BJP Puppet: ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಶೃಂಗಾರ ಗೊಂಬೆ, ಯತ್ನಾಳರ ಕೈಗೊಂಬೆ- ರವಿಕಾಂತ ಬಗಲಿ

ವಿಜಯಪುರ: ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಅವರು ಶೃಂಗಾರ ಗೊಂಬೆಯಂತಿಂದ್ದು ಶಾಸಕ ಬಸನಗೌಡ ಪಾಟೀಲ‌ ಯತ್ನಾಳ ಅವರ ಕೈಗೊಂಬೆಯಾಗಿದ್ದಾರೆ ಎಂದು ಬಿಜೆಪಿ ಉಚ್ಛಾಟಿತ ಮುಖಂಡ ರವಿಕಾಂತ ಬಗಲಿ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಬಿಜೆಪಿಯಿಂದ ಉಚ್ಛಾಟಿತರಾದ ಎಂಟು ಜನ ಮುಖಂಡರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಆರ್. ಎಸ್. ಪಾಟೀಲ ಕೂಚಬಾಳ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದ ಕಾರಣ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ಧಿಸಿದ್ದೇವೆ. ರಾಜೀನಾಮೆ ನೀಡಿದರೂ ಅದರ ಪರಿಜ್ಞಾನವಿಲ್ಲದ ಜಿಲ್ಲಾಧ್ಯಕ್ಷರು ತಮ್ಮನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ. ಈ ಮೂಲಕ ಯತ್ನಾಳ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿದರು.

ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಉಚ್ಛಾಟಿತ ಮುಖಂಡ ರವಿಕಾಂತ ಬಗಲಿ

ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಅವರಿಗೆ ರವಿಕಾಂತ ಬಗಲಿ ಗೆ 10 ವಿಚಾರಗಳನ್ನು ಪ್ರಸ್ತಾಪಿಸಿ ಪ್ರಶ್ನೆಗಳನ್ನು ಕೇಳಿದ್ದಾರೆ.

10 ವಿಚಾರಗಳು‌ ಮತ್ತು ಪ್ರಶ್ನೆಗಳು‌ ಇಲ್ಲಿವೆ.

 

1. ಪಕ್ಷಕ್ಕೆ ರಾಜೀನಾಮೆ ನೀಡಿದರೂ ನಮ್ಮನ್ನು ಉಚ್ಛಾಟನೆ ಮಾಡಿದ್ದು ಸರಿಯೇ?

2. ಪಕ್ಷದ ನಿರ್ಧಾರಗಳನ್ನು ವಿರೋಧಿಸುವ ಸಂದರ್ಭವನ್ನು ತಂದಿದ್ದು ತಾವೇ ಅಲ್ಲವೇ?

3. ಪಕ್ಷದ ಸಿದ್ದಾಂತ ಎಂದರೆ ಮೊದಲು ದೇಶ, ತದನಂತರ ಪಕ್ಷ, ನಂತರ ವ್ಯಕ್ತಿ. ಆದರೆ, ಈ ಸಿದ್ದಾಂತ ಗಾಳಿಗೆ ತೂರಿ ಯತ್ನಾಳ ಕೈಗೊಂಬೆಯಂತೆ ಕೆಲಸ ಯಾಕೆ ಮಾಡುತ್ತೀರಿ?

4. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಮಗೆ ಅಥವಾ ಹತ್ತಾರು ವರ್ಷ ಪಕ್ಷದಲ್ಲಿ ದುಡಿದವರಿಗೆ ಟಿಕೆಟ್ ನೀಡದೇ ಬೇರೆಯವರಿಗೆ ಯಾಕೆ ಟಿಕೆಟ್ ನೀಡಿದ್ದೀರಿ?

5. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡು ವಾರ್ಡುಗಳಲ್ಲಿ ಟಿಕೆಟ್ ನೀಡದೇ ನಿಮ್ಮ ಅಸಮರ್ಥತೆ ತೋರಿದ್ದೀರಿ. ಟಿಕೆಟ್ ನೀಡಲಾದ 33 ಜನರಲ್ಲಿ ಶಾಸಕರ ಬೆಂಬಲಿಗ 24 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೀರಿ. ಅದರಲ್ಲಿ ಕೇವಲ ಒಂಬತ್ತು ಅಭ್ಯರ್ಥಿಗಳು ಗೆದ್ದಿದ್ದಾರೆ. ಪಕ್ಷದ ವತಿಯಿಂದ ಟಿಕೇಟ್ ನೀಡಿದ ಎಲ್ಲ ಐದು ಅಭ್ಯರ್ಥಿಗಳು, ನಾಗಠಾಣ ಮತಕ್ಷೇತ್ರದಲ್ಲಿ ಮೂರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ‌ಯ ಎಲ್ಲ ಅಭ್ಯರ್ಥಿಗಳು ಒಟ್ಟು- 47759 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು- 40124 ಮತ ಗಳಿಸಿದ್ದಾರೆ. ಪಕ್ಷೇತರರು- 38644, ಜೆಡಿಎಸ್- 9717, ಆಮ್ ಆದ್ಮಿ- 4323, ನೋಟಾ‌ ಪರ- 1081 ಮತಗಳು ಬಂದಿವೆ. ಇದನ್ನು ಗಮನಿಸಿದರೆ, ಬಿಜೆಪಿಯ ಮತಗಳಿಗೆ ಕಳೆದ ಚುನಾವಣೆಗೆ ಹೋಲಿಸಿದರೆ ಹೆಚ್ಚೇನೂ ಆಗಿಲ್ಲ ಅಲ್ಲವೇ?

6. ಈ ಎಲ್ಲ ವಿಚಾರಗಳನ್ನು ಗಮನಿಸಿದರೆ ತಾವು‌ ಓರ್ವ ಅಸಮರ್ಥ ಅಧ್ಯಕ್ಷ ಮತ್ತು ವಿಜಯಪುರ ನಗರ ಶಾಸಕರ ಕೈಗೊಂಬೆಯಾಗಿದ್ದೀರಿ.

 

7. ಬಿಜೆಪಿಗೆ ಬಂದು‌ ಕೇವಲ‌ 10-15 ವರ್ಷಗಳಲ್ಲಿ ಸೇವೆ ಮಾಡಿ‌ದ್ದೀರಿ. ಈಗ ಜಿಲ್ಲಾಧ್ಯಕ್ಷರಾಗಿ ಮೂರು ವರ್ಷಗಳಲ್ಲಿ ನಿಮ್ಮ ಸ್ವಂತ ಮತಕ್ಷೇತ್ರವಾದ ಮುದ್ದೇಬಿಹಾಳ ಮತ್ತು ತಾಳಿಕೋಟೆಯಲ್ಲಿ ಪಕ್ಷವನ್ನು ಎಷ್ಟು ಸಂಘಟನೆ ಮಾಡಿದ್ದೀರಿ?

8. ತಮ್ಮ ವರ್ತನೆ ಇದೇ ರೀತಿ ಮುಂದುವರೆದರೆ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗುವುದರ ಜೊತೆಗೆ ಬಿಜೆಪಿಯನ್ನು ಅಧೋಗತಿಗೆ ಒಯ್ಯುತ್ತೀರಿ ಎಂಬ ಆತಂಕ ಬಿಜೆಪಿ ಕಾರ್ಯಕರ್ತರಲ್ಲಿದೆ.

9. ತನು, ಮನ, ಧನದಿಂದ ಪಕ್ಷ ಕಟ್ಟಿರುವ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷರಿಂದ ಅನ್ಯಾಯವಾಗುತ್ತಿದೆ.

10. ಶಾಸಕ ಯತ್ನಾಳರು ತಮ್ಮ ಭಾಷಣದಲ್ಲಿ ರೂ. 1000 ಕೋ. ಹಣ ಕೊಟ್ಟವರಿಗೆ ಮಂತ್ರಿಸ್ಥಾನ, ರೂ. 2500 ಕೋ. ನೀಡಿದವರಿಗೆ ಮುಖ್ಯಮಂತ್ರಿ ಸ್ಥಾನ ಎಂದು ಹೇಳಿಕೆ ಕೊಟ್ಟಾಗ ನೀವೇನು ಮಲಗಿಕೊಂಡಿದ್ದೀರಾ? ನಮ್ಮಂಥ ಸಣ್ಣ ಕಾರ್ಯಕರ್ತರ ಮೇಲೆ ಪೌರುಷ ತೋರಿಸುತ್ತೀರಾ? ತಾವೊಬ್ಬ ಶೃಂಗಾರ ಗೊಂಬೆಯಂತೆ ಇದ್ದೀರಿ. ಪಕ್ಷ ಸಂಘಟನೆಯ ಯಾವುದೇ ಶಕ್ತಿ ನಿಮ್ಮಲ್ಲಿ ಇಲ್ಲ. ಈ ಕುರಿತು ಸ್ಪಷ್ಟನೆ ನೀಡಬೇಕು‌ ಎಂದು ರವಿಕಾಂತ ಬಗಲಿ ಒತ್ತಾಯಿಸಿದ್ದಾರೆ.

ಯತ್ನಾಳ ಹಿಂದು ಹುಲಿ, ಹೆಬ್ಬುಲಿ ಅಲ್ಲ ಎಂದು ಟೀಕೆ

ಇದೇ ವೇಳೆ, ಶಾಸಕ‌ ಯತ್ನಾಳ ಹಿಟ್ಲರ್ ನಂತೆ ವರ್ತಿಸುತ್ತಿದ್ದಾರೆ. ಅವರು ಹಿಂದು ಹುಲಿ, ಹೆಬ್ಬುಲಿ ಅಲ್ಲವೇ ಅಲ್ಲ. ಅವರು ಅದಕ್ಕೆ ಅರ್ಹರಲ್ಲ ಎಂದು ರವಿಕಾಂತ ಬಗಲಿ ಹೇಳಿದರು.

ಇದು ಟ್ರೇಲರ್ ಮಾತ್ರ

ಶಾಸಕ ಯತ್ನಾಳ ಅವರ ಕುರಿತು ತಾವು ಈಗ ಮಾತನಾಡಿರುವುದು ಟ್ರೇಲರ್ ಮಾತ್ರ. ಆದರೆ, ಇನ್ನಷ್ಟು ವಿಷಯಗಳನ್ನು ಸಧ್ಯದಲ್ಲಿಯೇ ಬಹಿರಂಗ ಪಡಿಸುವುದಾಗಿ ಬಿಜೆಪಿ ರೈತ ಮೋರ್ಚಾ ಮಾಜಿ‌ ಮುಖಂಡರೂ ಆಗಿರುವ ರವಿಕಾಂತ ಬಗಲಿ ಇದೇ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮತ್ತೋಬ್ಬ ಮುಖಂಡ ರಾಜು ಬಿರಾದಾರ, ಪಕ್ಷೇತರರಾಗಿ‌ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಗಳೂರು ಮತ್ತು ಮುಧೋಳ ನಾಯಕರಿಂದ ಹಣಕಾಸಿನ ನೆರವು ಸಿಕ್ಕಿದೆ ಎಂದು ಶಾಸಕ‌ ಯತ್ನಾಳ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಅಭಿಷೇಕ‌ ಸಾವಂತ, ಶ್ರೀಶೈಲ ಹಳ್ಳಿ, ಬಾಬು ಚವ್ಹಾಣ, ಬಾಬು ಏಳಗಂಟಿ, ಶಿವಾಜಿರಾವ ಪಾಟೀಲ ಮತ್ತು ಚಿನ್ನು ಚಿನಗುಂಡಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌