ವಿಜಯಪುರ: ಬಸವ ನಾಡು ವಿಜಯಪುರದಲ್ಲಿ ನಡೆದ ಪಿಯು ಕಾಲೇಜುಗಳ ಬಾಲಕ- ಬಾಲಕಿಯರ ಖೋ ಖೋ ಪಂದ್ಯಾವಳಿಯಲ್ಲಿ ಮಂಡ್ಯ ಬಾಲಕಿಯರು ಮತ್ತು ಮೈಸೂರು ಬಾಲಕರು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಬಿ ಎಲ್ ಡಿ ಇ ಸಂಸ್ಥೆಯ ಎಸ್. ಎಸ್. ಪಿಯು ಕಾಲೇಜು ಮತ್ತು ಪಿಯು ಇಲಾಖೆ ಆಯೋಜಿಸಿದ್ದ ಎರಡು ದಿನಗಳ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿ ವಿಜಯಪುರ ನಗರದ ಬಿ ಎಲ್ ಡಿ ಇ ಮೆಡಿಕಲ್ ಕಾಲೇಜು ಮೈದಾನದಲ್ಲಿ ಮುಕ್ತಾಯವಾಯಿತು.
ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮಂಡ ಬಾಲಕಿಯರು 11-8 ಅಂಕಗಳಿಂದ ಮೈಸೂರು ಬಾಲಕಿಯನ್ನು ಸೋಲಿಸಿ ಚಾಂಪಿಯನ್ ಆದರು. ರಕ್ಷಣೆ ಮತ್ತು ಧಾಳಿ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಮಂಡ್ಯ ಬಾಲಕಿಯರು ಗೆದ್ದ ಖುಷಿಯಲ್ಲಿ ಗಳಗಳನೆ ಕಣ್ಣೀರು ಹಾಕಿದ್ದು ಅವರ ಕ್ರೀಡಾ ಪ್ರೀತಿಗೆ ಸಾಕ್ಷಿಯಾಗಿತ್ತು.
ಮತ್ತೋಂದೆಡೆ ಬಾಲಕ ಫೈನಲ್ ನಲ್ಲಿ ಟೂರ್ನಾಮೆಂಟಿನ ಅತ್ಯುತ್ತಮ ಎಂದೇ ಹೆಸರಾಗಿದ್ದ ದಾವಣಗೆರೆ ತಂಡವನ್ನು ಮೈಸೂರಿನ ಬಾಲಕರು ಕೇವಲ ಒಂದು ಅಂಕದಿಂದ ಸೋಲಿಸುವ ಮೂಲಕ ಚಾಂಪಿಯನಶಿಪ್ ಗೆದ್ದು ಸಂಭ್ರಮಿಸಿದರು.
ಈ ಪಂದ್ಯದಲ್ಲಿ ಮೈಸೂರು ಬಾಲಕರು 14-13 ಅಂಕಗಳಿಂದ ದಾವಣಗೆರೆಯ ಬಾಲಕರನ್ನು ಸೋಲಿಸುವ ಮೂಲಕ ತಮ್ಮ ಪ್ರಾಬಲ್ಯ ಮೆರೆದರು. ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ಮೈಸೂರು ತಂಡ ಪೈನಲ್ ಪ್ರವೇಶಿಸಿದ್ದು ಗಮನ ಸೆಳೆಯಿತು.
ಬಳಿಕ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಥಮ ಸ್ಥಾನ ಪಡೆದ ಮಂಡ್ಯ ಬಾಲಕಿಯರಿಗೆ ಟ್ರೋಫಿ ಮತ್ತು ರೂ. 15 ಸಾವಿರ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ಮೈಸೂರು ಬಾಲಕಿಯ ತಂಡಕ್ಕೆ ಟ್ರೋಫಿ ಮತ್ತು ರೂ. 10 ಸಾವಿರ ನಗದು ಬಹುಮಾನ ವಿತರಿಸಲಾಯಿತು.
ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಮೈಸೂರು ತಂಡಕ್ಕೆ ಟ್ರೋಫಿ ಮತ್ತು ರೂ. 15 ಸಾವಿರ ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ದಾವಣಗೆರೆ ತಂಡಕ್ಕೆ ಟ್ರೋಫಿ ಹಾಗೂ ರೂ. 10 ಸಾವಿರ ನಗದು ಬಹುಮಾ ನೀಡಿ ಗೌರವಿಸಲಾಯಿತು.
ಈ ಕ್ರೀಡಾಕೂಟದ ಸಂಪೂರ್ಣ ವ್ಯವಸ್ಥೆ ಮಾಡಿದ್ದ ಬಿ ಎಲ್ ಡಿ ಇ ಸಂಸ್ಥೆಯ ಟ್ರೋಫಿಗಳನ್ನು ಹಾಗೂ ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ನಗದು ಬಹುಮಾನ ಪ್ರಾಯೋಜಿಸಿದ್ದರು.