Banajiga Protest: ಯತ್ನಾಳ, ಕಾಶಪ್ಪನವರ ವಿರುದ್ಧ ಬಸವ ನಾಡಿನಲ್ಲಿ ಬಣಜಿಗರ ಬಲ ಪ್ರದರ್ಶನ

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಣಜಿಗ ಸಮಾಜದ ವತಿಯಿಂದ ವಿಜಯಪುರ ನಗರದಲ್ಲಿ ಬಣಜಿಗ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ವಿಜಯಪುರ ನಗರದ ಗ್ರಾಮ ದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಶಕ್ತಿ ಪ್ರದರ್ಶನ ಮಾಡಿದರು.

ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಹಾಗೂ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಸಂಘದ ರಾಜ್ಯಾಧ್ಯಕ್ಷ ಅಂದಾನಪ್ಪ ಜವಳಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನಾ ಮೆರವಣಿಗೆ ಎಸ್. ಎಸ್. ರಸ್ತೆ, ಗಾಂಧಿ ಚೌಕ್, ಬಸವೇಶ್ವರ ಚೌಕ್ ಮತ್ತು ಅಂಬೇಡ್ಕರ್ ಚೌಕ್ ಮೂಲಕ ಸಂಚರಿಸಿತು.

ವಿಜಯಪುರದಲ್ಲಿ ಶ್ರೀ ಸಿದ್ಧೇಶ್ವರ ದೇವಸ್ಥಾನದ ಬಳಿ ಸೇರಿದ ಬಣಜಿಗ ಸಮುದಾಯದ ಕಾರ್ಯಕರ್ತರು

ಕೈಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಮತ್ತು ವಿಜಯಾನಂದ ಕಾಶಪ್ಪನವರ ಭಿತ್ತಿಪತ್ರ ಹಿಡಿದಿದ್ದ ಬಣಜಿಗ ಸಮಾಜದ ಜನರು ಇಬ್ಬರೂ ನಾಯಕರ ವಿರುದ್ಧ ಘೋಷಣೆ ಹಾಕಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ನಾನಾ ಮುಖಂಡರು ಮಾತನಾಡಿದರು.

ಕೇಂದ್ರ ಮಾಜಿ ಸಚಿವ ಮತ್ರು ವಿಜಯಪುರ ನಗರ ಶಾಸಕರ ಬಸವನಗೌಡ ಪಾಟೀಲ ಯತ್ನಾಳ ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಬಣಜಿಗ ಸಮಾಜದ ವಿರುದ್ಧ ಕೆಟ್ಟ ಮಾತುಗಳನ್ನು ಆಡಿದ್ದಾರೆ. ಅವರ ಮಾತುಗಳು ಸಮಾಜಕ್ಕೆ ಕೆಟ್ಟ ಹೆಸರನ್ನು ತಂದಿದೆ‌. ಶತಶತಮಾನಗಳಿಂದ ಎಲ್ಲರೂ ಒಂದು ಎಂದು ನಾವು ಬದುಕುತ್ತಿರುವಾಗ ಸಮಾಜದಲ್ಲಿ ಕೆಟ್ಟ ಹೆಸರು ತರುವ ಕೆಲಸವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಮಾಜಿ ಶಾಸಕ ವಿಜಯಾನಂದ ಕಾಸಪ್ಪನವರ ಮಾಡಿದ್ದಾರೆ. ಸಮಾಜದ ಹೆಸರು ಕೆಡಿಸುವ ಹೇಳಿಕೆ ನೀಡುವುದನ್ನು ಉಭಯ ನಾಯಕರು ನಿಲ್ಲಿಸಬೇಕು. ಇವರು ತಮ್ಮ ವರ್ತನೆಯನ್ನು ಮುಂದುವರಿದರೆ ಅದರ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇಂಥವರಿಗೆ ಸಮಾಜದಲ್ಲಿ ಗೌರವವನ್ನು ಕೊಡದೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಸಂಘದ ನಿಕಟ ಪೂರ್ವ ರಾಜ್ಯಾಧ್ಯಕ್ಷ ಬಸವರಾಜ ಹೆಸರೂರ ಮಾತನಾಡಿ, ಅನೇಕರು ನಮ್ಮ ಸಮಾಜದಲ್ಲಿ ಜನನಾಯಕರಾಗಿ ಹೋಗಿದ್ದಾರೆ. ಸಮಾಜದ ಜನರನ್ನು ಒಂದುಗೂಡಿಸಿ ಕೆಲಸವನ್ನು ಅವರೆಲ್ಲರೂ ಮಾಡಿದ್ದಾರೆ. ಸಮಾಜದಲ್ಲಿ ಶಾಂತಿಪ್ರಿಯರಾಗಿ ಅನೇಕ ಕಾರ್ಯಗಳು ಮಾಡಿರುತ್ತಾರೆ. ಆದರೆ ಈ ಇಬ್ಬರು ನಾಯಕರು ಸಮಾಜದಲ್ಲಿ ಮನಸುಗಳನ್ನು ಒಡೆಯುವ ಕಾಯಕವನ್ನು ಮಾಡುತ್ತಿದ್ದಾರೆ ಎಂದು ಬಣಜಿಗ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ, ಬಾಗಲಕೋಟ ಜಿಲ್ಲೆಯ ಅಧ್ಯಕ್ಷ ಶರಣಪ್ಪ ಗುಳೇದ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಟಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ, ಮುತ್ತು ಕಿಣಗಿ, ಶಿವಾನಂದ ಬಿದರಿ, ಗುರುಲಿಂಗಪ್ಪ ಅಂಗಡಿ, ಶರಣು ಸಬರದ, ಮಲ್ಲಿಕಾರ್ಜುನ ಕನಶೆಟ್ಟಿ, ಶರಣಪ್ಪ ಗುಳೇದ, ರವಿ ಕುಮಟಗಿ ಸೇರಿದಂತೆ ನಾನಾ ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿದರು.  ಅಲ್ಲದೇ, ಬಣಜಿಗರ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು‌.

ಗಣ್ಯ ವ್ಯಾಪಾರಸ್ಥರು, ಸಾಹಿತಿಗಳು, ವಿಜಯಪುರದ ನಗರ ಹಾಗೂ ಜಿಲ್ಲೆಯ ಬಣಜಿಗ ಸಮುದಾಯದ ಸಾವಿರಾರು ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

ಹೊಸ ಪೋಸ್ಟ್‌