ವಿಜಯಪುರ: ವಿಜಯಪುರ ಜಿ. ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ ಶಿಂಧೆ ಅವರು ಇಂಡಿ ತಾಲೂಕಿನ ಹೊರ್ತಿ, ಕೊಳೂರಗಿ, ಬಬಲಾದ ಮತ್ತು ಕಪನಿಂಬರಗಿ ಗ್ರಾ. ಪಂ. ವ್ಯಾಪ್ತಿಗಳಲ್ಲಿ ನಡೆಯುತ್ತಿರುವ ನಾನಾ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಳೂರಗಿ ಗ್ರಾ. ಪಂ. ವ್ಯಾಪ್ತಿಯ ಸಾವಳಸಂಗ ಗ್ರಾಮದ ಅರಣ್ಯ ಇಲಾಖೆ ಮತ್ತು ನರೇಗಾ ಯೋಜನೆಯಡಿ ಕೈಗೊಂಡ ಅಮೃತ ಸರೋವರ, ಸಸಿ ನೆಟ್ಟಿರುವ ಕಾಮಗಾರಿಗಳ ವೀಕ್ಷಿಸಿದ ಅವರು,
ಹೊರ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆಸ್ಪತ್ರೆಯ ಸೌಲಭ್ಯಗಳ ಕುರಿತು ಅಲ್ಲಿನ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿ, ಹಾಜರಾತಿ ಪರಿಶೀಲನೆ ನಡೆಸಿದರು. ದಿನದ 24ಗಂಟೆಯು ಆರೋಗ್ಯ ಸೇವೆ ಹೊಂದಿರುವ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯರು ಕರ್ತವ್ಯದಲ್ಲಿರಬೇಕು ಎಂದು ಸೂಚನೆ ನೀಡಿ, ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಯ ನಾನಾ ಕೊಠಡಿಗಳನ್ನು ವೀಕ್ಷಿಸಿದ ಅವರು, ಕಪನಿಂಬರಗಿ ಗ್ರಾ. ಪಂ. ವ್ಯಾಪ್ತಿಯಲ್ಲಿನ ಗುಂದವಾನ ಗ್ರಾಮದ ಸರಕಾರಿ ಶಾಲೆಗೆ ಭೇಟಿ ನೀಡಿ, ರಾಷ್ಟೀಯ ಹೆದ್ದಾರಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಶಾಲಾ ಕಟ್ಟಡ ಸ್ಥಳಾಂತರಕ್ಕೆ ತುರ್ತು ಕ್ರಮ ಕೈಗೊಂಡು ಟೆಂಡರ್ ಕರೆದು, ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಗುಣಮಟ್ಟದಿಂದ ಕೂಡಿದ ಶಾಲಾ ಕಟ್ಟಡ ನಿರ್ಮಿಸಬೇಕು ಎಂದು ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಚಿದಾನಂದ ಮಿಂಚನಾಳ ಅವರಿಗೆ ಸೂಚನೆ ನೀಡಿದರು. ಅಲ್ಲದೇ, ಶಾಲೆಯ ಮುಖ್ಯ ಶಿಕ್ಷಕರು, ಪಿಡಿಓ ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆ ನೀಡಿದರು.
ಬಬಲಾದ ಗ್ರಾ. ಪಂ. ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸಸ್ಯಪಾಲನಾ ಕ್ಷೇತ್ರಕ್ಕೆ ಭೇಟಿ ನೀಡಿ ಸಸಿಗಳನ್ನು ವೀಕ್ಷಿಸಿದರು. ಬಬಲಾದ ಗ್ರಾಮ ಪಂಚಾಯಿತಿಯ ಹೊಸ ಕಟ್ಟಡ ಹಾಗೂ ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ನೆಡಲಾದ ವಿವಿಧ ಬಗೆಯ ಸಸಿಗಳನ್ನು ವೀಕ್ಷಿಸಿದರು.
ಇಂಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಆವರಣ ಸ್ವಚ್ಛತೆ ಇಲ್ಲದೆ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಗ್ರೂಪ್ ಡಿ ಸಿಬ್ಬಂದಿಯವರೊAದಿಗೆ ಚರ್ಚೆ ನಡೆಸಿ, 7 ದಿನಗಳಲ್ಲಿ ಸ್ವಚ್ಛತೆ ಕಾರ್ಯ ಪೂರ್ಣಗೊಳ್ಳದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು. ಈ ಕುರಿತು ಪರಿಶೀಲಿಸಿ ಅನುಪಾಲನ ವರದಿ ನೀಡುವಂತೆ ಇಂಡಿ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ ಅವರಿಗೆ ಸೂಚನೆ ನೀಡಿದರು. ಜಿ. ಪಂ. ಅನುದಾನದಲ್ಲಿ ಕೆಆರ್‌ಐಡಿಎಲ್ ಅನುಷ್ಠಾನ ಇಲಾಖೆಯಡಿ ನಿರ್ಮಾಣಗೊಂಡ ಚಿಕ್ಕಮಕ್ಕಳ ವಾರ್ಡ್, ಹೊಸ ಕಟ್ಟಡವನ್ನು ಈ ಸಂದರ್ಭದಲ್ಲಿ ರಾಹುಲ ಶಿಂಧೆ ವೀಕ್ಷಿಸಿದರು.
ಇಂಡಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಾನಾ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು ಸಭೆ ನಡೆಸಿದ ಅವರು, ತೋಟಗಾರಿಕೆ ಇಲಾಖೆಯಡಿ ತಾಲೂಕಿನಲ್ಲಿ ಕೈಗೊಂಡಿರುವ ನಾನಾ ಬೆಳೆಗಳ ಪ್ರಗತಿ ಕುರಿತು ಚರ್ಚಿಸಿ, ಮಾವು ಬೆಳೆಗೆ ಪ್ರೋತ್ಸಾಹಿಸಲು ತಿಳಿಸಿದರು. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನರ್ಸರಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡುತ್ತಿರುವ ಗ್ರಾ. ಪಂ. ಗಳ ಪ್ರಗತಿ ಕುರಿತು ಚರ್ಚಿಸಿದರು.
ರೇಷ್ಮೆ ಇಲಾಖೆಯಡಿ ಮಾವಿನಹಳ್ಳಿ ಗ್ರಾಮದಲ್ಲಿನ ರೇಷ್ಮೆ ನರ್ಸರಿ ಪ್ರಗತಿ ಮಾಹಿತಿ ಕುರಿತು ಚರ್ಚಿಸಿ ಸೂಕ್ತ ನೀರಿನ ಸೌಲಭ್ಯ ಒದಗಿಸುವಂತೆ ಸೂಚಿಸಿದರು. ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ 200ಕ್ಕೂ ಹೆಚ್ಚು ಮಕ್ಕಳು ಉತ್ತಮ ಆರೋಗ್ಯ ಸೇವೆ ಪಡೆದಿದ್ದಾರೆ ಇದು ಉತ್ತಮ ಬೆಳವಣಿಗೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಾನುವಾರುಗಳಿಗೆ ಲಸಿಕೆ ಹಾಕುವ ಕೆಲಸ ತುರ್ತಾಗಿ ಪೂರ್ಣಗೊಳಿಸಬೇಕು ಗ್ರಾ. ಪಂ. ವ್ಯಾಪ್ತಿಯಲ್ಲಿ ಫಾಗಿಂಗ್ ಪ್ರಥಮಾದ್ಯತೆ ಮೇರೆಗೆ ಪಾಗಿಂಗ್ ಕಾರ್ಯ ಪೂರ್ಣಗೊಳಿಸಬೇಕು. ಡೆಂಗ್ಯೂ ಕಾಯಿಲೆ ಕುರಿತಾಗಿ ಜಾಗೃತಿ ಮೂಡಿಸಬೇಕು ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಸೂಕ್ತ ಸಮಯದಲ್ಲಿ ಪೂರ್ಣ ಮಾಡಬೇಕು, ನರೇಗಾ ಯೋಜನೆ ಅಡಿ ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ಹಿಂದೆ ಉಳಿದ ಪಿಡಿಓ ಗಳಿಗೆ ಕಾರಣ ಕೇಳಿ, ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು. ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕಲುಷಿತ ನೀರು ಪೂರೈಕೆಯಾಗಿ ಆರೋಗ್ಯದಲ್ಲಿ ವ್ಯತ್ಯಾಸ ಆಗದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ತಾ. ಪಂ. ಎಕ್ಸಿಕ್ಯೂಟಿವ್ ಎಂಜಿನಿಯರ್ ಸುನೀಲ ಮದ್ದಿನ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ರಾಹುಲ ಶಿಂಧೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಇಂಡಿ ತಾ. ಪಂ. ಎಕ್ಸಿಕ್ಯೂಟಿವ್ ಎಂಜಿನಿಯರ್ ಸುನೀಲ ಮದ್ದಿನ, ಇಂಡಿ ತಾಲೂಕಿನ ಸಹಾಯಕ ನಿರ್ದೇಶಕರು ಸಂಜಯ ಖಡಗೇಕರ, ಜಿಲ್ಲಾ ಅರಣ್ಯಾಧಿಕಾರಿ ಪ್ರಶಾಂತ, ಕೊಳೂರಗಿ ಪಿಡಿಓ ವೀರೇಶ, ಕಪನಿಂಬರಗಿ ಗ್ರಾ. ಪಂ. ವಿಜಯಾ, ಬಬಲಾದ ಪಿಡಿಓ ಸಿದ್ರಾಯ ಬಿರಾದಾರ ಸೇರಿದಂತೆ ಇತರೆ ಪಿಡಿಓ ಅಧಿಕಾರಿಗಳು ಮತ್ತೀತರರು ಉಪಸ್ಥಿತರಿದ್ದರು.