Kho Kho Tournament: ನ. 9, 10 ರಂದು ಪಿಯು ಕಾಲೇಜುಗಳ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿ- ಎಸ್ ಎಸ್ ಪಿಯು ಕಾಲೇಜ್ ಸಹಭಾಗಿತ್ವದಲ್ಲಿ ಆಯೋಜನೆ

ವಿಜಯಪುರ: ಬಸವ ನಾಡು ವಿಜಯಪುರ ನಗರದಲ್ಲಿ ನ. 9 ಮತ್ತು 10 ರಂದು ಎರಡು ದಿನಗಳ ಕಾಲ ಪಿಯು ಕಾಲೇಜುಗಳು ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿ ನಡೆಯಲಿದೆ ಎಂದು ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಎಸ್. ಎಸ್. ಪಿಯು ಕಾಲೇಜು ಆವರಣದ ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ ತಿಳಿಸಿದ್ದಾರೆ. 

ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ಆಸಕ್ತಿ ಮತ್ತು ಉತ್ಸಾಹದ ಫಲವಾಗಿ ಈ ಕ್ರೀಡಾಕೂಟ ಇದೇ ಮೊದಲ ಬಾರಿಗೆ ವಿಜಯಪುರ ಜಿಲ್ಲೆಗೆ ಸಿಕ್ಕಿದೆ.  ಬಿ ಎಲ್ ಡಿ ಇ ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಾವಳಿ ಯಶಸ್ಸಿಗಾಗಿ 12 ನಾನಾ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿ ಎಲ್ ಡಿ ಇ ಸಂಸ್ಥೆ, ಪಿಯು ಇಲಾಖೆ ಅಧಿಕಾರಿಗಳು

 

 

 

ನ. 9ರಂದು ನಡೆಯಲಿರುವ ಉದ್ಘಾಟನೆ ಸಮಾರಂಭದಲ್ಲಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ. ಎಸ್. ಪಾಟೀಲ ನಡಹಳ್ಳಿ, ಎಂ. ಬಿ. ಪಾಟೀಲ, ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ ಸದಸ್ಯರಾದ ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಪ್ರಕಾಶ ಹುಕ್ಕೇರಿ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿ ಇದಾಗಿದ್ದು, ಕ್ರೀಡಾಕೂಟಕ್ಕಾಗಿ ಆರು ಮೈದಾನಗಳನ್ನು ನಿರ್ಮಿಸಲಾಗಿದೆ.  ಈ ಕ್ರೀಡಾಕೂಟದಲ್ಲಿ 32 ಶೈಕ್ಷಣಿಕ ಜಿಲ್ಲೆಗಳಿಂದ 32 ಬಾಲಕ ಮತ್ತು 32 ಬಾಲಕಿಯರ ತಂಡಗಳ 863 ಕ್ರೀಡಾಪಟುಗಳು ಹಾಗೂ 80 ತರಬೇತಿದಾರರು ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ.  ಕ್ರೀಡಾಪಟುಗಳು ಮತ್ತು ಸಿಬ್ಬಂದಿಗಾಗಿ ಬಿ ಎಲ್ ಡಿ ಇ ಸಂಸ್ಥೆಯ ವತಿಯಿಂದ ಮೂರು ದಿನಗಳ ಕಾಲ ವಿಜಯಪುರ ಶೈಲಿಯ ರುಚಿಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಕ್ರೀಡಾಕೂಟದ ಯಶಸ್ಸಿಗಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.  ಈ ಪಂದ್ಯಾವಳಿಗಾಗಿ ಬಿ ಎಲ್ ಡಿ ಇ ಸಂಸ್ಥೆಯ ವತಿಯಿಂದ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಐ. ಎಸ್. ಕಾಳಪ್ಪನವರ ತಿಳಿಸಿದರು.

ವಿಜಯಪುರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್. ಎನ್. ಬಗಲಿ ಮಾತನಾಡಿ, ಈ ಕ್ರೀಡಾಕೂಟಕ್ಕಾಗಿ ಸರಕಾರದಿಂದ ರೂ. 11.75 ಲಕ್ಷ ಅನುದಾನ ಬಂದಿದೆ.  ಈ ಹಣವನ್ನು ಕ್ರೀಡಾಪಟುಗಳು ಸಿಬ್ಬಂದಿಯ ಟಿಎ ಮತ್ತು ಡಿಎಗಾಗಿ ವ್ಯಯಿಸಲಾಗುವುದು.  ಇನ್ನೂ ರೂ. 1 ಲಕ್ಷ ಅನುದಾನದ ಅಗತ್ಯವಿದ್ದು ಸರಕಾರದಿಂದ ಈ ಹಣ ಪಡೆಯಲು ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಆರ್. ಬಿ. ಕೊಟ್ನಾಳ ಮಾತನಾಡಿ, ಈ ಕ್ರೀಡಾಕೂಟಕ್ಕೆ ಆಗಮಿಸುವ ಕ್ರೀಡಾಪಟುಗಳು ಮತ್ತು ತರಬೇತಿದಾರರಿಗೆ ವಿಜಯಪುರ ನಗರದ ಎಂಟು ನಾನಾ ಪಿಯು ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.  ನ. 8 ರಿಂದಲೇ ಕ್ರೀಡಾಪಟುಗಳು ಮತ್ತು ತರಬೇತುದಾರರು ನಗರಕ್ಕೆ ಆಗಮಿಸಲಿದ್ದಾರೆ.  ಇವರಿಗಾಗಿ ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು, ಎಸ್. ಬಿ. ಆರ್ಟ್ಸ್ ಮತ್ತು ಕೆಸಿಪಿ ಸಾಯಿನ್ಸ್ ಕಾಲೇಜು, ಬಿ ಎಲ್ ಡಿ ಇ ನರ್ಸಿಂಗ್ ಕಾಲೇಜು, ರೂಪಾದೇವಿ ಪಿಯು ಕಾಲೇಜು, ಚೇತನಾ ಪಿಯು ಕಾಲೇಜು, ಚೈತನ್ಯಾ ಪಿಯು ಕಾಲೇಜು, ಎಕ್ಸಲೆಂಟ್ ಪಿಯು ಕಾಲೇಜು ಮತ್ತು ತುಂಗಳ ಸಾಯನ್ಸ್ ಪಿಯು ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.  ಅಲ್ಲದೇ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಂದ ಕ್ರೀಡಾಂಗಣಕ್ಕೆ ಆಗಮಿಸಲು ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಎಸ್. ಎಸ್. ಕೋರಿ, ಸಹಾಯಕ ನಿರ್ದೇಶಕ ಕೈಲಾಸ ಹಿರೇಮಠ, ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿ ಬಿ. ಆರ್. ಪಾಟೀಲ, ಎಸ್. ಎಸ್. ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಜಿ. ಡಿ. ಅಕಮಂಚಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌