ಮಹೇಶ ವಿ. ಶಟಗಾರ
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸಿ ಹಾಕಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ.
ಮತದಾನಕ್ಕೆ ಬಂದ ಮತದಾರರಿಗೆ ಶಾಕ್, ತಹಸೀಲ್ದಾರ ಜೊತೆ ವಾಗ್ವಾದ
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಬಹುತೇಕರು ತಮ್ಮ ಮತ ಚಲಾಯಿಸಿ ಮನೆಗೆ ಮರಳಿದರೆ, ಇನ್ನೂ ನೂರಾರು ಜನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೂ ಮತಗಟ್ಟೆಯ ಒಳಗೆ ಸಿಬ್ಬಂದಿ ಬಳಿ ಇರುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಡಿಲೀಟ್ ಆಗಿರುವುದನ್ನು ಕೇಳಿ ಗಾಬರಿಯಾಗಿದ್ದಾರೆ. ಕೆಲವರು ತಮ್ಮ ಹೆಸರು ಬೇರೆ ಯಾವುದಾದರೂ ಮತಗಟ್ಟೆಗೆ ಸೇರಿದ ಪಟ್ಟಿಯಲ್ಲಿ ಸೇರಿದೆಯಾ ಎಂದು ಬೇರೆ ಬೇರೆ ಪೋಲಿಂಗ್ ಸ್ಟೇಶನ್ ಗಳಿಗೆ ಎಡತಾಕಿದ್ದಾರೆ. ಅಲ್ಲಿಯೂ ಹೆಸರು ಇಲ್ಲದಿರುವ ಕಾರಣ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತ ಮನೆಗೆ ಮರಳಿದ್ದಾರೆ.
ಈ ಮಧ್ಯೆ, ಮತಗಟ್ಟೆಯೊಂದರ ಬಳಿಗೆ ಬಂದಿದ್ದ ವಿಜಯಪುರ ತಹಸೀಲ್ದಾರ ಸಿದ್ರಾಮ ಬೋಸಗಿ ಅವರೊಂದಿಗೆ ಮತದಾನ ವಂಚಿತ ಮತದಾರರು ವಾಗ್ವಾದ ನಡೆಸಿದ್ದಾರೆ. ನಮ್ಮ ಹೆಸರನ್ನು ಯಾಕೆ ಡಿಲೀಟ್ ಮಾಡಲಾಗಿದೆ? ಒಂದು ವೇಳೆ ನಮ್ಮ ಹೆಸರು ಬೇರೆ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿದ್ದರೆ ಅದನ್ನು ತೋರಿಸಿ ಗೊಂದಲ ನಿವಾರಿಸಿ ಎಂದು ಮಾತಿನ ಚಕಮಕಿ ನಡೆಸಿದ್ದಾರೆ.
ಇನ್ನೂ ಕೆಲವೊಬ್ಬರು ಕಳೆದ ಬಾರಿ ಓಟಿಂಗ್ ಮಾಡಿದ್ದೇವೆ. ಈಗ ನಾವು ಜೀವಂತವಿದ್ದರೂ ನಮ್ಮ ಹೆಸರನ್ನು ಹೇಗೆ ಡಿಲೀಟ್ ಮಾಡಿದ್ದಾರೆ? ನಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳುಲು ಇವರಿಗೆ ಯಾವ ಹಕ್ಕಿದೆ? ಒಂದು ಕಡೆ ಮತದಾನ ಪ್ರಮಾಣ ಹೆಚ್ಚಿಸಲು ಪ್ರಚಾರ ಮಾಡುತ್ತಾರೆ. ಮತ್ತೋಂದೆಡೆ ನಾವೇ ಖುದ್ದಾಗಿ ಮತದಾನ ಮಾಡಲು ಬಂದರೆ ನಮ್ಮ ಹೆಸರು ಪಟ್ಟಿಯಲ್ಲಿ ಇಲ್ಲ ಎಂದು ವಾಪಸ್ ಕಳುಹಿಸುತ್ತಾರೆ ಎಂದು ಮತದಾರರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮತ್ತೋಂದೆಡೆ, ಒಂದೇ ಕುಟುಂಬದ ಮೂರ್ನಾಲ್ಕು ಸದಸ್ಯರ ಹೆಸರುಗಳು ಬೇರೆ ಬೇರೆ ವಾರ್ಡ್ ಮತ್ತು ಬೇರೆ ಬೇರೆ ಮತಗಟ್ಟೆಗಳ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಹಲವಾರು ಜನರು ಇದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗದೆ ತಂತಮ ಮನೆಗೆ ಮರಳಿದ್ದಾರೆ.
ಮತದಾರರ ಪಟ್ಟಿಯ ಗೊಂದಲಕ್ಕೆ ರಾಣವೇನು ಗೊತ್ತಾ?
ಈ ಮಧ್ಯೆ, ಮತದಾರರ ಪಟ್ಟಿಯಲ್ಲಿ ಹೆಸರು ಅಳಸಿ ಹಾಕಲು ಕಾರಣ ಮತ್ತು ಇದನ್ನು ಯಾರು ನಿರ್ಲಕ್ಷ್ಯಿಸಿದ್ದಾರೆ ಎಂಬುದರ ಕುರಿತು ಬಸವ ನಾಡು ವೆಬ್ ಗೆ ಮಾಹಿತಿ ಲಭ್ಯವಾಗಿದೆ. ಪ್ರತಿ ಬಾರಿ ಚುನಾವಣೆಗೆ ಸಾಕಷ್ಟು ಮುಂಚೆಯೇ ಚುನಾವಣೆ ಆಯೋಗ ಆಯಾ ಜಿಲ್ಲಾ ಚುನಾವಣಾಧಿಕಾರಿಗಳಿಂದ ಮಾಹಿತಿ ಪಡೆದು ಮತದಾರರ ಯಾದಿ ಪರಿಷ್ಕರಿಸಿ ಪ್ರಕಟ ಮಾಡುತ್ತವೆ. ಈ ಬಾರಿಯೂ ಅದೇ ಆಗಿದೆ.
ಪಿಎಸ್‌ಇ ಯಿಂದಾಗಿ ಅಳಸಿ ಹೋದ ಹೆಸರುಗಳು
ಕೇಂದ್ರ ಚುನಾವಣೆ ಆಯೋಗದ ಮಾರ್ಗಸೂಚಿಯಂತೆ 13.01.2022 ರಂದು ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿತ್ತು. ಈ ಮತದಾರರ ಪಟ್ಟಿ ಬಹುತೇಕ ರಾಜಕೀಯ ಪಕ್ಷಗಳು ಪಡೆದುಕೊಂಡು ನಿರಾಳವಾಗಿದ್ದವು. ಆದರೆ, ನಂತರ ಆಯೋಗ ನೀಡಿದ ಸೂಚನೆಯಂತೆ ಪಿಎಸ್‌ಇ ಅಂದರೆ(Photo Similar Entries) ನಡಿ ಓರ್ವ ಮತದಾರನ ಹೆಸರು ಒಂದಕ್ಕಿಂತಲೂ ಹೆಚ್ಚು ಬಾರಿ ಅಂದರೆ ಒಂದೇ ವ್ಯಕ್ತಿಯ ಹೆಸರು ಬೇರೆ ಬೇರೆ ಮತಗಟ್ಟೆಗಳು ಅಥವಾ ಮತಕ್ಷೇತ್ರ ಇಲ್ಲವೇ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದಾಖಲಾಗಿದ್ದರೆ ಒಂದನ್ನು ಉಳಿಸಿ ಉಳಿದ ಹೆಸರುಗಳನ್ನು ಡಿಲೀಟ್ ಮಾಡಲು ಸೂಚನೆ ನೀಡಲಾಗಿತ್ತು.
ಒಂದಕ್ಕಿಂತ ಹೆಚ್ಚು ಹೆಸರಿರುವುದನ್ನು ಪತ್ತೆ ಮಾಡಲು (ಮತಗಟ್ಟೆ ಮಟ್ಟದ ಅಧಿಕಾರಿ) ಗಳಿಗೆ ಸೂಚನೆ ನೀಡಲಾಗಿತ್ತು. ಹೀಗಾಗಿ ಒಂದಕ್ಕಿಂತ ಹೆಚ್ಚು ಹೆಸರುಗಳಿರುವ ಮತದಾರರ ಹೆಸರುಗಳನ್ನು ಆಯಾ ಮತಗಟ್ಟೆ ಅಧಿಕಾರಿ(BLO)ಗಳಿಂದ ಪಡೆಯಲಾಗಿತ್ತು. ಅಲ್ಲದೇ, ಮತದಾರರು ವಾಸಿಸುವ ಸ್ಥಳದ ಕುರಿತು ಆ ಅಧಿಕಾರಿಯಿಂದ ಮಾಹಿತಿ ಪಡೆದು, ಮತದಾರರು ವಾಸಿಸದ ಕಡೆಯಲ್ಲಿ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಡಿಲೀಟ್ ಮಾಡಲಾಗಿತ್ತು. ಅದರಂತೆ 20.08.2022ರಂದು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು.
ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿದ್ದ ಅಧಿಕಾರಿಗಳು
ಈ ಹೊಸ ಪರಿಷ್ಕೃತ ಮತದಾರರ ಪಟ್ಟಿಯನ್ನು ತಹಸೀಲ್ದಾರ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಬಿಎಲ್ಓಗಳು ರಾಜಕೀಯ ಪಕ್ಷಗಳಿಗೆ ಹಾಗೂ ಚುನಾವಣೆ ಘೋಷಣೆಯಾದ ನಂತರ ಕಣದಲ್ಲಿರುವ ಅಭ್ಯರ್ಥಿಗಳಿಗೆ ಪರಿಷ್ಕೃತ ಮತದಾರರ ಪಟ್ಟಿಯ ಕುರಿತು ಮಾಹಿತಿಯನ್ನೂ ನೀಡಲಾಗಿತ್ತು. ಆದರೆ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಈ ಹೊಸ ಪಟ್ಟಿಯ ಉಸಾಬರಿಗೆ ಹೋಗದೇ ಹಳೆಯ ಪಟ್ಟಿಯನ್ನೇ ನಂಬಿ ಕುಳಿತಿದ್ದಾರೆ. ಈ ಮಧ್ಯೆ ಮತದಾರರೂ ಕೂಡ ಹೊಸದಾಗಿ ಪರಿಷ್ಕೃತ ಪಟ್ಟಿ ಪ್ರಕಟವಾದ ನಂತರ ತಮ್ಮ ಹೆಸರು ತಮಗೆ ಸಂಬಂಧಿಸಿದ ಮತಗಟ್ಟೆಗಳಲ್ಲಿ ಇರುವ ಕುರಿತು ಖಚಿತ ಪಡಿಸಿಕೊಂಡಿಲ್ಲ ಎನ್ನಲಾಗಿದೆ. ಆದರೆ, ಈಗ ಮಹಾನಗರ ಪಾಲಿಕೆಗೆ ನಡೆದ ಮತದಾನದ ಸಂದರ್ಭದಲ್ಲಿ ಚುನಾವಣೆಗೆ ನಿಯೋಜಿತ ಸಿಬ್ಬಂದಿ ಬಳಿ ಇರುವ ಮತದಾರರ ಪಟ್ಟಿ ಮತ್ತು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಬಳಿ ಇರುವ ಪಟ್ಟಿಯಲ್ಲಿ ಸಾಕಷ್ಟು ವ್ಯತ್ಯಾಸಗಳು ಉಂಟಾಗಿವೆ.
ವಿಧಾನ ಸಭೆ, ಲೋಕಸಭೆ ಚುನಾವಣೆಗೆ ವಹಿಸಿದ ಕಾಳಜಿ ಈಗ ಏಕಿಲ್ಲ?
ಈ ಮಧ್ಯೆ, ಕಳೆದ ಬಾರಿ ನಡೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ತಂತಮ್ಮ ಬೂತ್ ವ್ಯಾಪ್ತಿಯ ಮನೆಗಳಿಗೆ ತೆರಳಿ ಮತದಾರರಿಗೆ ಮತ ಚಲಾಯಿಸುವ ವಿಳಾಸ ಅಂದರೆ ಮತದಾರರ ಪಟ್ಟಿಯಲ್ಲಿರುವ ಅನುಕ್ರಮ ಸಂಖ್ಯೆ, ಮತಗಟ್ಟೆಯ ವಿಳಾಸ ಸೇರಿದ ಮಾಹಿತಿಯನ್ನು ಒಳಗೊಂಡ ಚೀಟಿಯೊಂದನ್ನು ನೀಡಿದ್ದರು. ಇದರಿಂದಾಗಿ ಅಂದು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಮತದಾರರು ನಾನಾ ಬೂತುಗಳಿಗೆ ತೆರಳಿ ತಮ್ಮ ಹೆಸರು ಎಲ್ಲಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಪಡೆದಿದ್ದರು. ಆದರೆ, ಈ ಬಾರಿ ಅದಾವುದೂ ನಡೆಯದಿರುವುದೂ ಕೂಡ ಈ ಗೊಂದಲಕ್ಕೆ ಕಾರಣವಾಗಿದೆ.
ದೂರುಗಳ ಮಹಾಪೂರ
ಈ ನಡುವೆ, ಕೆಲವು ಕೆಲವು ಮತದಾರರು ತಮ್ಮ ಮನೆಯಲ್ಲಿ ಸದಸ್ಯರ ಹೆಸರನ್ನು ಡಿಲೀಟ್ ಮಾಡಲು ಅರ್ಜಿಯನ್ನು ನೀಡಿದರೂ ಡಿಲೀಟ್ ಆಗಿಲ್ಲ. ಆದರೆ, ಕೆಲವರ ಹೆಸರನ್ನು ಅನಗತ್ಯವಾಗಿ ಡಿಲೀಟ್ ಮಾಡಲಾಗಿದೆ. ಹೀಗಾದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ಡಿಲೀಟ್, ಸೇರ್ಪಡೆಯಾದ ಮತದಾರರ ಸಂಖ್ಯೆ ಎಷ್ಟು ಗೊತ್ತಾ?
ಮಾರ್ಚ್ 2022 ರಿಂದ ಜುಲೈ 22ರ ವರೆಗೆ ನಡೆದ ಫೋಟೋ ಸಿಮಿಲರ್ ಎಂಟ್ರಿ(ಜಿಎಸ್‌ಇ) ಕಾರ್ಯದಲ್ಲಿ ವಿಜಯಪುರ ನಗರದಲ್ಲಿ ಒಟ್ಟಾರೆ ಸುಮಾರು 24 ಸಾವಿರ ಮತದಾರರ ಹೆಸರುಗಳು ಡಿಲೀಟ್ ಆಗಿವೆ ಎಂದು ಚುನಾವಣೆ ಆಯೋಗದ ಮೂಲಗಳು ಬಸವ ನಾಡು ವೆಬ್ ಗೆ ಮಾಹಿತಿ ನೀಡಿವೆ. ಅದೇ ರೀತಿ, ಹೊಸದಾಗಿ ಸುಮಾರು 22 ಸಾವಿರ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ. ಇವುಗಳಲ್ಲಿ ಹೊಸದಾಗಿ ಸೇರ್ಪಡೆಯಾಗದವರು ಮತ್ತು ಡಿಲೀಟ್ ಆದವರ ಹೆಸರುಗಳೂ ಇರಬಹುದು ಎನ್ನಲಾಗಿದೆ.
ಆಧಾರ್ ಲಿಂಕ್ ಗೂ ಮತದಾರರ ಪಟ್ಟಿಗೂ ಸಂಬಂಧಿವಿಲ್ಲ
ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟಾಗಲು ಮತ್ತು ಹಲವು ಹೆಸರುಗಳನ್ನು ಡಿಲೀಟ್ ಮಾಡಲು ಇತ್ತೀಚೆಗೆ ಚುನಾವಣೆ ಆಯೋಗ ವೋಟರ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಿಸಿರುವುದೇ ಕಾರಣ ಎಂದು ಬಹುತೇಕ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ದೂರಿದ್ದಾರೆ. ಆದರೆ, ಚುನಾವಣೆ ಆಯೋಗದ ಪ್ರಕಾರ, ವೋಟರ್ ಐಟಿಯನ್ನು ಆಧಾರ್ ಗೆ ಲಿಂಕ್ ಮಾಡಿಸಿರುವುದಕ್ಕೂ ಈಗ ಹಲವರ ಹೆಸರುಗಳು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಹಾಗೂ ಮತದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.
ಆದರೆ, ಈ ಕುರಿತು ಚುನಾವಣೆ ಆಯೋಗ ಅಥವಾ ವಿಜಯಪುರ ಜಿಲ್ಲಾಡಳಿತ ಈ ಕುರಿತು ಸ್ಪಷ್ಟನೇ ನೀಡಬೇಕಾಗಿದೆ.
ಮುಂದಿನ ಚುನಾವಣೆಗಾದರೂ ಎಚ್ಚೆತ್ತುಕೊಳ್ಳಲಿ
ಈಗ ಮಹಾನಗರ ಪಾಲಿಕೆ ಚುನಾವಣೆ ಮುಗಿದಿದೆ. ಇನ್ನು ಮುಂದಾದರೂ ಚುನಾವಣೆ ಆಯೋಗ, ರಾಜಕೀಯ ಪಕ್ಷಗಳು ಈ ಬಗ್ಗೆ ಮತ್ತೋಮ್ಮೆ ಜಾಗೃತಿ ಮೂಡಿಸಬೇಕಿದೆ. ಅಷ್ಟೇ ಅಲ್ಲ, ಮತದಾರರೂ ಕೂಡ ಕಳೆದ ಬಾರಿ ವೋಟ್ ಹಾಕಿದ್ದೇವೆ. ಈ ಬಾರಿ ಏನೂ ಆಗಲ್ಲ ಎಂದು ನಿರ್ಲಕ್ಷ್ಯ ವಹಿಸದೇ ಮುಂಬರುವ ಚುನಾವಣೆ ವೇಳೆಗೆ ತಮ್ಮ ಹೆಸರ ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಒಂದು ವೇಳೆ ಹೆಸರು ಆ ಪಟ್ಟಿಯಲ್ಲಿ ಇರದಿದ್ದರೆ, ಹೊಸದಾಗಿಯಾದರೂ ಸೇರ್ಪಡಿಸಿ ತಮ್ಮ ಹಕ್ಕನ್ನು ಚಲಾಯಿಸಿ ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂಬುದು ಬಸವ ನಾಡು ವೆಬ್ ಆಶಯವಾಗಿದೆ.