ವಿಜಯಪುರ: ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಐಇಇಇ(ಇನಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್) ಫ್ಲ್ಯಾಗಶಿಪ್ ಇವೆಂಟ್ ಅಂತಾರಾಷ್ಟ್ರೀಯ ಸಮ್ಮೇಳನ ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ. 20 ಮತ್ತು 21ರಂದು ನಡೆಯಲಿದೆ.
ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ, ಸಂಶೋಧನಾ ವಿಜ್ಞಾನಿಗಳು, ಎಂಜಿನಿಯರ್ಸ್‍ಗಳು ಮತ್ತು ಸಂಶೋಧನೆಕಾರರಿಗೆ ಅವರ ಇತ್ತೀಚಿನ ಸಂಶೋಧನೆ ಆಲೋಚನೆಗಳನ್ನು ಪ್ರಸ್ತುತ ಪಡಿಸುವ ವ್ಯಾಪ್ತಿ ಮತ್ತು ಆಸಕ್ತಿಯ ಕ್ಷೇತ್ರಗಳನ್ನು ಈ ಸಮ್ಮೇಳನ ಹೊಂದಿದೆ. ಈ ಸಮ್ಮೇಳನವನ್ನು ಸುಸಜ್ಜಿತವಾಗಿ ನೆರವೇರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ದೇಶ ಮತ್ತು ವಿದೇಶಗಳ ಸಂಶೋಧನೆ ಲೇಖಕರಿಂದ 344 ಲೇಖನಗಳು ಭೌತಿಕವಾಗಿ ಮತ್ತು ಆನಲೈನ್ ಮೂಲಕ ಮಂಡಿಸಲಿದ್ದಾರೆ. ಸಮಾನಾಂತರವಾಗಿ ಈ ಗೋಷ್ಠಿಗಳು ನಡೆಯಲಿವೆ. ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಂಶೋಧಕರು ಸಿದ್ಧಪಡಿಸಿರುವ 37 ಲೇಖನಗಳು ಆಯ್ಕೆಯಾಗಿದ್ದು, ಒಂಬತ್ತು ನಾನಾ ವಿಷಯಗಳಲ್ಲಿ ಆಯ್ಕೆಯಾಗಿರುವ ಮತ್ತು ಅತ್ಯುತ್ತಮವಾಗಿ ಪ್ರಸ್ತುತ ಪಡಿಸಿರುವ ಸಂಶೋಧನೆ ಲೇಖಕರಿಗೆ ಉತ್ತಮ ಲೇಖನ ಪ್ರಶಸ್ತಿ ಮತ್ತು ಪ್ರಮಾಣ ಪತ್ರಗಳು ಲಭಿಸಲಿವೆ. ವಿದೇಶಗಳ ಲೇಖಕರಿಂದ 50 ಲೇಖನಗಳು ಸಮ್ಮೇಳನದಲ್ಲಿ ಪ್ರಸ್ತುತವಾಗಲಿವೆ ಎಂದು ತಿಳಿಸಿದರು.
ನ. 20ರಂದು ಬೆ. 11ಕ್ಕೆ ಕಾಲೇಜಿನ ಆವರಣದಲ್ಲಿ ಉದ್ಘಾಟನೆ ಸಮಾರಂಭ ನಡೆಯಲಿದೆ. ಗ್ವಾಲಿಯರ್ ಐಐಐಟಿಎಂ ನಿರ್ದೇಶಕ ಡಾ. ಎಸ್. ಎನ್. ಸಿಂಗ್ ಮತ್ತು ಇಸ್ರೋ ಉಪನಿರ್ದೇಶಕ ಯು. ಆರ್. ರಾವ್ ಸೆಟಲೈಟ್ ಕೇಂದ್ರದ ಆರ್. ವಿ. ನಾಡಗೌಡ ಅವರು ಭಾಗವಹಿಸಲಿದ್ದಾರೆ. ಪ್ರಧಾನ ಭಾಷಣಕಾರರಾಗಿ ನಾರ್ವೆ ದೇಶದ ವೆಸ್ಟರ್ನ್ ನಾರ್ವೆ ವಿಶ್ವವಿದ್ಯಾಲಯದ ಪ್ರೋಫೆಸರ್ ಡಾ. ಜೆರಿ ಚೊನ್ ವೆಲ್ ಲಿನ್ ಭಾಗವಹಿಸಿ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ಐಇಇಇ ಇಂಡಿಯಾ ಕೌನ್ಸಿಲ್ ಉಪಾಧ್ಯಕ್ಷ ಪುನಿತಕುಮಾರ ಮಿಶ್ರಾ ಮತ್ತು ಐಇಇಇ ಎನಕೆಎಸಎಸ(ನಾರ್ಥ ಕರ್ನಾಟಕ ಸಬ್ ಸೆಕ್ಸೆನ್) ಅಧ್ಯಕ್ಷ ಡಾ. ಬಸವರಾಜ ಎಸ್. ಅನಾಮಿ ಕುಲಸಚಿವರು ಕೆ. ಎಲ್. ಇ. ಟೆಕ್ ವಿಶ್ವವಿದ್ಯಾಲಯ ಹುಬ್ಬಳ್ಳಿ, ಯವಿಸಿಇ 2022ರ ಮುಖ್ಯಸ್ಥರಾದ ಡಾ. ಪಿ. ದೀಪಾ ಶೆಣೈ ಮತ್ತು ಡಾ.ಪರಮೇಶಚಾರಿ ಬಿ. ಡಿ. ಭಾಗವಹಿಸಲಿದ್ದಾರೆ. ಸಮ್ಮೇಳನದ ಮುನ್ನಾದಿನ ಬೆ. 9:30ಕ್ಜೆ ವಿದ್ಯಾರ್ಥಿಗಳಿಂದ ಎಂಜಿನಿಯರಿಂಗ್ ಸೈನ್ಸ್ ವಿಷಯದ ಮೇಲೆ ಪೋಸ್ಟರ್ ಪ್ರಸೆಂಟೇಷನ್ ಏರ್ಪಡಿಸಲಾಗಿದೆ. ಸುಮಾರು 100 ಪ್ರಾತ್ಯಕ್ಷತೆಗಳು ಪ್ರದರ್ಶನವಾಗಲಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆಗೆ ಸಮಾರಂಭದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಆರ್. ವಿ. ಕುಲಕರ್ಣಿ, ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳ ಸೃಜನಾತ್ಮಕ ಆಲೋಚನೆಗಳ ಪ್ರೋತ್ಸಾಹಕ್ಕೆ ಉತ್ತಮ ವೇದಿಕೆ ಇದಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಸಂಸ್ಥಾಪಕ ಅಧ್ಯಕ್ಷ ಡಾ. ಸುರೇಶ ಜಂಗಮಶೆಟ್ಟಿ ಹಾಗೂ ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಿ. ಎಲ್. ಡಿ. ಇ.ಸಂಸ್ಥೆಯ ಅಧ್ಯಕ್ಷ ಡಾ. ಎಂ. ಬಿ. ಪಾಟೀಲ, ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಜಿ. ಕೆ. ಪಾಟೀಲ ಮತ್ತು ನಿರ್ದೇಶಕ ಬಿ. ಎಂ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ.ವಿ.ಜಿ.ಸಂಗಮ ಮತ್ತು ಸಮ್ಮೇಳನದ ಸಂಘಟನಾ ಆಯೋಜಕರಾದ ಡಾ.ವೀರೇಶ ಗೋನಾಳರ ತಿಳಿಸಿದರು.
ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ವಿಜಯಪುರದ ನಮ್ಮ ಕಾಲೇಜಿನಲ್ಲಿ ಈ ಸಮ್ಮೇಳನ ಆಯೋಜನೆ ಮಾಡಲಾಗುತ್ತಿದೆ. ಇದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಹೊಸ ಹೊಸ ಸಂಶೋಧನೆಗಳ ಬಗ್ಗೆ ವಿಚಾರ ವಿನಿಮಯ ಮಾಡಲು ಮತ್ತು ದೇಶ ಹಾಗೂ ವಿದೇಶಗಳ ಸಂಶೋಧಕರಿಗೆ ಇಂಥ ಸಮ್ಮೇಳನಗಳು ಅನುಕೂಲವಾಗುತ್ತವೆ. ಆನಲೈನ್ ಮತ್ತು ಆಫಲೈನ್ ಮೂಲಕ ಎರಡೂ ಬಗೆಯಲ್ಲಿ ವಿಷಯ ಮಂಡನೆ ನಡೆಯಲಿವೆ. ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನ ಡಿಪ್ಲೋಮಾ, ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಪಂಚದ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ದೇಶ ವಿದೇಶಗಳಿಂದ ಸುಮಾರು 100ಕ್ಕೂ ಹೆಚ್ಚು ಪ್ರತಿನಿಧಿಗಳುಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಬಿ. ಎಲ್. ಡಿ. ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಉಪ ಪ್ರಾಂಶುಪಾಲ ಡಾ. ಗೀತಾಂಜಲಿ ಪಾಟೀಲ, ಡಾ. ಪ್ರದೀಪ ಮಾಳಜಿ ಮತ್ತು ಬಿ. ಎಲ್. ಡಿ. ಇ ಸಂಸ್ಥೆಯ ಪ್ರಚಾರಾಧಿಕಾರಿ ಡಾ. ಮಹಾಂತೇಶ ಬಿರಾದಾರರವರು ಉಪಸ್ಥಿತರಿದ್ದರು.