Cabinet Protest Yatnal: ಸಿಎಂಗೆ ಸಚಿವ ಸಂಪುಟ ವಿಸ್ತರಣೆ ಇಷ್ಟವಿಲ್ಲ- ನನ್ನ ವಿರುದ್ಧ ಪ್ರತಿಭಟನೆ ಮುಂದುವರೆಸಿದರೆ ಅವರಿಗೆ ಹಿನ್ನೆಡೆ- ಶಾಸಕ ಯತ್ನಾಳ

ವಿಜಯಪುರ: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಸಕ್ತಿಯಿಲ್ಲ. ಇನ್ನೂ ಆರು ತಿಂಗಳು ಆರಾಮಾಗಿ ಕಳೆಯಬೇಕು ಎಂಬ ಉದ್ದೇಶ ಸಿಎಂ ಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಗೆ ಉತ್ತಮ ಸಚಿವರನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡಬೇಕು ಎಂದು ಬೊಮ್ಮಾಯಿ ಅವರಿಗೆ ಹೇಳಿದ್ದೇನೆ. ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂಬ ನಿರೀಕ್ಷೆಯನ್ನು ನಾನು ಹೊಂದಿಲ್ಲ. ಏಕೆಂದರೆ ಬೊಮ್ಮಾಯಿ ಅವರಿಗೂ ವೈಯಕ್ತಿಕವಾಗಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಆಸಕ್ತಿಯಿಲ್ಲ. ಅಸಮಾಧಾನ ಮತ್ತು ಭಿನ್ನಮತದ ಸಹವಾಸವೇ ಬೇಡ. ಮುಂದಿನ ಆರು ತಿಂಗಳನ್ನು ಆರಾಮವಾಗಿ ಕಳೆಯಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಅವರ ಯೋಚನೆಯಂತೆಯೇ ಆಗಲಿ ಎಂದು ಶಾಸಕರು ಹೇಳಿದರು.

ಬಣಜಿಗರ ಆಕ್ರೋಶ ವಿಚಾರ

ತಮ್ಮ ವಿರುದ್ಧ ಬಣಜಿಗ ಸಮುದಾಯದವರು ಪ್ರತಿಭಟನೆ ನಡೆಸುತ್ತಿರುವ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಕೆಲವು ಜನರು ಉದ್ದೇಶಪೂರ್ವಕವಾಗಿ ಪ್ರತಿಭಟನೆ ಮಾಡುತ್ತಾರೆ. ಹೀಗೆಲ್ಲ ಮಾಡಿಕೊಂಡು ಹೋದರೆ ಅವರ ಜನಪ್ರತಿನಿಧಿಗಳ ಸಂಖ್ಯೆ ಕಡಿಯಮೆಯಾಗಲಿದೆ. ಅದನ್ನು ಬಣಜಿಗರು ಗಂಭೀರವಾಗಿ ತಿಳಿದುಕೊಳ್ಳಬೇಕು. ಮುಂದೆ ಅವರ ಮಹಾನ್ ಮೇರು ನಾಯಕನೂ ಔಟ್ ಆದರೆ ಆಶ್ಚರ್ಯವಿಲ್ಲ ಎಂದು ಯತ್ನಾಳ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹೆಸರು ಹೇಳದೇ ಎಚ್ಚರಿಕೆ ನೀಡಿದರು.

ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ 

ಇದೇ ವೇಳೆ, ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವ ಕುರಿತು ಮಾತನಾಡಿದ ಅವರು, ಇಲ್ಲಿವರೆಗೆ ವಿಜಯಪುರ ಸ್ಥಳೀಯ ಸಂಸ್ಥೆಯಲ್ಲಿ ಯಾವ ಪಕ್ಷವೂ ಇಷ್ಟು ಸ್ಥಾನಗಳನ್ನು ಗೆದ್ದಿರಲಿಲ್ಲ. ಬಿಜೆಪಿ 35 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗೆದ್ದಿದೆ. ಕಳೆದ ಬಾರಿಗಿಂತ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದೆ. ಅಭಿವೃದ್ದಿ ಹಾಗೂ ಹಿಂದುತ್ವವನ್ನು ಜನರು ಒಪ್ಪಿದ್ದಾರೆ. ಕೆಲವು ಕಡೆ ಕಡಿಮೆ ಮತಗಳ ಅಂತರಿಂಧ ಮೂರು ಸ್ಥಾನಗಳಲ್ಲಿ ಸೋತಿದ್ದೇವೆ. ಸೋಮವಾರ ಓರ್ವ ಪಕ್ಷೇತರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮತ್ತಿಬ್ಬರು ಪಕ್ಷೇತರರು ಬಿಜೆಪಿಗೆ ಸೇರಲಿದ್ದಾರೆ. ಮುಲಾಜಿಲ್ಲದೇ ಬಿಜೆಪಿಯವರನ್ನೇ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ರನ್ನಾಗಿ ಮಾಡುತ್ತೇವೆ ಎೞದು ಅವರು ಹೇಳಿದರು.

ಕೆಲವು ನಾಯಕರ ಕುತಂತ್ರದ ನಡುವೆಯೂ ಬಿಜೆಪಿಗೆ ಗೆಲುವು

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ವಿಕಾಸ, ಹಿಂದುತ್ವ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯಗಳೂ ಕಾರಣ. ಬಿಜೆಪಿಗೆ ಬೆಂಬಲ ನೀಡಿದ ವಿಜಯಪುರ ನಗರದ ಜನರಿಗೆ ಅಭಿನಂದನೆ ಸಲ್ಲಿಸುವೆ. ಈ ಗೆಲುವಿನ ಬಗ್ಗೆ ಸಿಎಂ ಸಹ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.

ಕೆಲವು ಲೀಡರ್ ಗಳು ಮನೆಯಲ್ಲಿ ಕುಳಿತು ಕುತಂತ್ರ ಮಾಡಿದ್ದರು. ಪ್ರಚಾರಕ್ಕೂ ಹೋಗಿರಲಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿರುವ ಕೆಲವು ಕಳ್ಳರ ಗ್ಯಾಂಗ್ ಗೆ ಬೆಂಗಳೂರು ಮತ್ತು ಮುಧೋಳದಿಂದ ಸಾಕಷ್ಟು ಸಹಾಯ ಹಸ್ತ ಬಂದಿತ್ತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಮುರುಗೇಶ ನಿರಾಣಿ ಮತ್ತು ಗೋವಿಂದ ಕಾರಜೋಳ ಅವರ ಹೆಸರು ಹೇಳದೆ ಯತ್ನಾಳ ವ್ಯಂಗ್ಯವಾಡಿದರು.

ಅವರೆಲ್ಲರೂ ಬಿಜೆಪಿ ಸೋಲಿಸಿ ಯತ್ನಾಳ ಮಣಿಸಬೇಕು ಎಂದುಕೊಂಡಿದ್ದರು. ಆದರೆ ಜನರು ಹುಚ್ಚರಿಲ್ಲ. ಉತ್ತರ ಕೊಟ್ಟಿದ್ದಾರೆ. ಇನ್ನು ಮೇಲಾದರೂ ಅವರೆಲ್ಲರೂ ನಿವೃತ್ತಿಯಾಗಿ ಮನೆಯಲ್ಲಿ ಆರಾಮವಾಗಿ ಇರಬೇಕು ಎಂದು ಶಾಸಕರು ಹೇಳಿದರು.

ವಿಧಾನ ಸಭೆ ಚುನಾವಣೆ ಮೇಲೆ ಪಾಲಿಕೆ ಚುನಾವಣೆ ಫಲಿತಾಂಶ ಪರಿಣಾಮ

ಇದೇ ವೇಳೆ, ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇಡೀ ಕರ್ನಾಟಕ ವಿಧಾನ ಸಭೆ ಚುನಾವಣೆಯ ಮೇಲೆ ಬೀರಲಿದೆ. ರಾಜಕಾರಣದ ವಾತಾವರಣ ಬದಲಾವಣೆಯಾಗುತ್ತಿದೆ. ಎಲ್ಲರ ವಿಶ್ವಾಸ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ವಿಶ್ವಾಸವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂದು ಅವರು ಹೇಳಿದರು.

ಜನಾರ್ಧನ ರೆಡ್ಡಿ ಮುನಿಸು, ಬಿ ಎಸ್ ವೈ ವಿರುದ್ಧ ಪರೋಕ್ಷ ವಾಗ್ದಾಳಿ

ಈ ಸಂದರ್ಭದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಬಿಜೆಪಿ ಜೊತೆ ಮುನಿಸಿಕೊಂಡಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜನಾರ್ದನ ರೆಡ್ಡಿ ಅವರಿಗೆ ನೋವಿದೆ. ಪಕ್ಷದ ಹಿರಿಯರು ಅನದ್ನು ಸರಿಪಡಿಸುತ್ತಾರೆ. ಒಂದು ಕಾಲದಲ್ಲಿ ರೆಡ್ಡಿ ಅವರಿಂದ ಬಿಜೆಪಿಗೆ ಅನಕೂಲಮಾಡಿಕೊಂಡು ಸಿಎಂ ಆಗಿದ್ದಾರೆ. ಯಾರು ರೆಡ್ಡಿ ಅವರ ಅನಕೂಲದಿಂದ ಸಿಎಂ ಆಗಿದ್ದರೂ ಅವರು ಜನಾರ್ದನ ರೆಡ್ಡಿ ಸಹಾಯಕ್ಕೆ ಹೋಗಬೇಕಿದೆ ಎಂದು ಯತ್ನಾಳ ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌