ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಮತದಾನ ಚುರುಕು ಪಡೆದುಕೊಂಡಿದ್ದು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಪುತ್ರರಾದ ಡಾ ಗೋಪಾಲ ಕಾರಜೋಳ ಮತ್ತು ಉಮೇಶ ಕಾರಜೋಳ ದಂಪತಿ ಸಮೇತ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ವಿಜಯಪುರ ನಗದ ಮತ್ತು ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾರ್ಡ್ ಸಂಖ್ಯೆ 12ರಲ್ಲಿ ಬರುವ ಸರಕಾರಿ ಶಾಲೆ ಸಂಖ್ಯೆ 37ರಲ್ಲಿರುವ ಮತಗಟ್ಟೆ ಸಂಖ್ಯೆ 98ರಲ್ಲಿ ಪತ್ನಿ ಡಾ. ನಿವೇದಿತಾ ಕಾರಜೋಳ ಜೊತೆ ಅಗಮಿಸಿದ ಡಾ. ಗೋಪಾಲ ಕಾರಜೋಳ ತಮ್ಮ ಹಕ್ಕು ಚಲಾಯಿಸಿದರು.
ಈ ಸಂದರ್ಭದಲ್ಲಿ ಈ ವಾರ್ಡಿನಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ರಶ್ಮಿ ಬಸವರಾಜ ಕೋರಿ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಗೋಪಾಲ ಕಾರಜೋಳ, ಈ ಬಾರಿ ತಮ್ಮ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಬೇರಿ ಬಾರಿಸಲಿದ್ದಾರೆ. ಅಲ್ಲದೇ, ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಮೇಶ ಕಾರಜೋಳ ದಂಪತಿಯಿಂದ ಮತ ಚಲಾವಣೆ
ಈ ಮಧ್ಯೆ, ವಿಜಯಪುರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಕೂಡ ತಮ್ಮ ಪತ್ನಿ ಶ್ರೀದೇವಿ ಕಾರಜೋಳ ಜೊತೆ ಬಂದು ಮತದಾನ ಮಾಡಿದರು.
ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಜಯಪುರ ನಗರದ ಬಸವೇಶ್ವರ ವಾರ್ಡ ಸಂಖ್ಯೆ 10 ರಲ್ಲಿರುವ ಬಸವೇಶ್ವರ ಮತಗಟ್ಟೆ ಸಂಖ್ಯೆ 82ರಲ್ಲಿ ಮತದಾನ ಮಾಡಿದರು.
ಈ ಸಂದರ್ಭದಲ್ಲಿ ಮತ ಚಲಾವಣೆ ಮಾಡಿದ್ದು ನಾಗಠಾಣ ಮತಕ್ಷೇತ್ರದ ವಾರ್ಡ್ ನಂ.10 ರ ಬಸವೇಶ್ವರ ಕಾಲೇಜಿನಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಈ ವಾರ್ಡಿನ ಬಿಜೆಪಿ ಅಭ್ಯರ್ಥಿ ಸುನಂದಾ ಕುಮಸಿ ಮತ್ತು ಇತರರು ಉಪಸ್ಥಿತರಿದ್ದರು.
ಮತದಾನದ ಬಳಿಕ ಮಾತನಾಡಿದ ಉಮೇಶ ಕಾರಜೋಳ, ಈ ಬಾರಿ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಬಹುಮತದೊಂದಿಗೆ ಆಶೀರ್ವದಿಸಲಿದ್ದಾರೆ. ಕಮಲ ಪಡೆಯಿಂದ ಕಣಕ್ಕಿಳಿದಿರುವ ಎಲ್ಲ ಅಭ್ಯರ್ಥಿಗಳೂ ಗೆಲುವು ಸಾಧಿಸಲಿದ್ದಾರೆ. ಈ ಮೂಲಕ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ತಿಳಿಸಿದರು.