Shreeshail Padayatre: ಶ್ರೀಶೈಲ ಜಗದ್ಗುರುಗಳು ಶೋಭಾ ಯಾತ್ರೆ ಬಸವ ನಾಡಿಗೆ ಆಗಮನ- ಶಾಲೆಗಳಲ್ಲಿ ಧ್ಯಾನ ಆದೇಶ ಸ್ವಾಗತಿಸಿದ ಶ್ರೀಗಳು

ವಿಜಯಪುರ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕೈಗೊಂಡಿರುವ ಪಾದಯಾತ್ರೆ ಬಸವ ನಾಡು ವಿಜಯಪುರ ಜಿಲ್ಲೆಯನ್ನು ಪ್ರವೇಶಿಸಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಆರಂಭವಾಗಿರುವ ಈ ಪಾದಯಾತ್ರೆ ವಿಜಯಪುರ ನಗರ ಪ್ರವೇಶಿಸುತ್ತಿದ್ದಂತೆ ಅವರನ್ನು ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ಶ್ರೀಶೈಲ ಶ್ರೀಗಳು ಕೈಗೊಂಡಿರುವ ಪಾದಯಾತ್ರೆ ಬಸವ ನಾಡು ವಿಜಯಪುರ ನಗರಕ್ಕೆ ಆಗಮಿಸಿತು

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಧ್ಯಾನ ಮಾಡುವಂತೆ ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಸ್ವಾಗತಿಸುವುದಾಗಿ ತಿಳಿಸಿದರು.

ಧ್ಯಾನ ಎನ್ನುವುದು ಮನುಷ್ಯರ ಆರೋಗ್ಯಕ್ಕೆ ಟಾನಿಕ್ ಆಗಿದೆ.  ಯಾವುದೇ ಕ್ಷೇತ್ರವಿರಲಿ ಧ್ಯಾನ ಎನ್ನುವದು ಮಾನವರಿಗೆ ಉಪಯೋಗಿಯಾಗಿದೆ.  ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಶೋಬೆ ತರುತ್ತದೆ.  ಧ್ಯಾನ ಮನುಷ್ಯರಲ್ಲಿ ಚೈತನ್ಯ ತುಂಬುತ್ತದೆ.  ಈ ಹಿನ್ನೆಲೆಯಲ್ಲಿ ಸರಕಾರ ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಮುದ್ದೇಬಿಹಾಳ ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ರಾಜ್ಯದಲ್ಲಿ 6800 ಮಠಗಳಿದ್ದು, ನಮ್ಮ ಮಠಗಳು ಉಳಿಯಬೇಕು.  ಇವುಗಳ ರಕ್ಷಣೆಯಾಗಬೇಕು.  ದಾಸೋಹ ಪರಂಪರೆ ಉಳಿಸಿ ಬೆಳೆಸುವಲ್ಲಿ ಮಠಗಳ ಪಾತ್ರ ಅಮೂಲ್ಯವಾಗಿದೆ.  ಈ ಹಿನ್ನೆಲೆಯಲ್ಲಿ ಶ್ರೀಶೈಲ ಜಗದ್ಗುರುಗಳು ಪಾದಯಾತ್ರೆ ನಡೆಸುತ್ತಿದ್ದಾರೆ.  ಶ್ರೀಗಳ ಜೊತೆ ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೋಳ್ಳುತ್ತಿದ್ದಾರೆ ಎಂದು ಹೇಳಿದರು.

ಪುರ ಪ್ರವೇಶ ಶ್ರೀಗಳ ಪಾದಯಾತ್ರೆ

ಈ ಮಧ್ಯೆ, ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ ವಿಜಯಪುರ ತಾಲೂಕಿನ ಸಾರವಾಡ ಗ್ರಾಮದಿಂದ ಬೆಳಿಗ್ಗೆ ಹೊರಟ ಪಾದಯಾತ್ರೆ ಮ. 12ಕ್ಕೆ ವಿಜಯಪುರ ನಗರದ ಅಭಿನವ ಸಿದ್ಧಾರೂಡ ತಪೆೋವನದ ಬಳಿ ಪುರ ಪ್ರವೇಶಿಸಿತು.  ಈ ಸಂದರ್ಭದಲ್ಲಿ ವಿಜಯಪುರ ನಗರದ ಅಪಾರ ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ಬಳಿಕ ಜಗದ್ಗುರುಗಳ ಪಾದಯಾತ್ರೆ ನಗರ ಹೊರವಲಯದಲ್ಲಿರುವ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಅವರ ತೋಟದ ಮನೆಗೆ ಆಗಮಿಸಿತು.  ಅಲ್ಲಿ ಪಾದಯಾತ್ರಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.  ಬಳಿಕ ಜಗದ್ಗುರುಗಳ ದರ್ಶನಕ್ಕೆ ಆಗಮಿಸಿದ್ದ ವಿಜಯಪುರ ನಗರದ ಗಣ್ಯರು ಶ್ರೀಗಳ ಆಶೀರ್ವಾದ ಪಡೆದರು.

 

ಶ್ರೀಗಳ ಭವ್ಯ ಶೋಭಾ ಯಾತ್ರೆ

ಸಂಜೆ ವಿಜಯಪುರ ನಗರದ ಜೋರಾಪುರ ಪೇಟೆ ಗಲ್ಲಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಶಂಕರಲಿಂಗ ದೇವಸ್ಥಾನ, ಶಿವಾಜಿ ಚೌಕ್, ಗಾಂಧಿ ಚೌಕ್, ಶ್ರೀ ಸಿದ್ದೇಶ್ವರ ದೇವಸ್ಥಾನ, ಗಾಂಧಿಚೌಕ್, ಬಾಗಲಕೋಟೆ ಕ್ರಾಸ್ ಮೂಲಕ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದವರಗೆ ಭವ್ಯ ಶೋಭಾ ಯಾತ್ರೆ ನಡೆಯಿತು.

ನಾನಾ ವಾದ್ಯ ಮೇಳಗಳೊಂದಿಗೆ ಶೋಭಾ ಯಾತೆ ಬಸವ ನಾಡಿನ ಜನರ ಗಮನ ಸೆಳೆಯಿತು.  ಯಾತ್ರೆಯುದ್ದಕ್ಕೂ ಆಯಾ ಬಡಾವಣೆಗಳ ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೋಂಡರು.  ಬಳಿಕ ಸಂಜೆ 7ಕ್ಕೆ ನಗರದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಮೈದಾನದಲ್ಲಿ ಧರ್ಮಸಭೆ ನಡೆಯಿತು.  ಈ ಸಭೆಯಲ್ಲಿ ವಿಜಯಪುರ ಜಿಲ್ಲೆಯ ನಾನಾ ಮಠಾಧೀಶರು ಮತ್ತು ಗಣ್ಯರು ಪಾಲ್ಗೋಂಡರು.

Leave a Reply

ಹೊಸ ಪೋಸ್ಟ್‌