ಮಹೇಶ ವಿ. ಶಟಗಾರ
ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ದೇಶದ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾರಿಗೆ ವೋಟು ಹಾಕಿದರೇನು ಬಂತು? ವೋಟಿಂಗ್ ದಿನ ರಜೆಯಲ್ಲಿ ಮನೆಯಲ್ಲಿ ಕಾಲ ಕಳೆದರೆ ಸಾಕು ಎಂದು ಬಹಳಷ್ಟು ಜನ ತಮ್ಮ ಹಕ್ಕು ಚಲಾಯಿಸದೇ ಮನೆಯಲ್ಲಿಯೇ ಕುಳಿತುಕೊಂಡು ಇಲ್ಲವೇ ಬೇರೆ ಕಡೆಗೆ ಪ್ರವಾಸ ಮಾಡುತ್ತ ಎಂಜಾಯ್ ಮಾಡುತ್ತಾರೆ.
ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಶೇ. 55.27 ರಷ್ಟು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದು, ಇನ್ನುಳಿದ ಶೇ. 44. 63 ರಷ್ಟು ಜನ ನಾನಾ ಕಾರಣಗಳಿಂದ ಮತದಾನದಿಂದ ದೂರ ಉಳಿದಿದ್ದಾರೆ.
ಬಾಲಕಿಯ ಮತಪ್ರಜ್ಞೆ ಮೆಚ್ಚುವಂಥದ್ದು
ವಿಜಯಪುರ ನಗರದ ಬಿ. ಎಂ. ಪಾಟೀಲ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳ ಮತಪ್ರಜ್ಞೆಗೆ ಈ ಘಟನೆ ಸಾಕ್ಷಿಯಾಗಿದೆ. ಬಾಲಕಿಯ ತಾಯಿ ಶಿಕ್ಷಕಿಯಾಗಿದ್ದು ವಿಜಯಪುರ ನಗರದಲ್ಲಿ ವಾಸಿಸುತ್ತಿದ್ದಾರೆ. ಬಾಲಕಿಯ ತಂದೆ ದೂರದ ಬಹರೇನ್ ದೇಶದಲ್ಲಿ ಎಂಜಿನಿಯರ್ ಆಗಿದ್ದಾರೆ. ಹೀಗಿರುವಾಗ ಶುಕ್ರವಾರ ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಬಾಲಕಿಯ ತಾಯಿ ಮಧ್ಯಾಹ್ನದ ವರೆಗೆ ಮನೆಯ ಕೆಲಸ ಮುಗಿಸುತ್ತಲೇ ಇದ್ದರು. ಇನ್ನು ಸ್ವಲ್ಪ ಹೊತ್ತಿನ ಬಳಿಕ ವೋಟಿಂಗ್ ಮಾಡಿದರಾಯಿತು ಎಂದುಕೊಂಡಿದ್ದರು.
ಮಧ್ಯಾಹ್ನವಾದರೂ ತಾಯಿ ಮನೆಯಲ್ಲಿಯೇ ಇರುವುದನ್ನು ಗಮನಿಸಿದ ಬಾಲಕಿ, ಅಕ್ಕಪಕ್ಕದ ಮನೆಯವರು ಈಗಾಗಲೇ ಹೊರಗೆ ಹೋಗಿ ಬಂದಿದ್ದಾರೆ. ಆದರೆ, ನಮ್ಮಮ್ಮ ಯಾಕೆ ಇನ್ನೂ ಮನೆಯಲ್ಲಿದ್ದಾಳೆ ಎಂದು ಯೋಚಿಸಿದ್ದಾಳೆ. ಅಲ್ಲದೇ, ತಾಯಿಯ ಬಳಿಗೆ ಬಂದು ಯಾಕೆ ನೀನು ವೋಟಿಂಗ್ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾಳೆ. ಆಗ, ಮಗಳ ಮಾತಿನಿಂದ ಒಂದು ಕ್ಷಣ ದಂಗಾದ ತಾಯಿ ತಮಾಷೆಗಾಗಿ ಇಲ್ಲ. ನನಗೆ ವೋಟ್ ಮಾಡಲು ಇಷ್ಟವಿಲ್ಲ. ನಾನು ಮನೆಯಲ್ಲಿಯೇ ಇರುತ್ತೇನೆ. ನನಗೆ ಬೇರೆ ಕೆಲಸ ಇದೆ ಎಂದು ಹೇಳಿದ್ದಾರೆ.
ತಾಯಿ ಮಾತಿನಿಂದ ಸಿಟ್ಟಾದ ಮಗಳು, ನೋಡು ನೀನು ವೋಟ್ ಹಾಕದಿದ್ದರೆ ನಾನು ಬಹರೇನ್ ನಲ್ಲಿರುವ ಅಪ್ಪನಿಗೆ ಫೋನ್ ಮಾಡಿ ಕಂಪ್ಲೆಂಟ್ ಮಾಡುತ್ತೇನೆ ಹುಷಾರ್ ಎಂದು ಬೆದರಿಕೆ ಹಾಕಿದ್ದಾಳೆ.
ಅಷ್ಟೇ ಅಲ್ಲ, ಮತದಾನ ಪ್ರತಿಯೊಬ್ಬರ ಹಕ್ಕು. ನಮ್ಮ ರೈಟ್ ನ್ನು ನಾವು ಚಲಾಯಿಸಲೇಬೇಕು. ಸೀದಾ ಹೋಗಿ ನಿನಗೆ ಯಾರು ಇಷ್ಟವೋ ಅವರಿಗೆ ವೋಟು ಹಾಕಿ ಬಾ. ಇಲ್ಲದಿದ್ದರೆ ನೋಡು ಎಂದು ಆವಾಜ್ ಹಾಕಿದ್ದಾಳೆ. ಮಗಳ ಮಾತಿನಿಂದ ತಾಯಿ ಅಚ್ಚರಿಗೊಂಡಿದ್ದಾರೆ. ಕೇವಲ ಸುಮಾರು 11 ವರ್ಷದ ಮಗಳಲ್ಲಿರುವ ದೇಶದ ವೋಟಿಂಗ್ ವ್ಯವಸ್ಥೆಯ ಬಗ್ಗೆ ಇರುವ ಜ್ಞಾನದ ಬಗ್ಗೆ ಹೆಮ್ಮೆಯೂ ಪಟ್ಟಿದ್ದಾರೆ. ನಂತರ ಆಕೆಯನ್ನು ತನ್ನ ಅಜ್ಜಿಯ ಮನೆಯಲ್ಲಿ ಬಿಟ್ಟು ಹೋಗಿ ಮತ ಹಾಕಿ ಬಂದಿದ್ದಾರೆ.
ಈ ಬಾಲಕಿಯ ಹೆಸರು ಸಯಿದಾ ಇಶಾಲ ಖಾದ್ರಿ. ಈಕೆಯ ತಂದೆ ವಲಿಉಲ್ಲಾ ಖಾದ್ರಿ. ತಾಯಿ ಸೈಯ್ಯದ ಸಮೀನಾ ಖಾದ್ರಿ. ತಂದೆ ಕಳೆದ 20 ವರ್ಷಗಳಿಂದ ನಾನಾ ದೇಶಗಳಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಧ್ಯಕ್ಕೆ ಬಹರೇನ್ ನಲ್ಲಿದ್ದಾರೆ. ತಾಯಿ ಎಂ. ಎ. ಬಿ. ಎಡ್. ಪದವಿಧರರಾಗಿದ್ದು, ಖಾಸಗಿ ಶಾಲೆಯೊಂದರಲ್ಲಿ ಇತಿಹಾಸ ಶಿಕ್ಷಕಿಯಾಗಿದ್ದಾರೆ.
ವಿಷಯ ಬೆಳಕಿಗೆ ಬಂದಿದ್ದು ಹೇಗೆ?
ಈ ಮಧ್ಯೆ, ಸಂಜೆಯ ವೇಳೆಗೆ ಬಹರೇನ್ ನಿಂದ ವಾಟ್ಸಾಪ್ ಸಂದೇಶ ಕಳುಹಿಸಿದ ತಂದೆ ವಲಿಉಲ್ಲಾ ಖಾದ್ರಿ ಹೇಗಿದ್ದೀರಿ ಎಂದು ಕೇಳಿದಾಗ ಅವರ ಪತ್ನಿ ಮಗಳೊಂದಿಗೆ ನಡೆದ ಮಾತುಕತೆಯ ಮಾಹಿತಿ ನೀಡಿದ್ದಾರೆ. ಆಗ, ತಂದೆ ಕೂಡ ಮಗಳಲ್ಲಿರುವ ಸಾಕ್ಷಿಪ್ರಜ್ಞೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈಗಿನ ಮಕ್ಕಳಲ್ಲಿ ಜಾಗೃತವಾಗಿರುವ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಪತ್ನಿ ಮತ್ತು ಈ ಬಾಲಿಕ ಓದುತ್ತಿರುವ ಬಿ. ಎಂ. ಪಾಟೀಲ ಶಾಲೆಯ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಸವ ನಾಡು ವೆಬ್ ಜೊತೆ ಮಾತನಾಡಿದ ತಂದೆ ವಲಿವುಲ್ಲಾ ಖಾದ್ರಿ, ಇಂದಿನ ಮಕ್ಕಳಿಗೆ ಸಿಗುತ್ತಿರುವ ಉತ್ತಮ ಶಿಕ್ಷಣ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಆ ಮಕ್ಕಳಲ್ಲಿ ಬೆಳೆಯುತ್ತಿರುವ ಆಸಕ್ತಿಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಮನೆ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರು ಕೇವಲ ತಮ್ಮ ಕುಟುಂಬ ಅಷ್ಟೇ ಅಲ್ಲ, ಅವರು ಕಲಿತ ಶಾಲೆ ಮತ್ತು ದೇಶದ ಗೌರವವನ್ನು ಹೆಚ್ಚಿಸಲು ಸಾಧ್ಯ ಎಂದು ಹೇಳಿದ್ದಾರೆ.
ಖಾದ್ರಿ ದಂಪತಿಗೆ ಮೂರು ಜನ ಮಕ್ಕಳಿದ್ದು, ಇವರ ಹಿರಿಯ ಪುತ್ರಿ ಪಿಯುಸಿ ಓದುತ್ತಿದ್ದಾಳೆ. ಎರಡನೇ ಮಗ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಯಿದಾ ಇಶಾದ್ ಖಾದ್ರಿ ಇವರ ಕಿರಿಯ ಪುತ್ರಿಯಾಗಿದ್ದಾರೆ.
ಮಕ್ಕಳು ಈಗ ಕೇವಲ ಮಕ್ಕಳಲ್ಲ. ಅವರು ಅಪ್ಪ, ಅಮ್ಮನಿಗಿಂತಲೂ ಹೆಚ್ಚು ಪ್ರಜ್ಞಾವಂತ ನಾಗರಿಕರಾಗುತ್ತಿದ್ದಾರೆ ಎಂಬುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿದೆ. ಈ ವಿದ್ಯಾರ್ಥಿನಿಯ ಸಮಾಜ ಮತ್ತು ಜನಪರ ಕಾಳಜಿಗೊಂದು ಹ್ಯಾಟ್ಸಾಫ್ ಹೇಳಲೇಬೇಕು. ಇಂಥ ಮಕ್ಕಳ ಸಂಖ್ಯೆ ಹೆಚ್ಚಾದಷ್ಟು ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಬಸವ ನಾಡು ವೆಬ್ ಆಶಯವೂ ಆಗಿದೆ.
One Response
Dear sir’ Thank you so much for taking my information it into your consideration, I hope this massage will be motivating more to all kids in our society towards the awareness of vote power and it will be inspiring them for their future responsibilities.