ವಿಜಯಪುರ: ಪ್ರಸಕ್ತ ಆರ್ಥಿಕ ವರ್ಷದ ಕಬ್ಬು ನುರಿಸುವ ಹಂಗಾಮು ಆರಂಭವಾಗಿದ್ದು, ಸರಕಾರ ನಿಗದಿ ಪಡಿಸಿರುವ ಎಫ್ ಆರ್ ಪಿ ದರದ ಅನ್ವಯ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸಬೇಕು. ಕಬ್ಬಿನ ದರ ಹೆಚ್ಚಳಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ ಅವರು, ಸಕ್ಕರೆ ಕಾರ್ಖಾನೆಗಳು ನಿಗದಿತ ಅವಧಿಯೊಳಗೆ ಹಣವನ್ನು ಸಂದಾಯ ಮಾಡಬೇಕು. ಒಂದು ವೇಳೆ ವಿಳಂಬ ಮಾಡಿದರೆ,ನಿಯಮಾನುಸಾರ ಬಡ್ಡಿ ಹಣವನ್ನೂ ಸೇರಿಸಿ ಸಂದಾಯ ಮಾಡಬೇಕು ಎಂದು ಸಕ್ಕರೆ ಕಾರ್ಖಾನೆಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಬ್ಬು ಕಟಾವು ಮತ್ತು ಸಾರಿಗೆ ವೆಚ್ಚವನ್ನು ನಾನಾ ಸಕ್ಕರೆ ಕಾರ್ಖಾನೆಗಳು ನಾನಾ ದರ ಕಟಾವು ಮಾಡುತ್ತಿರುವುದರಿಂದಲೂ ಸಹ ತಾರತಮ್ಯ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಏಕ ದರ ಜಾರಿಗೊಳಿಸಲು ರೈತರು ಬೇಡಿಕೆ ಸಲ್ಲಿಸಿದ್ದು, ಈ ಕುರಿತು ಸರ್ಕಾರದ ಹಂತದಲ್ಲಿ ನಿರ್ಧಾರವಾಗಲಿರುವುದರಿಂದ ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು.. ಎಫ್.ಆರ್.ಪಿ. ದರವನ್ನು ಸರ್ಕಾರದ ಹಂತದಲ್ಲಿ ಆಗುವುದರಿಂದ ಅದರಲ್ಲೇನಾದರೂ ಲೋಪದೋಷಗಳಿದ್ದರೆ ಇದಕ್ಕೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಿ, ವ್ಯತ್ಯಾಸವನ್ನು ಸರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಎಫ್ ಆರ್ ಪಿ ದರವನ್ನು ಆಯಾ ಸಕ್ಕರೆ ಕಾರ್ಖಾನೆಗಳು,ಕಳೆದ ಸಾಲಿನಲ್ಲಿ ಕಬ್ಬು ನುರಿಸಿ ಉತ್ಪಾದಿಸಿದ ಸಕ್ಕರೆಯಾಧರಿಸಿ ಸರಕಾರ ದರ ನಿಗದಿಗೊಳಿಸಿರುತ್ತದೆ. ಸಾಗಾಣಿಕೆ ಮತ್ತು ಕಟಾವಿಗೆ ಕಿಲೋಮೀಟರ್‍ವಾರು ದರವನ್ನು ಸರಕಾರ ನಿಗದಿಪಡಿಸಿದ್ದು, ನಿಯಮಾನುಸಾರ ಈ ದರದಂತೆಯೇ ಕಾರ್ಖಾನೆಗಳು ಕಟಾವು ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು.
ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯ ಸಮೀಪದಲ್ಲಿಯೇ ಕಬ್ಬು ಲಭ್ಯವಿದ್ದರೂ ಸಹ ಕಾರ್ಖಾನೆಯವರು ಬೇರೆ ಕಡೆಗಳಿಂದ ಕಬ್ಬನ್ನು ತರಿಸಿ, ಗರಿಷ್ಠ ಸಾಗಾಣಿಕೆ ದರ ವಿಧಿಸಿ, ಅದೇ ದರವನ್ನು ಸಮೀಪದ ರೈತರಿಗೂ ವಿಧಿಸುತ್ತಿರುವ ಕುರಿತು, ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆಯವರು ಯಾವುದೇ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. 30 ಕಿ. ಮೀ. ವ್ಯಾಪ್ತಿಯ ಕಬ್ಬನ್ನು ಆದ್ಯತೆ ಮೇರೆಗೆ ಕಟಾವು ಮಾಡಬೇಕು. ಆಕಸ್ಮಿಕ ಬೆಂಕಿಯಿಂದ ಕಬ್ಬಿನ ಬೆಳೆಗೆ ಬೆಂಕಿ ಹತ್ತಿ ಸುಟ್ಟ ಪ್ರಸಂಗದಲ್ಲಿ ಕೂಡಲೇ ಅಂತಹ ಕಬ್ಬನ್ನು ವಿಳಂಬ ಮಾಡದೇ ಪ್ರಥಮ ಆದ್ಯತೆಯ ಮೇರೆಗೆ ಕಟಾವು ಮಾಡಬೇಕು ಎಂದು ಅವರು ಹೇಳಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲ ರೈತರ ಬಳಿ ಅಂಡ್ರಾಯಿಡ್ ಮೊಬೈಲ್‍ಗಳಿದ್ದು, ಆಯಾ ರೈತರಿಗೆ ಕಾರ್ಖಾನೆಯ ಇಳುವರಿ, ಕಬ್ಬಿನ ಕಟಾವು ಮಾಡುವ ದಿನಾಂಕ, ಹಣಜಮಾವಣೆ ಮಾಡಿದವಿವರ ಸೇರಿದಂತೆ ಎಲ್ಲ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕಬ್ಬು ಮಿತ್ರ ಎನ್ನುವ ತಂತ್ರಾಂಶವನ್ನು ರಚನೆ ಮಾಡಲಾಗಿದ್ದು, ಇದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ರಾಜ್ಯದಾದ್ಯಂತ ಈ ತಂತ್ರಾಂಶ ಅಳವಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ಉಪನಿರ್ದೇಶಕ ಮಾರಿಹಾಳ ಮಾತನಾಡಿ, ಬಾಲಾಜಿ ಶುಗರ್ಸ್ ಮತ್ತು ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆಯವರು ಈಗಾಗಲೇ ಸಭೆಗಳನ್ನು ನಡೆಸಿ, ರೈತರಿಗೆ ಇಳುವರಿ ಕುರಿತು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಸಭೆಗಳನ್ನು ನಡೆಸಿ ಇಳುವರಿ ಕುರಿತು ರೈತರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ವೇ ಬ್ರಿಡ್ಜ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕುರಿತು ಕಾನೂನು ಮಾಪನ ಇಲಾಖೆಯಿಂದ ಪರಿಶೀಲನೆ ನಡೆಸುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಅವರು ಸೂಚನೆ ನೀಡಿದರು.
ಈ ಸಭೆಯಲ್ಲಿ ಎಸ್ಪಿ ಎಚ್. ಡಿ. ಆನಂದಕುಮಾರ ಸೇರಿದಂತೆ ಜಿಲ್ಲೆಯ ನಾನಾ ತಾಲೂಕುಗಳ ತಹಸೀಲ್ದಾರರು, ರೈತ ಮುಖಂಡರಾದ ಬಾಲಪ್ಪಗೌಡ ಲಿಂಗದಳ್ಳಿ, ಸೋಮನಗೌಡ ಕೋಳೂರ, ಚನ್ನನಗೌಡ ಪಾಟೀಲ, ಸೋಮನಗೌಡ ಪಾಟೀಲ, ಅರವಿಂದ ಕುಲಕರ್ಣಿ, ಶಿವನಗೌಡ ಕೋನಾಳ, ಶಂಕರಗೌಡ ಲಿಂಗದಳ್ಳಿ ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ, ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.