Conference Preparation: ಬಸವ ನಾಡಿನಲ್ಲಿ ಪತ್ರಕರ್ತರ ರಾಜ್ಯಮಟ್ಟದ 37ನೇ ಸಮ್ಮೇಳನದ ಪೂರ್ವಭಾವಿ ಸಭೆ

ವಿಜಯಪುರ: ಬಸವ ನಾಡು ವಿಜಯಪುರದಲ್ಲಿ ನಡೆಯಲಿರುವ ಪತ್ರಕರ್ತರ ರಾಜ್ಯಮಟ್ಟದ 37ನೇ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಂಘದ ಎಲ್ಲ ಸದಸ್ಯರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಹೇಳಿದ್ದಾರೆ. 

ನಗರದ ವನಶ್ರೀ ಸಂಸ್ಥಾನ ಮಠದ ಸಭಾಭವನದಲ್ಲಿ ನಡೆದ ಸಮ್ಮೇಳನದ ಪೂರ್ವಸಿದ್ಧತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸಮ್ಮೇಳನಕ್ಕೆ ದೊಡ್ಡಮಟ್ಟದ ಸಿದ್ಧತೆ, ವ್ಯವಸ್ಥೆ ಆಗಬೇಕಾಗುತ್ತದೆ.  ಸಮ್ಮೇಳನವನ್ನು ಗಂಭೀರವಾಗಿ ಪರಿಗಣಿಸಿ ಸಂಘದ ಪ್ರತಿಯೊಬ್ಬ ಸದಸ್ಯರೂ ಅದರ ಭಾಗವಾಗಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು.  ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಮ್ಮೇಳನಕ್ಕೆ ರಾಜ್ಯದ ಪ್ರತಿ ಜಿಲ್ಲೆಗಳಿಂದಷ್ಟೇ ಅಲ್ಲ, ಹೊರರಾಜ್ಯ ಹಾಗೂ ಹೊರ ದೇಶಗಳಿಂದಲೂ ಪ್ರತಿನಿಧಿಗಳು ಆಗಮಿಸುತ್ತಾರೆ.  ಇದರಲ್ಲಿ ಪಾಲ್ಗೊಳ್ಳಲು ಬರುವ ಪತ್ರಕರ್ತರೆಲ್ಲರಿಗೂ ಆದರಾತಿಥ್ಯ ನೀಡುವಲ್ಲಿ ಯಾವುದೇ ರೀತಿ ಲೋಪವಾಗದಂತೆ ನೋಡಿಕೊಳ್ಳಬೇಕು.  ಎಲ್ಲರೊಂದಿಗೆ ಅತ್ಯಂತ ಗೌರವದಿಂದ ನಡೆದುಕೊಳ್ಳಬೇಕು.  ಇಲ್ಲಿ ನೀವು ತೋರುವ ಪ್ರೀತಿ, ನೀಡುವ ಆದರಾತಿಥ್ಯ ಸಮ್ಮೇಳನ ಮುಗಿಸಿಕೊಂಡು ಪತ್ರಕರ್ತರು ತಂತಮ್ಮ ಊರುಗಳಿಗೆ ಹೋದ ಮೇಲೂ ಅವರ ಮನದಲ್ಲಿ ಅಚ್ಚಳಿಯದೇ ಉಳಿಯುವಂತೆ ಕಾರ್ಯ ನಿರ್ವಹಿಸಬೇಕು.  ಈ ಮೂಲಕ ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಅವರು ಹೇಳಿದರು.

ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿದರು

ಎರಡು ದಿನಗಳ ಸಮ್ಮೇಳನ ಇದಾಗಿದ್ದು, ಮೊದಲನೇ ದಿನ ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  ಮರುದಿನ ನಡೆಯುವ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು.  ಸಮ್ಮೇಳನದ ಸಂದರ್ಭದಲ್ಲಿಯೇ ಸಂಘದ ಸಾಮಾನ್ಯ ಸಭೆಯನ್ನೂ ನಡೆಸಲಾಗುತ್ತದೆ.  ಹಿಂದಿನ ಮೂರು ಸಮ್ಮೇಳನದ ರೂಪುರೇಷೆಗಳು ಒಳಗೊಂಡಂತೆ ಈ ಸಮ್ಮೇಳನದ ಯಶಸ್ವಿಗೆ ಕಾರ್ಯಯೋಜನೆ ರೂಪಿಸಲಾಗುತ್ತದೆ.  ಸಮ್ಮೇಳನದ ಅಂಗವಾಗಿ ಪತ್ರಕರ್ತ ಎಂಬ ಸ್ಮರಣ ಸಂಚಿಕೆ ಹೊರತರಲಾಗುತ್ತದೆ ಎಂದು ಶಿವಾನಂದ ತಗಡೂರು ಹೇಳಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಸಿ. ಲೋಕೇಶ ಮಾತನಾಡಿ, ಸಮ್ಮೇಳನ ನಡೆಸಲು ಬೇರೆ- ಬೇರೆ ಜಿಲ್ಲೆಯವರು ಬೇಡಿಕೆ ಇಟ್ಟಿದ್ದರು.  ಈ ಬಾರಿಯೂ ಉತ್ತರ ಕರ್ನಾಟಕಕ್ಕೆ ಪ್ರಾಧಾನ್ಯತೆ ನೀಡಿ ವಿಜಯಪುರ ಜಿಲ್ಲೆಗೆ ಸಮ್ಮೇಳನ ನಡೆಸಲು ಜವಾಬ್ದಾರಿ ನೀಡಲಾಗಿದೆ.  ನಾಡಿನ ನಾನಾ ಕಡೆಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ಪ್ರೀತಿಯಿಂದ ಆದರಾತಿಥ್ಯ ನೀಡಬೇಕು ಎಂದು ಹೇಳಿದರು.

ಕೆಯುಡಬ್ಲ್ಯೂಜೆ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ ಠಾಕೂರ ಮಾತನಾಡಿ, ಪತ್ರಕರ್ತರ ಸಮ್ಮೇಳನ ಈ ಹಿಂದೆ ದಕ್ಷಿಣ ಭಾಗದ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು.  ಈಗ ಉತ್ತರ ಕರ್ನಾಟಕಕ್ಕೂ ಪ್ರಾಧಾನ್ಯತೆ ಸಿಗುತ್ತಿದೆ.  ಹಿಂದಿನ ಕಲಬುರಗಿ ಸಮ್ಮೇಳನದ ನಂತರ ಈ ವರ್ಷ ಪಕ್ಕದ ವಿಜಯಪುರ ಜಿಲ್ಲೆಗೆ 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ ನಡೆಸುವ ಅವಕಾಶ ದೊರೆತಿದ್ದು ಹೆಮ್ಮೆಯ ಸಂಗತಿಯಾಗಿದೆ. ನಮ್ಮೊಳಗೆ ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗೊತ್ತಿ ಸಂಘದ ಎಲ್ಲ ಸದಸ್ಯರು ಇದು ನಮ್ಮ ಮನೆಯ ಕಾರ್ಯಕ್ರಮವೆಂದು ಭಾವಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮ್ಮೇಳನ ಯಶಸ್ವಿಗೆ ಸಂಘದ ಎಲ್ಲ ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕು.  ಸಮ್ಮೇಳನದ ಪೂರ್ವ ಸಿದ್ಧತೆಯ ಚಟುವಟಿಕೆಗ¼ಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಐಎಫ್ ಡಬ್ಲ್ಯೂಜೆ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ. ಕೆ. ಕುಲಕರ್ಣಿ, ಡಿ. ಬಿ. ವಡವಡಗಿ, ವಿಶೇಷ ಆಮಂತ್ರಿತರಾದ ಕೌಶಲ್ಯ ಪನ್ನಾಳಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಪದಾಧಿಕಾರಿಗಳಾದ ಇಂದುಶೇೞರ ಮಣೂರ ಪ್ರಕಾಶ ಬೆಣ್ಣೂರ, ಅವಿನಾಶ ಬಿದರಿ, ಮಲ್ಲಿಕಾರ್ಜುನ ಕೆಂಭಾವಿ, ಶಕೀಲ ಬಾಗಮಾರೆ, ರಾಹುಲ ಆಪ್ಟೆ ಮುಂತಾದವರು ಉಪಸ್ಥಿತರಿದ್ದರು.

ಸಲಹಾ ಸಮಿತಿ ಸದಸ್ಯರಾದ ರುದ್ರಪ್ಪ ಆಸಂಗಿ, ರಾಜು ಕೊಂಡಗೂಳಿ, ಸಚ್ಚೆಂದ್ರ ಲಂಬು, ಜಿ. ಎಸ್. ಕಮತರ, ದೇವೇಂದ್ರ ಹೆಳವರ, ಅಶೋಕ ಯಡಳ್ಳಿ, ಇರ್ಫಾನ್ ಶೇಖ, ಹಿರಿಯ ಪತ್ರಕರ್ತರಾದ ಸುಶೀಲೇಂದ್ರ ನಾಯಿಕ, ಜಿ. ಸಿ. ಮುತ್ತಲದಿನ್ನಿ, ಗಾಂಧಿಗೌಡ ಪಾಟೀಲ, ಗುರು ಹಿರೇಮಠ, ಟಿ. ಕೆ. ಮಲಗೊಂಡ, ರಶ್ಮಿ ಪಾಟೀಲ, ಲಕ್ಷ್ಮೀ ವಾಲೀಕರ, ಕಾನಿಪ ಸಂಘದ ಸಿಂದಗಿ ತಾಲೂಕು ಅಧ್ಯಕ್ಷ ಆನಂದ ಶಾಬಾದಿ, ಇಂಡಿ ತಾಲೂಕು ಅಧ್ಯಕ್ಷ ಅಬುಶಾಮ ಹವಾಲ್ದಾರ, ಬಸವನ ಬಾಗೇವಾಡಿ ತಾಲೂಕು ಅಧ್ಯಕ್ಷ ಅಜೀಜ್ ಬಳಬಟ್ಟಿ, ನಿಡಗುಂದಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ತೊರಗಲ್ಲಮಠ, ದೇವರ ಹಿಪ್ಪರಗಿ ತಾಲೂಕು ಅಧ್ಯಕ್ಷ ಸಂಗಮಶ ಉತ್ನಾಳ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕುಂಬಾರ, ಚಡಚಣ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ, ಮುದ್ದೇಬಿಹಾಳ ತಾಲೂಕು ಮಾಜಿ ಅಧ್ಯಕ್ಷ ಅಮೀನಸಾಬ ಮುಲ್ಲಾ ಸೇರಿದಂತೆ ಸಂಘದ ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

ಹೊಸ ಪೋಸ್ಟ್‌