ವಿಜಯಪುರ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಸಿಂದಗಿ ತಾಲೂಕಿನ ನಾನಾ ಕಚೇರಿಗಳಿಗೆ ಭೇಟಿ ನೀಡಿ, ನಾನಾ ಕಚೇರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಸಿಂದಗಿ ಪುರಸಭೆ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ದಾಖಲಾತಿಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ವಸತಿ ಯೋಜನೆಗಳಡಿ ಸಾರ್ವಜನಿಕರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಸಾರ್ವಜನಿಕರಿಗೆ ತಮಗೆ ನೀಡಲಾದ ಜಾಗವನ್ನು ಗುರುತಿಸಲು ತೊಂದರೆಯಾಗುತ್ತಿರುವ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ಕೂಡಲೇ ಅವರಿಗೆ ನೀಡಲಾದ ಹಕ್ಕು ಪತ್ರದನ್ವಯ ಇರುವ ಜಾಗವನ್ನು ಹಕ್ಕು ಪತ್ರ ಪಡೆದ ಫಲಾನುಭವಿಗಳಿಗೆ ಗುರುತಿಸಿ ನೀಡಬೇಕೆಂದು ಸೂಚನೆ ನೀಡಿದರು.
ಸಿಂದಗಿ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ 13 ಜನರು ಲಿಖಿತವಾಗಿ ಹಾಗೂ 5 ಜನರು ಮೌಖಿಕವಾಗಿ ತಮ್ಮ ಕುಂದು,ಕೊರತೆಗಳನ್ನು ಸಲ್ಲಿಸಿದ್ದು, ಈ ಪೈಕಿ ಓರ್ವರು ತಮ್ಮ ಜಮೀನಿನ ವಾಟ್ನಿಗೆ ಸಂಬಂಧಿಸಿದ ದೂರನ್ನು ಸಲ್ಲಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಉಪನೋಂದಣಾದಿಕಾರಿಗಳಿಗೆ ಹಾಗೂ ಇನ್ನೋರ್ವ ಸಾರ್ವಜನಿಕರು ವಂಶವಾಳಿ ನೀಡಲು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ, ಶತಮಾನೋತ್ಸವ ಶಾಲೆಯನ್ನಾಗಿ ಆಯ್ಕೆಯಾದ ಗಣಿಯಾರ ಶಾಲಾ ಕಟ್ಟಡವು ದುರಸ್ತಿಗಾಗಿ ಇರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ತಹಸೀಲ್ದಾರ ಕಚೇರಿ, ಉಪನೋಂಣಾಧಿಕಾರಿಗಳ ಕಚೇರಿ ಹಾಗೂ ಭೂ ದಾಖಲೆಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಡಾ: ಶಾಂತವೀರ ಮನಗೂಳಿ, ಉಪಾಧ್ಯಕ್ಷ ಹಾಸಿಂಪೀರ ಆಳಂದ, ಸಿಂದಗಿ ತಹಶೀಲ್ದಾರ ನಿಂಗಪ್ಪ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಉಪ ನೋಂದಣಾದಿಕಾರಿ ಪಾಟೀಲ, ತಾಲೂಕಾ ಕೃಷಿ ಅಧಿಕಾರಿ ಸಿಂಘೆಗೋಳ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ತಾಲೂಕಾ ಪಂಚಾಯತ್ ಅಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.