TET Preparation: ನ. 6ರಂದು ನಗರದ 52 ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ- ಪರೀಕ್ಷಾರ್ಥಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ- ಡಿಸಿ ಸೂಚನೆ

ವಿಜಯಪುರ: ನ. 6 ರಂದು ನಡೆಯಲಿರುವ(ಟಿಇಟಿ) ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ಅಡೆ-ತಡೆ ಉಂಟಾಗದಂತೆ ಗಮನವಹಿಸಿ, ಅಭ್ಯರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ವ್ಯವಸ್ಥಿತವಾಗಿ ಪರೀಕ್ಷೆಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಜಯಪುರ ನಗರದ ಜಿ. ಪಂ. ಸಭಾಂಗಣದಲ್ಲಿ ನಡೆದ ಟಿಇಟಿ-2022ರ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪರೀಕ್ಷಾರ್ಥಿಗಳಿಗೆ ನೀರು, ಬೆಳಕು, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು.  ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಯಾವುದೇ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.  ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ, ಪ್ರತಿ ಕೇಂದ್ರದಲ್ಲಿ ಓರ್ವ ಆರೋಗ್ಯ ಸಹಾಯಕರನ್ನು ನಿಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರೀಕ್ಷೆ ಕೊಠಡಿಗಳಲ್ಲಿ ಸ್ವಚ್ಛತೆಯ ಕುರಿತು ಪರಿಶೀಲನೆ ನಡೆಸಬೇಕು.  ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅವರಿಗೆ ಪ್ರತ್ಯೇಕ ತಪಾಸಣಾ ಕೊಠಡಿಗಳ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆನ ನೀಡಿದರು.

ಎಸ್ಪಿ ಎಚ್. ಡಿ. ಆನಂದಕುಮಾರ ಮಾತನಾಡಿ, ಪರೀಕ್ಷೆ ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.  ಯಾವುದೇ ಅಕ್ರಮಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕು.  ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಲ್ಲ ಅಗತ್ಯ ಕ್ರಮಕೈಗೊಂಡಿದ್ದು, ಅಕ್ರಮ ರಹಿತ ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಡಿಡಿಪಿಐ ಶಿರಹಟ್ಟಿಮಠ  ಮಾತನಾಡಿ, ಒಟ್ಟು 52 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆಗಳು ನಡೆಯಲಿವೆ.  ಇದರಲ್ಲಿ 5 ಸರಕಾರಿ 24, ಅನುದಾನಿತ, 23, ಅನುದಾನ ರಹಿತ ಪರೀಕ್ಷಾ ಕೇಂದ್ರಗಳಾಗಿವೆ.  41 ಪ್ರಥಮ ಅಧಿವೇಶನ ಹೊಂದಿದ ಪರೀಕ್ಷೆ ಕೇಂದ್ರಗಳಿದ್ದು, ಪ್ರಥಮ ಅಧಿವೇಶನ ಹೊಂದಿದ 10760 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ದ್ವಿತೀಯ ಅಧಿವೇಶನ ಹೊಂದಿದ 52 ಪರೀಕ್ಷೆ ಕೇಂದ್ರಗಳಲ್ಲಿ 13407 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. 9 ಮಾರ್ಗಾಧಿಕಾರಿಗಳು, 52 ಮುಖ್ಯ ಅಧೀಕ್ಷಕರು, 52 ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, 1 ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಶಿರಹಟ್ಟಿಮಠ ತಿಳಿಸಿದರು.

ಈ ಸಭೆಯಲ್ಲಿ ಜಿ. ಪಂ. ಉಪಕಾರ್ಯದರ್ಶಿ ಡಾ. ವಿಜಯಕುಮಾರ ಆಜೂರ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿ

ಈ ಮಧ್ಯೆ ನ. 6 ರಂದು ಶಿಕ್ಷಕರ ಅರ್ಹತಾ (ಟಿಇಟಿ) ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳು ಸುವ್ಯವಸ್ಥಿತವಾಗಿ ನಡೆಯಲು ಮುಂಜಾಗ್ರತಾ ಕ್ರಮವಾಗಿ 52 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಆ ದಿನಗಳಂದು ಬೆ. 8 ರಿಂದ ಸಂ. 6ರ ವರೆಗೆ ಕಲಂ 144ರನ್ವಯ ನಿಷೇಧಾಜ್ಞೆ ಜಾರಿ ಮಾಡಿ ವಿಜಯಪುರ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌