ವಿಜಯಪುರ: ವೃದ್ಧಾಶ್ರ್ಮಗಳು ಕಡಿಮೆಯಾಗಬೇಕು ಎಂದು ಮಕ್ಕಳ ಸಾಹಿತಿ ಗೌರಮ್ಮ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.
ವಿಜಯಪುj ನಗರದ ವಿಜಯಪುರ ನಗರದ ಶುಭವಾಸ್ತು ನಗರದ ಬಸವೇಶ್ವರ ಭವನದಲ್ಲಿ ನಡೆದ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಯುವ ಪ್ರತಿಭೆ, ಮಕ್ಕಳಿಗೆ ಆರೋಗ್ಯಪೂರ್ಣ ಶಿಕ್ಷಣ ನೀಡಿದರೆ ಸಮೃದ್ಧ ಹಾಗೂ ಬಲಾಢ್ಯ ರಾಷ್ಟ್ರ ಕಟ್ಟಲು ಸಾಧ್ಯ. ಆದ್ದರಿಂದ ಪಾಲಕರು ತಂತಮ್ಮ ಮಕ್ಕಳಿಗೆ ಈ ನಿಟ್ಟಿನಲ್ಲಿ ಬೆಳೆಸಲು ಮುಂದಾಗಬೇಕು. ಬೇರೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಕೆ ಮಾಡಬಾರದು. ಒತ್ತಡವನ್ನೂ ಹೇರದೆ ಮಕ್ಕಳನ್ನು ಸಾಕಿ ಸಲುಹಬೇಕು. ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಿದರೆ ಇಂದು ವೃದ್ಧಾಶ್ರಮಗಳು ಇರುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ ಇನ್ನು ಮುಂದಾದರೂ ಪೋಷಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಅವರನ್ನು ನೀತಿವಂತ ಮತ್ತು ಚಾರಿತ್ರ್ಯವಂತರನ್ನಾಗಿ ಮಾಡಬೇಕು ಎಂದು ಗೌರಮ್ಮ ಸಂಗಮೇಶ ಬಬಲೇಶ್ವರ ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷ ಮತ್ತು ಮಕ್ಕಳ ಹಿರಿಯ ಸಾಹಿತಿ ಬಿ. ಆರ್. ನಾಡಗೌಡ ಮಾತನಾಡಿ, ಶಿಕ್ಷಣದಿಂದ ಮಕ್ಕಳು ಉಪಜೀವನ ಮಾರ್ಗ ಕಂಡುಕೊಂಡರೆ ಸಾಹಿತ್ಯಾಧ್ಯಯನದಿಂದ ಜೀವನದ ಮೌಲ್ಯಗಳನ್ನು ಕಲಿಯುತ್ತಾರೆ. ಆದ್ದರಿಂದ ಹಿರಿಯರು ಮಕ್ಕಳಿಗೆ ಬೆಲೆಯುಳ್ಳ ಆಟಿಕೆ, ಉಡುಪುಗಳಿಗೆ ಬದಲಾಗಿ ಮಕ್ಕಳ ಸಾಹಿತ್ಯ ಗ್ರಂಥಗಳನ್ನು ಕೊಂಡು ಕೊಡಬೇಕೆಂದು ಕಿವಿಮಾತು ಹೇಳಿದರು.
ಜ್ಞಾನಯೋಗಾಶ್ರಮದ ಪೂ.ಶ್ರೀ. ಬಸವಲಿಂಗ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಿದ್ಧ್ವೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸಾಹಿತ್ಯ ಪುರಸ್ಕೃತ ಹ. ಸ. ಬ್ಯಾಕೋಡ ಅವರು ಸುಮ್ ಸುಮ್ನೆ ನಗ್ತಿದೆ ಪಾಪು (ಜಂಬುನಾಥ ಕಂಚ್ಯಾಣಿ), ರಜೆಯ ಮಜಾ (ಬಿ. ಆರ್. ನಾಡಗೌಡ) ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಕೌಲಗಿ ಧ್ವಜಾರೋಹಣ ಮಾಡಿದರು.
ಹ. ಮ. ಪೂಜಾರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ವಿ. ಸಿ. ನಾಗಠಾಣ ಪುಸ್ತಕ ಮಳಿಗೆಯನ್ನು ಉದ್ಘಾಟಿಸಿದರು. ದ್ಯಾಮಗೊಂಡ ಬೆನಕನಹಳ್ಳಿ ಉಪಸ್ಥಿತರಿದ್ದರು. ಶಿಕ್ಷಣಾಧಿಕಾರಿ ಗುಳೇದಗುಡ್ಡ ಅವರು ಅತಿಥಿಗಳಾಗಿದ್ದರು. ಜಂಬುನಾಥ ಕಂಚ್ಯಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಮಲಾಕ್ಷಿ ಮುರಾಳ ಸ್ವಾಗತಿಸಿದರು. ಜಗದೀಶ ಸಾಲಹಳ್ಳಿ ವಂದಿಸಿದರು. ಸಿದ್ದಲಿಂಗಪ್ಪ ಹದಿಮೂರ ಕಾರ್ಯಕ್ರಮ ನಿರೂಪಿಸಿದರು.
ಪ್ರಾರಂಭದಲ್ಲಿ ಜ್ಞಾನಯೋಗಾಶ್ರಮದಿಂದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಿತು. ಸಮ್ಮೇಳನಾಧ್ಯಕ್ಷರು ಹಾಗೂ ಉದ್ಘಾಟಕರು ಭಾಗವಹಿಸಿದ್ದರು. ನೂರಾರು ಶಾಲಾ ಮಕ್ಕಳು ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದರು.
ಮಧ್ಯಾಹ್ನದ ಅವಧಿಯಲ್ಲಿ ಮಕ್ಕಳ ಚಿಂತನ ಗೋಷ್ಠಿ ಹಾಗೂ ರಸಪ್ರಶ್ನೆ ಕಾರ್ಯಕ್ರಮ ನಡೆದವು.
ಸಮಾರೋಪ ಸಮಾರಂಭ
ಡಾ. ಎಂ. ಎಸ್. ಮದಭಾವಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಸಮಾರೋಪ ಭಾಷಣ ಮಾಡಿದರು. ಕಂಚ್ಯಾಣಿ ಶರಣಪ್ಪ ದತ್ತಿ ಪ್ರಶಸ್ತಿಗಳನ್ನು ಸಿದ್ದನಗೌಡ ಬಿಜ್ಜೂರ, ಹ. ಮ. ಪೂಜಾರ ಮತ್ತು ಎಸ್. ಎಸ್. ಸಾತಿಹಾಳ ಅವರಿಗೆ ಪ್ರದಾನ ಮಾಡಲಾಯಿತು. ಸಾಧಕರಾದ ಎಸ್. ವೈ. ಗದಗ, ಮ. ಗು. ಯಾದವಾಡ, ಡಾ. ಸುರೇಶ ಕಾಗಲಕರ, ಅಪ್ಪು ಶಿರೋಳಮಠ, ಭಾರತಿ ಕುಂಣಗಾರ, ಬಸವರಾಜ ಮನಗೊಂಡ, ಎಂ. ಎಂ. ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಕಾಳಿಕಾ ಸಂಗೀತ ವಿದ್ಯಾಲಯ, ಗೀತಾಂಜಲಿ ಮಾದರಿ ಶಾಲೆ, ಎಕ್ಸಲೆಂಟ್ ಕನ್ನಡ ಶಾಲೆ, ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆ, ಶಾಂತಿನಿಕೇತನ ಶಾಲೆಯ ಮಕ್ಕಳು ಭಾಗವಹಿಸಿ ಕಲೆಯನ್ನು ಪ್ರದರ್ಶಿಸಿದರು.