ವಿಜಯಪುರ: ವಿಜಯಪುರ ಬಿಜೆಪಿ ಸಂಸದ ಮತ್ತು ದಲಿತ ಹಿರಿಯ ಮುಖಂಡರೂ ಆಗಿರುವ ರಮೇಶ ಜಿಗಜಿಣಗಿ ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತು ತಮ್ಮದೇ ಶೈಲಿಯಲ್ಲಿ ಉತ್ತರಿಸುವ ಮೂಲಕ ಸುಳಿವು ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವುದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಸಾಮಾನ್ಯ ಜನ ಅಂದರೆ ಪ್ರತಿಯೊಬ್ಬ ವ್ಯಕ್ತಿಯಿಂದಲೂ ನಾನು ವಿಧಾನ ಸಭೆಗೆ ಸ್ಪರ್ಧಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 18 ವರ್ಷಗಳ ಕಾಲ ಈ ಭಾಗದಲ್ಲಿ ಮಂತ್ರಿಯಾಗಿ, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇನೆ. ಈಗಲೂ ನಾನು ರಾಜಕಾರಣದಲ್ಲಿರುವುದರಿಂದ ಲೋಕಸಭೆಯ ಬದಲು ವಿಧಾನ ಸಭೆಯಿಂದ ಸ್ಪರ್ಧಿಸಿ ಎಂದು ನನ್ನ ಮೇಲೂ ಒತ್ತಡ ಹಾಕುತ್ತಿದ್ದಾರೆ ಎಂದು ಅವರು ತಿಳಿಸಿದರು.
ನಾನು ಎಲ್ಲಿಂದ ಎಂದು ನಮ್ಮ ಹೈಕಮಾಂಡ್ ನಿರ್ಧರಿಸುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಿರಿಯರು ನಿರ್ಧರಿಸುತ್ತಾರೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಇಲ್ಲಿಯೇ ನಿಲ್ಲು ಎಂದರೆ ಅಸೆಂಬ್ಲಿಗೆ ನಿಲ್ಲುತ್ತೇನೆ. ಪಾರ್ಲಿಮೆಂಟ್ ಗೆ ನಿಲ್ಲು ಎಂದರೆ ಅಲ್ಲಿ ನಿಲುತ್ತೇನೆ. ಯಾವುದೂ ಬೇಡ ಎಂದರೆ ಮನೆಯಲ್ಲಿ ಆರಾಮವಾಗಿ ಇರುತ್ತೇನೆ ಎಂದು ಈಗಾಗಲೇ ಕಾರ್ಯಕರ್ತರಿಗೆ ತಿಳಿಸಿದ್ದೇನೆ ಎಂದು ಸಂಸದರು ಸ್ಪಷ್ಟಪಡಿಸಿದರು.
ದಲಿತ ಸಿಎಂ ವಿಚಾರ
ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಆಸೆಯಾಗಿದ್ದು, ನಾನು ಸಾಯುವವರೆಗೂ ಸೈಲೆಂಟಾಗಿ ಹೋರಾಟ ಮಾಡುತ್ತೇನೆ. ಈ ರಾಜ್ಯದಲ್ಲಿ ದಲಿತರೇನು ಅಯೋಗ್ಯರಾ? ಅವರಿಗೇನು ಬುದ್ದಿ ಅಲ್ಲವಾ? ನನಗೆ ಈ ವಿಷಯದಲ್ಲಿ ತುಂಬಾ ನೋವಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ. 1ರಷ್ಟಿರುವ ಸಮುದಾಯದವರು ಮುಖ್ಯಮಂತ್ರಿಯಾಗಿ ಹೋಗಿದ್ದಾರೆ. ಶೇ. 2 ರಷ್ಟಿರುವ ಜನರೂ ಸಿಎಂ ಆಗಿ ಹೋಗಿದ್ದಾರೆ. ಆದರೆ, ಶೇ. 24 ರಷ್ಟು ಜನಸಂಖ್ಯೆ ಹೊಂದಿರುವ ದಲಿತರು ಯಾಕೆ ಮುಖ್ಯಮಂತ್ರಿಯಾಗಬಾರದು? ಎಂದು ಅವರು ಪ್ರಶ್ನಿಸಿದರು.
ದಲಿತರನ್ನು ಸಿಎಂ ಮಾಡುವುದು ಆಯಾ ಪಕ್ಷಗಳಿಗೆ ಬಿಟ್ಟಿದ್ದು. ನಮ್ಮ ಪಕ್ಷದಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ನಾನು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತೇನೆ. ನನ್ನ ಜೀವನದಲ್ಲಿ ನಾನೆಂದೂ ಸಿಎಂ ಆಗುವ ಕನಸು ಕಂಡವನಲ್ಲ. ಅಧಿಕಾರ ಮತ್ತು ಹಣವನ್ನು ಬಿಟ್ಟು ನಾನು ದೂರ ಇರುತ್ತೇನೆ ಎಂದು ಕೇಂದ್ರ ಮಾಜಿ ಸಚಿವರೂ ಆಗಿರುವ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ ಬಿಜೆಪಿಯ ನಾನಾ ಮುಖಂಡರು ಉಪಸ್ಥಿತರಿದ್ದರು.
ಬಳಿಕ ರಮೇಶ ಜಿಗಜಿಣಗಿ ಇಂಡಿ ಪಟ್ಟಣದಲ್ಲಿ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣಸಿಂಗ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೋಂಡರು.