ವಿಜಯಪುರ: ಪ್ರತಿಭೆಯಿದ್ದರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವಿದೇಶದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ತೆರಳಲು ಪರದಾಡುತ್ತಿದ್ದ ಯುವ ಆಟಗಾರ್ತಿಗೆ ಬಿಜೆಪಿ ಕಾರ್ಪೋರೇಟರ್ ಪ್ರೇಮಾನಂದ ಬಿರಾದಾರ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.
ವಿಜಯಪುರ ನಗರದ ಎಸ್. ಆರ್. ಕಾಲನಿಯ ನಿವಾಸಿ ಅಕ್ಷತಾ ತಾರಾಪುರ ನಗರದ ನವಬಾಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಮುಗಿಸಿದ್ದಾರೆ. ಸಿಸ್ಟೋಬಾಲ್ ಆಟಗಾರ್ತಿಯಾಗಿರುವ ಈಕೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿರುವ ಅಕ್ಷತಾ ತಾರಾಪುರ ಥಾಯ್ಲೆಂಡ್ ದೇಶದ ಬ್ಯಾಂಕಾಕಿನಲ್ಲಿ ಡಿ.1 ರಿಂದ 5ರ ವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸಿಸ್ಟೋಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಆದರೆ, ಅಲ್ಲಿಗೆ ತೆರಳಲು ಈ ಆಟಗಾರ್ತಿಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು.
ನ. 26ರಂದು ಥಾಯ್ಲೆಂಡ್‌ಗೆ ತೆರಳಬೇಕಿರುವ ಅಕ್ಷತಾ ತಾರಾಪುರ ಅವರಿಗೆ ಒಟ್ಟು ರೂ. 95 ಸಾವಿರ ಹಣದ ಅಗತ್ಯವಿತ್ತು. ವಿಷಯ ತಿಳಿದ ವಾರ್ಡ್ ಸಂಖ್ಯೆ 22ರ ಬಿಜೆಪಿ ಕಾರ್ಪೊರೇಟರ್ ಪ್ರೇಮಾನಂದ ಬಿರಾದಾರ ಅವರು ವಿದ್ಯಾರ್ಥಿನಿಗೆ ರೂ. 50 ಸಾವಿರ ವೈಯಕ್ತಿಕವಾಗಿ ನೆರವು ನೀಡಿ ವಿದೇಶದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಲು ಸಹಾಯ ಮಾಡಿದ್ದಾರೆ.
ಈ ಕುರಿತು ಬಸವ ನಾಡು ವೆಬ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅಕ್ಷತಾ ತಾರಾಪುರ, ತಾನು ವಿದೇಶಕ್ಕೆ ತೆರಳಲು ಮನೆತವರು ತಮ್ಮ ಬಳಿಯಿದ್ದ ಅಲ್ಪಸ್ವಲ್ಪ ಚಿನ್ನವನ್ನೂ ಅಡವಿಟ್ಟಿದ್ದರು. ಆದರೂ, ಆ ಹಣ ಸಾಕಾಗಿರಲಿಲ್ಲ. ತಮ್ಮ ತಮ್ಮ ಬಡಾವಣೆಯ ಕಾರ್ಪೋರೇಟರ್ ಈ ವಿಷಯ ತಿಳಿದು ತಮಗೆ ಧನ ಸಹಾಯ ಮಾಡಿರುವುದು ಸಂತಸ ತಂದಿದೆ. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದು ತಿಳಿಸಿದ್ದಾರೆ.
ವಿನಾಯಕ ತಾರಾಪುರ ಮತ್ತು ಯಶೋಧಾ ತಾರಾಪುರ ದಂಪತಿಯ ಪುತ್ರಿಯಾಗಿರುವ ಅಕ್ಷತಾ ಅವರು ಆಂಧ್ರಪ್ರದೇಶ ರಾಜ್ಯದ ಆನಂತಪುರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದರು. ಇವರ ತಂದೆ ಹಿರಿಯ ನಾಗರಿಕರಾಗಿದ್ದು ಮನೆಯಲ್ಲಿಯೇ ಇರುತ್ತಾರೆ. ವಯಸ್ಕ ತಾಯಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಷ್ಟೇ ಪದವೀಧರೆಯಾಗಿರುವ ಅಕ್ಷತಾ ತಾರಾಪುರ ಸಿಸ್ಟೋಬಾಲ್ ಆಟಗಾರ್ತಿಯಾಗಿದ್ದಾರೆ. ಇವರು ಸಿಸ್ಟೀಬಾಲ್ ಆಟದಲ್ಲಿ ಮತ್ತಷ್ಟು ಯಶಶ್ವಿಯಾಗಲಿ ಎಂದು ಬಸವ ನಾಡು ವೆಬ್ ಕೂಡ ಹಾರೈಸುತ್ತದೆ. ಅಲ್ಲದೇ, ಈ ಆಟಗಾರ್ತಿಗೆ ಆರ್ಥಿಕವಾಗಿ ನೆರವು ನೀಡಿದ ಕಾರ್ಪೋರೇಟರ್ ಪ್ರೇಮಾನಂದ ಬಿರಾದಾರ ಕಾರ್ಯ ಕೂಡ ಶ್ಲಾಘನೀಯವಾಗಿದೆ.