Sunilgouda Kamadhenu: ಸುನೀಲಗೌಡ ಪಾಟೀಲ ವರ್ಷವಿಡೀ ಜನಸೇವೆ ಮಾಡುವ ಕಾಮಧೇನು- ಮಮದಾಪುರ ಸ್ವಾಮೀಜಿ

ವಿಜಯಪುರ: ಸುನೀಲಗೌಡ ಪಾಟೀಲ ಅವರು ವರ್ಷದ 12 ತಿಂಗಳು ಜನಸೇವೆ ಮಾಡುವ ಕಾಮಧೇನು ಆಗಿದ್ದಾರೆ ಎಂದು ಮಮದಾಪುರ ವಿರಕ್ತಮಠದ ಶ್ರೀ ಅಭಿನವ ಮುರುಘೇಂದ್ರ ಸ್ವಾಮೀಜಿ ಹೇಳಿದ್ದಾರೆ.

ವಿಜಯಪುರ ನಗರದ ಪಾಟೀಲ ಗಾರ್ಡೇನಿಯಾದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರ 50ನೇ ಜನ್ಮದಿನದ ಅಂಗವಾಗಿ ನಡೆದ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಂ.ಬಿ.ಪಾಟೀಲರ ಕುಟುಂಬಕ್ಕೂ ನಮ್ಮ ಮಠಕ್ಕೂ ಅಭಿನಾಭಾವ ಸಂಬಂಧವಿದೆ. ನಮ್ಮ ಗುರುಗಳಿಗೆ ಎಂ.ಬಿ.ಪಾಟೀಲರು 8 ವರ್ಷಗಳ ಕಾಲ ಬಿ.ಎಲ್.ಡಿ.ಇ. ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ ಪಾಟೀಲ ಸಹೋದರರು ಆಕಳಿನಂತೆ ಜನರ ಪಾಲಿಗೆ ಕಾಮಧೇನುವಿನ ರೂಪದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಚಿವರಾಗಿದ್ದಾಗ ಎಂ.ಬಿ.ಪಾಟೀಲರು ನೀರಾವರಿ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ಎಂ ಎಲ್ ಸಿ ಸುನೀಲಗೌಡ ಪಾಟೀಲರ ಜನ್ಮದಿನದ ಅಂಗವಾಗಿ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಶ್ರೀಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಲಾಯಿತು

ಉತರ ಕರ್ನಾಟಕದಲ್ಲಿ ಸಿಎಂ ಆಗುವ ಅರ್ಹತೆ ಮತ್ತು ಯೋಗ್ಯತೆ ಇರುವ ನಾಯಕರಲ್ಲಿ ಎಂ.ಬಿ.ಪಾಟೀಲರು ಮುಂಚೂಣಿಯಲ್ಲಿದ್ದಾರೆ. ಇವರಿಗೆ ಸಹೋದರ ಸುನೀಲಗೌಡ ಪಾಟೀಲ ಮತ್ತು ಪುತ್ರ ಬಸನಗೌಡ (ರಾಹುಲ) ಪಾಟೀಲ ಜೊತೆಯಾಗಿ ಶಕ್ತಿ ತುಂಬುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು.

ಹೊಳೆ ಬಬಲಾದಿ ಮಠದ ಶ್ರೀ ಅಪ್ಪಯ್ಯ ಹಿರೇಮಠ ಸ್ವಾಮೀಜಿ ಮಾತನಾಡಿ ಮಡ್ಡಿ ಹೋಗಿ ಬಂಗಾರದ ಕಡ್ಡಿಯಾಗುತ್ತೆ ಎಂದು 700 ವರ್ಷಗಳ ಹಿಂದೆ ಬಬಲಾದಿ ಶರಣರು ಹೇಳಿದ್ದರು. ಎಂ.ಬಿ.ಪಾಟೀಲರು ಸಚಿವರಾಗಿ ನೀರಾವರಿ ಕೆಲಸ ಮಾಡುವ ಮೂಲಕ ಅಂದಿನ ಭವಿಷ್ಯವನ್ನು ನಿಜ ಮಾಡಿದ್ದಾರೆ. ಅವರಿಗೆ ಜನಸೇವೆ ಮಾಡಲು ಮತ್ತಷ್ಟು ಶಕ್ತಿ ಸಿಗಲಿ ಎಂದು ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಯುವಕರು ನಮಗೆ ಶಕ್ತಿಯಾಗಿದ್ದಾರೆ. ಯುವಕರಿಗಾಗಿ ನನ್ನ ಜೀವವನ್ನು ಮುಡಿಪಾಗಿಡುತ್ತೇನೆ. ನನಗೆ ನನ್ನ ಕುಟುಂಬದವರ ಮೇಲೆ ಎಲ್ಲರೂ ಇಟ್ಟಿರುವ ಪ್ರೀತಿಗೆ ಕೃತಜ್ಞನಾಗಿದ್ದೇನೆ. ನಮ್ಮ ಎಲ್ಲ ಹಿತೈಷಿಗಳಿಗೂ ಕೃತಜ್ಞನಾಗಿರುತ್ತೇನೆ ಎಂದು ಹೇಳಿದರು.

ಜಿ.ಪಂ. ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಮಾತನಾಡಿ, ಎಂ.ಬಿ.ಪಾಟೀಲ ಮತ್ತು ಸುನೀಲಗೌಡ ಪಾಟೀಲ ರಾಮ ಲಕ್ಷ್ಮಣರಂತೆ ಬಬಲೇಶ್ವರ ಮತಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.  ಈ ಭಾಗದಲ್ಲಿ ನೀರಾವರಿ ವ್ಯವಸ್ಥೆ ಮಾಡಿದ್ದರಿಂದ ಯುವಕರಾದಿಯಾಗಿ ಈ ಭಾಗದ ಜನರು ಗುಳೆ ಹೋಗುವುದು ತಪ್ಪಿದೆ. ಈಗ ಮಹಾರಾಷ್ಟ್ರದಿಂದ ಜನ ಉದ್ಯೋಗ ಅರಸಿ ಇಲ್ಲಿಗೆ ಗುಳೆ ಬರುತ್ತಿದ್ದಾರೆ. ಇಲ್ಲಿನ ಯುವಕರು ಪಟ್ಟಣಗಳಿಗೆ ವಲಸೆ ಹೋಗುವ ಬದಲು ತಮ್ಮ ಹೊಲಗಳಲ್ಲಿ ಕೃಷಿ ಮಾಡುತ್ತ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಮಾತನಾಡಿ, ಸುನೀಲಗೌಡ ಪಾಟೀಲ ಸರಳ ಸ್ನೇಹ ಜೀವಿಯಾಗಿದ್ದು, ಯಾವುದೇ ಬೇಧ ಭಾವವಿಲ್ಲದೆ ಎಲ್ಲರೊಂದಿಗೆ ಬೆರೆಯುವ ಸ್ವಭಾವದವರಾಗಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎನ್.ಎಸ್.ಅಳ್ಳೊಳ್ಳಿ, ಕುಮಾರ ದೇಸಾಯಿ ಜೈನಾಪುರ, ಸೋಮನಾಥ ಬಾಗಲಕೋಟ, ವಿ.ಎಸ್.ಪಾಟೀಲ, ಶ್ರೀಶೈಲಗೌಡ ಪಾಟೀಲ ನಿಡೋಣಿ, ಅರ್ಜುನ ಹಿರು ರಾಠೋಡ, ಸುಭಾಷ ಛಾಯಾಗೋಳ, ಬಾಪುಗೌಡ ಪಾಟೀಲ ಶೇಗುಣಸಿ, ಸಿದ್ಧಣ್ಣ ಸಕ್ರಿ, ಬಿ.ಎಲ್.ಡಿ.ಇ. ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ, ಹಮೀದ್ ಮುಶ್ರಿಫ್, ಆನಂದ ದೊಡಮನಿ, ಮೊಹಮ್ಮದ ಕಪಾಲ ಎಂಜಿನಿಯರ, ನಾಗರಾಜ ಹದ್ದಿ, ಜುಗುನು ಮಹಾರಾಜ, ಮಧು ಸಾಹುಕಾರ ಜಾದವ, ಮುತ್ತಣ್ಣ ಶಿವಣ್ಣವರ, ಆರ್.ಜಿ.ಯರನಾಳ, ಸುನೀಲಗೌಡ ಪಾಟೀಲ ಅವರ ಕುಟುಂಬ ಸದಸ್ಯರು. ಮುಂತಾದವರು ಉಪಸ್ಥಿತರಿದ್ದರು.

ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಶಂಕರ ಸಿದರೆಡ್ಡಿ ಪ್ರಾರ್ಥಿಸಿದರು. ಪ್ರಶಾಂತ ಜಂಡೆ ಮತ್ತು ನಾಗಪ್ಪ ಹೊಳೆಪ್ಪಗೋಳ ನಿರೂಪಿಸಿದರು. ಸೋಮನಾಥ ಕಳ್ಳಿಮನಿ ವಂದಿಸಿದರು.

ಯುವ ಸಂಭ್ರಮ ಕಾರ್ಯಕ್ರಮಕ್ಕಾಗಿ ಬಬಲೇಶ್ವರ ಮತಕ್ಷೇತ್ರದ ನಾನಾ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಯುವಕರು ಮತ್ತು ಗ್ರಾಮಸ್ಥರು ಸುನೀಲಗೌಡ ಪಾಟೀಲ ಅವರನ್ನು ಅಭಿನಂದಿಸಿ ಶುಭ ಕೋರಿದರು.

ಅಜಯ ವಾರಿಯರ ನಡೆಸಿಕೊಟ್ಟ ಸಂಗೀತ ಸುಧೆ ಕಾರ್ಯಕ್ರಮ ಜನರನ್ನು ಸಂಭ್ರಮದಿಂದ ಕುಣಿದಾಡುವಂತೆ ಪ್ರೋತ್ಸಾಹಿಸಿತು. ಡಿಜೆ ಕಾರ್ಯಕ್ರಮ ಕೂಡ ನೆರೆದ ತಮ್ಮ ದಿನನಿತ್ಯದ ಕೆಲಸದ ಜಂಜಾಟವನ್ನು ಮರೆತು ಸಂಗೀತ ಲೋಕದಲ್ಲಿ ವಿಹರಿಸುವಂತೆ ಮಾಡಿತು.

Leave a Reply

ಹೊಸ ಪೋಸ್ಟ್‌