ವಿಜಯಪುರ: ಬಸವ ನಾಡು ವಿಜಯಪುರ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿ ಮಾಡಿ 15 ನಿಮಿಷ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಯ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅರುಣಸಿಂಗ್, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ರವಿಕಗಾಂತ ಪಾಟೀಲ ಸೇರಿದಂತೆ ಬಿಜೆಪಿಯ ನಾನಾ ಮುಖಂಡರು ಪಾಲ್ಗೋಂಡಿದ್ದರು. ಆದರೆ, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತ್ರ ಈ ಸಮಾವೇಶದಿಂದ ದೂರವೇ ಉಳಿದಿದ್ದರು.
ವಿಜಯಪುರ ಜಿಲ್ಲೆಗೆ ಅರುಣಸಿಂಗ್ ಬರುವ ವಿಚಾರ ಗೊತ್ತಿದ್ದರೂ ಯತ್ನಾಳ ಗೈರಾಗಿದ್ದು, ಅರುಣಸಿಂಗ್ ಅವರನ್ನು ಕೊಂಚ ವಿಚಲಿತರನ್ನಾಗಿ ಮಾಡಿತ್ತು. ರಾಜ್ಯ ಉಸ್ತುವಾರಿ ಬಂದರೆ ಸಿಎಂ ರಿಂದ ಹಿಡಿದು ಸಚಿವರು ಬಂದು ಸ್ವಾಗತಿಸಿ ಕುಶಲೋಪರಿ ವಿಚಾರಿಸುವುದು ಸಂಪ್ರದಾಯವಾಗಿದೆ. ಆದರೆ, ತಮ್ಮ ತವರು ಜಿಲ್ಲೆ ವಿಜಯಪುರಕ್ಕೆ ಬಂದರೂ ಯತ್ನಾಳ ಅರುಣಸಿಂಗ್ ಅವರನ್ನು ಬೇಟಿ ಮಾಡದೇ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೋಂಡು ಅಂತರ ಕಾಯ್ದುಕೊಂಡಿದ್ದರು.
ಯತ್ನಾಳ ಗೈರಿನಿಂದ ಉಂಟಾಗಬಹುದಾದ ಗೊಂದಲ ಮತ್ತು ಹೋಗಬಹುದಾದ ತಪ್ಪು ಸಂದೇಶದ ಬಗ್ಗೆ ಜಾಗೃತರಾದ ಅರುಣಸಿಂಗ್ ಇಂಡಿಯಿಂದ ನೇರವಾಗಿ ವಿಜಯಪುರಕ್ಕೆ ಆಗಮಿಸಿ ಯತ್ನಾಳ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ವಿಜಯಪುರ ಮಹಾನಗರ ಪಾಲಿಕೆಯ ನೂತನ ಸದಸ್ಯರಾಗಿ ಆಯ್ಕೆಯಾದ ಬಿಜೆಪಿ ಕಾರ್ಪೋರೇಟರಗಳು ಕೂಡ ಅರುಣಸಿಂಗ್ ಅವರನ್ನು ಭೇಟಿ ಮಾಡಿದರು. ಅಲ್ಲದೇ, ಅವರಿಗೆ ಅರುಣಸಿಂಗ್ ಶುಭ ಕೋರಿದರು.
ಈ ಸಂದರ್ಭದಲ್ಲಿ ಸಿಂದಗಿ ಬಿಜೆಪಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಬಿಜೆಪಿ ಕಾರ್ಪೋರೇಟರ್ ಗಳಾದ ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ರಾಹುಲ ಜಾಧವ, ಕುಮಸಿ ಮುಂತಾದವರು ಉಪಸ್ಥಿತರಿದ್ದರು.
ಬಳಿಕ ಯತ್ನಾಳ ಅವರನ್ನು ಪ್ರತ್ಯೇಕವಾಗಿ ಕರೆದ ಅರುಣಸಿಂಗ್ ಅವರನ್ನು ಅಪ್ಪಿಕೊಂಡು ಸುಮಾರು 15 ನಿಮಿಷಗಳ ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದರು. ಈ ಮಾತುಕತೆಯ ವಿಚಾರಗಳು ಇನ್ನೂ ಬಹಿರಂಗವಾಗಿಲ್ಲ. ಆದರೇ, ಇತ್ತೀಚೆಗೆ ಯತ್ನಾಳ ಕುರಿತು ಅರುಣಸಿಂಗ್ ನೀಡಿರುವ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿತ್ತು. ಯತ್ನಾಳ ನಮ್ಮ ನಾಯಕರಲ್ಲ. ಅವರು ಪಕ್ಷದ ನೀತಿ ನಿರೂಪಣೆ ಸಮಿತಿಯ ಸದಸ್ಯರಲ್ಲ. ಅವರೊಬ್ಬ ಶಾಸಕ ಮಾತ್ರ. ಅವರ ಮಾತಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದರು.
ಈಗ ತಮ್ಮ ಕಾರ್ಯಕ್ರಮಕ್ಕೆ ಯತ್ನಾಳ ಗೈರಾಗಿರುವುದನ್ನು ಗಮನಿಸಿದ ಅರುಣಸಿಂಗ್ ಚುನಾವಣೆಗೂ ಮೊದಲೇ ಯತ್ನಾಳರನ್ನು ಶಾಂತವಾಗಿರಿಸುವ ತಂತ್ರ ಅನುಸರಿಸಿದ್ದಾರೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಆದರೆ, ಈ ಮಾತುಕತೆಯಲ್ಲಿ ಏನೆಲ್ಲ ಚರ್ಚೆಯಾಗಿದೆ? ಅರುಣಸಿಂಗ್ ಅವರು ಯತ್ನಾಳ ಅವರಿಗೆ ನೀಡಿರುವ ಭರವಸೆಗಳು ಏನು ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
One Response
Capable person only can become CM, don’t put any restrictions ,if so then Karnataka image and problems will increased.We will be in ditch!!!