Kho Kho Yatnal: ಅಭಿವೃದ್ಧಿ ಮಾಡುವವರು ನನ್ನ ಗೆಳೆಯರು- ಕತ್ತರಿ ಹಾಕುವವರು ನನ್ನ ದುಷ್ಮನ್- ಯತ್ನಾಳ

ವಿಜಯಪುರ: ವಿಶ್ವದಲ್ಲಿ ಇನ್ನು ಮುಂದೆ ಗ್ರಾಮೀಣ ಕ್ರೀಡೆಗಳಿಗೆ ಮಹತ್ವ ಬರಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಮೆಡಿಕಲ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಖೋ ಖೋ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಪಿಯು ಕಾಲೇಜುಗಳ ರಾಜ್ಯಮಟ್ಟದ ಬಾಲಕ-ಬಾಕಿಯರ ಖೋ ಖೋ ಪಂದ್ಯಾವಳಿ ಉದ್ಘಾಟನೆ ಅಂಗವಾಗಿ ನಾಯಕರು ಬಲೂನುಗಳನ್ನು ಹಾರಿಬಿಟ್ಟರು

ಕ್ರಿಕೆಟ್ ಜೊತೆಗೆ ಕಬಡ್ಡಿ ಮತ್ತು ಖೋ ಖೋ ಸೇರಿದಂತೆ ಭಾರತದ ಗ್ರಾಮೀಣ ಕ್ರೀಡೆಗಳಿಗೆ ಈಗ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿವೆ. ಪಿಯುಸಿ ಎಂದರೆ ಕೇವಲ ತರಗತಿಗಳಿಗೆ ಹಾಜರಾಗುವುದು, ಟ್ಯೂಶನ್ ಗಳಿಗೆ ಹೋಗುವುದು ಮತ್ತು ಶೇ., 90 ರಿಂದ ಶೇ. 95ರಷ್ಟು ಅಂಕ ಗಳಿಸುವುದಲ್ಲ. ಮಾನಸಿಕತೆಯ ಜೊತೆಗೆ ದೈಹಿಕವಾಗಿಯೂ ವಿಕಾಸ ಆಗುವ ಸಮಯ. ಪೋಷಕರು ತಮ್ಮ ಮಕ್ಕಳಿಗೆ ಕೇವಲ ಓದಿನ ಕಡೆಗೆ ಹೆಚ್ಚು ಒತ್ತು ನೀಡದೇ ಅವರಲ್ಲಿರುವ ಕ್ರೀಡಾಸಕ್ತಿಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಗ್ರಾಮೀಣ ಭಾಗದ ಸದೃಢ ಯುವಕರು ಈಗ ಸೇನೆ ಸೇರಿ ದೇಶ ಸೇವೆ ಮಾಡಲು ಅವಕಾಶ ಒದಗಿಸುತ್ತಿದ್ದಾರೆ. ಸೇನೆಗೆ ಕೇವಲ ಬಡವರು ಮಾತ್ರ ಸೇರುತ್ತಾರೆ. ಅದು ಕೇವಲ ಬಡವರು ಮಾಡುವ ಕೆಲಸ ಎಂದು ಅಪಹಾಸ್ಯ ಮಾಡುವವರಿಗೆ ಈ ಯೋಜನೆ ತಕ್ಕ ಉತ್ತರ ನೀಡುತ್ತಿದೆ. ಇಸ್ರೇಲಿನಲ್ಲಿ ಪ್ರತಿಯಬ್ಬರೂ ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ಬೇರೆ ಉದ್ಯೋಗಗಳಲ್ಲಿ ತೊಡಗುತ್ತಾರೆ. ಭಾರತ ಈಗ ಜಗತ್ತಿನಲ್ಲಿ ಆರ್ಥಿಕವಾಗಿ ಬ್ರಿಟನ್ ನ್ನು ಹಿಂದಿಕ್ಕಿ ಐದನೇ ಸ್ಥಾನ ಪಡೆದಿದೆ. ಅಲ್ಲಿನ ಪ್ರಧಾನಿ ಭಾರತೀಯ ಮೂಲದವರಾಗಿರುವುದು ಗಮನಾರ್ಹವಾಗಿದೆ ಎಂದು ಅವರು ಹೇಳಿದರು.

ಬಿ ಎಲ್ ಡಿ ಇ ಸಂಸ್ಥೆಯ ಆಶ್ರಯದಲ್ಲಿ ಈ ಕ್ರೀಡಾಕೂಟ ನಡೆಯುತ್ತಿದ್ದು, ಮಾಜಿ ಸಚಿವ ಎಂ. ಬಿ. ಪಾಟೀಲ ದಾನಶೂರಾಗಿದ್ದಾರೆ. ಅವರು ಅತಿಥಿ ಸತ್ಕಾರ ಇತರರಿಗೆ ಮಾದರಿಯಾಗಿದೆ. ನಾವು ರಾಜಕೀಯವಾಗಿ ಬೇರೆ ಪಕ್ಷದಲ್ಲಿದ್ದೇವೆ. ಆದರೆ, ನಾನು ಯಾವಾಗಲೂ ಅಭಿವೃದ್ಧಿ ಪರವಾಗಿದ್ದೇನೆ. ಯಾರು ಅಭಿವೃದ್ಧಿ ಮಾಡುತ್ತಾರೋ ಅವರು ನನ್ನ ಗೆಳೆಯರು. ಯಾರು ಕತ್ತರಿ ಹಾಕುತ್ತಾರೋ ಅವರು ನನ್ನ ದುಷ್ಮನಗಳು. ನನ್ನನ್ನು ಟೀಕಿಸುವುರು ಏನು ಬೇಕಾದರೂ ಹೇಳಲಿ., ನಾನು ಇದ್ದದ್ದನ್ನು ಇದ್ದಂಗೆ ಹೇಳುತ್ತೇನೆ ಎಂದು ಯತ್ನಾಳ ತಿಳಿಸಿದರು.

ಲಚ್ಯಾಣ ಬಿ. ಎಡ್. ಕಾಲೇಜಿನಲ್ಲಿ ಓದಿರುವ ಸಾವಿರಾರು ಜನರು ರಾಜ್ಯದ ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯ ನಾನಾ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೆಲ್ಲ ಬಂಥನಾಶ ಶ್ರೀಗಳು, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ, ದಿ. ಬಿ. ಎಂ. ಪಾಟೀಲರು ಕಾರಣ. ವಿಜಯಪುರದಲ್ಲಿ ಎರಡು ಗುಮ್ಮಟಗಳಿವೆ. ಒಂದು ಗೋಳಗುಮ್ಮಟ. ಎರಡನೇಯದು ವಚನ ಗುಮ್ಮಟ ಮತ್ತು ಈಗ ನಾನು ಮೂರನೇ ಗುಮ್ಮಟದ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ ಯಾರಾದರೂ ವಿಜಯಪುರ ಹೆಸರು ಪ್ರಸ್ತಾಪಿಸಿದರೆ ಸಾಕು ಯತ್ನಾಳ ಎಂದು ಹೇಳುತ್ತಾರೆ. ಯಾರ ಹಂಗಿಲ್ಲದೇ ವಿಧಾನ ಸಭೆಯಲ್ಲಿ ಮಾತನಾಡುವ ಮೂಲಕ ಜಿಲ್ಲೆಯ ಹೆಸರು ಪಸರಿಸುವಂತೆ ಮಾಡಿದ್ದೇನೆ ಎಂದು ಶಾಸಕರು ಹೇಳಿದರು.

ನಾನು ಈಗ 58 ವರ್ಷ ಪೂರೈಸಿದ್ದೇನೆ. ನಾನು ಚಿಕ್ಕವನಿದ್ದಾಗಿನಿಂದಲೂ ಪ್ರತಿನಿತ್ಯ ಒಂದು ಲೀಟರ್ ಹಾಲು ಕುಡಿಯುತ್ತಿದ್ದ ಕಾರಣ ಈಗಲೂ ದೈಹಿಕವಾಗಿ ಗಟ್ಟಿಯಾಗಿದ್ದೇನೆ. ಶಿಸ್ತಾಗಿ ಊಟ ಮಾಡುತ್ತೇನೆ. ಯಾರಾದರೂ ಉಪಾದ್ಯಾಪಿತನ ಮಾಡಿದರೆ ಚೆನ್ನಾಗಿ ಬೈಯ್ಯುತ್ತೇನೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಖೋ ಖೋ ಮಹಾಭಾರತ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಕ್ರಿಕೆಟ್ ಜೊತೆಗೆ ಗ್ರಾಮೀಣ ಕ್ರೀಡೆಗಳಿಗೂ ಆದ್ಯತೆ ನೀಡಬೇಕು. ಗೆಲುವು ಅಥವಾ ಸೋಲಿಗಿಂತ ಕ್ರೀಡೆಗಳಲ್ಲಿ ಪಾಲ್ಗೋಳ್ಳುವುದು ಮುಖ್ಯವಾಗಿದೆ. ಪರೀಕ್ಷೆಗಳಲ್ಲಿ ಶೇ. 100 ರಷ್ಟು ಅಂಕ ಗಳಿಸಿದರೂ ಈಗ ಸಿಇಟಿಯಲ್ಲಿ ಉತ್ತಮ ಸಾಧನೆ ಅವಶ್ಯವಾಗಿದೆ. ಕೋಚಿಂಗ್ ಹೆಸರಿನಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ಮಾನಸಿಕ ಒತ್ತಡ ಹೇರಬಾರದು. ವಿದ್ಯಾಭ್ಯಾಸದ ಜೊತೆಗೆ ದೈಹಿಕವಾಗಿಯೂ ಸದೃಢರಾಗಿರುವುದು ಮುಖ್ಯ. ಆದರೆ, ಪೋಷಕರು ಮಕ್ಕಳು ಹುಟ್ಟುವ ಮುಂಚೆಯೇ ಅವರ ವಿದ್ಯಾಭ್ಯಾಸದ ಬಗ್ಗೆ ನಿರ್ಧರಿಸುತ್ತಿರುತ್ತಾರೆ. ಇದು ಸರಿಯಲ್ಲ ಎಂದು ಹೇಳಿದರು.

ಬಿ ಎಲ್ ಡಿ ಇ ಸಂಸ್ಥೆ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ನಾಲ್ಕೈದು ವರ್ಷಗಳ ಹಿಂದೆ ಬಿ. ಎಂ. ಪಾಟೀಲ ಸ್ಪೋರ್ಟ್ಸ್ ಅಕ್ಯಾಡೆಮಿ ಆರಂಭಿಸಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲೂಯ ಅಕ್ಯಾಡೆಮಿ ಆರಂಭಿಸಲಾಗಿದೆ. ಇಲ್ಲಿ ಎಲ್ಲ ಕ್ರೀಡೆಗಳಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ ಎಂದು ಸುನೀಲಗೌಡ ಪಾಟೀಲ ಹೇಳಿದರು.
ವಿಧಾನ ಪರಿಷತ ಸದಸ್ಯ ಎಸ್. ವಿ. ಸಂಕನೂರ, ಮಾತನಾಡಿ, ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಬೇಕು ಎಂಬುದು ಪೋಷಕರ ಒತ್ತಡ ಹೇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳ ಕಡೆಗೆ ಆಸಕ್ತಿ ವಹಿಸುವುದಿಲ್ಲ. ಕ್ರೀಡೆಗಳಲ್ಲಿಯೂ ಸಾಧನೆ ಮಾಡಬಹುದು. ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗುವುದು ಸರಿಯಲ್ಲ. ಇಲ್ಲಿ ಕ್ರೀಡಾ ಮನೋಭಾವನೆ ಬೆಳೆಸಿಕೊಂಡರೆ ಜೀವನದಲ್ಲಿಯೂ ಕಠಿಣ ಪರಿಸ್ಥಿತಿಗಳನ್ನು ಸುಗಮವಾಗಿ ಎದುರಿಸಬಹುದು. ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು, 2018-19ರಲ್ಲಿ ಖೇಲೋ ಇಂಡಿಯಾ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ಇದೇ ವೇಳೆ ದೈಹಿಕ ಶಿಕ್ಷಕರ ಕೊರತೆಯ ಬಗ್ಗೆ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಒಟ್ಟು 5361 ಪಿಯು ಕಾಲೇಜುಗಳಿವೆ. ಆದರೆ, ಕೇವಲ 461 ಜನ ದೈಹಿಕ ಶಿಕ್ಷಕರಿದ್ದಾರೆ. 1203 ಸರಕಾರಿ ಪಿಯು ಕಾಲೇಜುಗಳಲ್ಲಿ ಕೇವಲ ಓರ್ವ ದೈಹಿಕ ಶಿಕ್ಷಕರಿದ್ದಾರೆ. ಹೀಗಾಗಿ ಕ್ರೀಡಾಪಟುಗಳಿಗೆ ಸೂಕ್ತ ತರಬೇತುದಾರರು ಸಿಗುತ್ತಿಲ್ಲ. ಇದು ಕ್ರೀಡಾಪಟುಗಳ ಸಾಧನೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು. ಇಂಥ ಸಂಕಷ್ಟದ ನಡುವೆಯೂ ಬಿ ಎಲ್ ಡಿ ಇ ಸಂಸ್ಥೆ ಉತ್ತಮ ರೀತಿಯಲ್ಲಿ ಈ ಕ್ರೀಡಾಕೂಟ ಆಯೋಜಿಸಿದೆ ಎಂದು ಶ್ಲಾಘಿಸಿದರು.

ವಿಧಾನ ಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿದ, ಶಿಕ್ಷಕರ ಸನಸ್ಯೆಗಳ ಬಗ್ಗೆ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕೆಲಸ ಮಾಡಬೇಕಿದೆ. ಪ್ರತಿ ತಿಂಗಳು ಶಿಕ್ಷಕರ ಸಮಸ್ಯೆಗಳ ಕುರಿತು ಶಿಕ್ಷಣ ಸಚಿವರು ಮತ್ತು ಸಿಎಂ ಬಳಿ ಪ್ರಸ್ತಾಪಿಸಿ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸುತ್ತಿದ್ದೇವೆ. ಚಕ್ಕಡಿ ಓಟ ಸಂಘಟಿಸುತ್ತಿದ್ದೇವೆ ಪ್ರಾಣಿಗಳಿಗೆ ಹಿಂಸೆಯಾಗದಂತೆ ಆಯೋಜಿಸುತ್ತಿದ್ದೇವೆ. ಎಂದು ಹೇಳಿದರು.
ಇದೇ ವೇಳೆ, ಈ ಕ್ರೀಡಾಕೂಟದಲ್ಲಿ ವಿಜೇತರಿಗೆ ಪ್ರೋತ್ಸಾಹ ನೀಡಲು ತಾವು ವೈಯಕ್ತಿಕವಾಗಿ ಧನ ಸಹಾಯ ಮಾಡುವುದಾಗಿಯೂ ಪ್ರಕಾಶ ಹುಕ್ಕೆರಿ ಭರವಸೆ ನೀಡಿದರು.

ಈ ಕಾರ್ಯಕ್ರಮಕ್ಕೂ ಮೊದಲು ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ, ಎಸ್. ಬಿ. ಸಂಕನೂರ ಎಸ್. ವಿ. ಸಂಕನೂರ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಎಸ್ಪಿ ಎಚ್. ಡಿ. ಆನಂದಕುಮಾರ, ಜಿ. ಪಂ. ಸಿಇಓ ರಾಹುಲ ಶಿಂಧೆ, ವಿಜಯಪುರ ಪಿಯು ಇಲಾಖೆ ಉಪನಿರ್ದೇಶಕ ಎಸ್. ಎನ್. ಬಗಲಿ, ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಆರ್. ಬಿ. ಕೊಟ್ನಾಳ, ಆಡಳಿತಾಧಿಕಾರಿಗಳಾದ ಬಿ. ಆರ್. ಪಾಟೀಲ, ದೈಹಿಕ ನಿರ್ದೇಶಕ ಎಸ್. ಎಸ್. ಕೋರಿ ಸೇರಿದಂತೆ ನಾನಾ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌