರೂ ಯಾವುದೇ ಸಮಸ್ಯೆ ಉಂಟಾದರೆ ಸೆಕ್ಟರ್ ಅಧಿಕಾರಿ ಮತ್ತು ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಂಡು ದೃತಿಗೆಡದೆ ಯಾವುದೇ ಲೋಪವಾಗದಂತೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪದೋಷಗಳಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕು.  ಚುನಾವಣೆ ಆಯೋಗದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ,ಅತ್ಯಂತ  ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚನೆ ನೀಡಿದರು.

ಎಸ್ಪಿ ಎಚ್. ಡಿ. ಆನಂದಕುಮಾರ್ ಅವರು ಪಾರದರ್ಶಕ ಚುನಾವಣೆಗಾಗಿ ಎಲ್ಲ ಸೂಕ್ತ ಪೋಲಿಸ್ ಬಂದೋಬಸ್ತ ಕಲ್ಪಿಸಲಾಗಿದ್ದು, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಇಲಾಖೆಯಿಂದ ನಿಯೋಜಿಸಿ ಸೂಕ್ತ ನಿಗಾ ವಹಿಸುವಂತೆ ಪೋಲಿಸ್ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ

ಈ ಮಧ್ಯೆ, ವಿಜಯಪುರ ನಗರದ ನಾನಾ ಕಡೆ ಸ್ಥಾಪಿಸಲಾಗಿರುವ ಮತಗಟ್ಟೆಗಳಿಗೆ ನಿಯೋಜನೆಯಾಗಿರುವ ಸಿಬ್ಬಂದಿ ಮತದಾನದ ಸಾಮಗ್ರಿಗಳೊಂದಿಗೆ ಬಸ್ಸಿನಲ್ಲಿ ತೆರಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಎಸ್ಪಿ ಡಾ. ರಾಮ ಲಕ್ಷ್ಣಣ ಅರಸಿದ್ದಿ, ವಿಜಯಪುರ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಶಂಕರಗೌಡ ಸೋಮನಾಳ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ವಿಜಯಪುರ ತಹಸೀಲ್ದಾರ ಸಿದ್ರಾಯ ಬೋಸಗಿ ಸೇರಿದಂತೆ ಜಿಲ್ಲಾ ಮಟ್ಟದ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌