ವಿಜಯಪುರ: ಮಧ್ಯರಾತ್ರಿ ಕಾರೊಂದು ರಸ್ತೆ ಬದಿಯ ಸುಮಾರು ಐದು ಹೋಟೇಲುಗಳಿಗೆ ನುಗ್ಗಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಬಳಿ ಸಂಭವಿಸಿದೆ.
ಈ ಗ್ರಾಮದ ರಸ್ತೆಯ ಬಳಿ ಸಾಲುಸಾಲಾಗಿ ಹೋಟೇಲುಗಳಿವೆ. ಮಧ್ಯರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರು ಒಂದಾದ ಮೇಲೋಂದರಂತೆ ಎರಡು ಹೋಟೇಲುಗಳಿಗೆ ನುಗ್ಗಿದ್ದು ಈ ಹೋಟೇಲುಗಳಲ್ಲಿದ್ದ ಪೀಠೋಪಕರಣಗಳು ಧ್ವಂಸವಾಗಿವೆ. ಆದರೆ, ಹೋಟೇಲುಗಳಲ್ಲಿದ್ದ ಜನರು ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಜಯಪುರ ಮೂಲದ ಕಾರು
ಮಹೀಂದ್ರಾ XUV KA28/M-9169 ನಂಬರ್ ನ ಮಹೀಂದ್ರಾ ಕಾರು ಇದಾಗಿದೆ. ಈ ಕಾರು ವಿಜಯಪುರ ನಗರದ ವಿಠ್ಠಲ ಗೂಗ್ಯಾಳ ಎಂಬುವರಿಗೆ ಸೇರಿದೆ ಎನ್ನಲಾಗಿದೆ.
ಸಾರವಾಡ ಗ್ರಾಮದ ರಸ್ತೆ ಬದಿಯಲ್ಲಿದ್ದ ಹತ್ತಾರು ಗೂಡಂಗಡಿ ಹೊಟೇಲ್‌ಗಳು ಕಾರಿನ ರಭಸಕ್ಕೆ ಸಂಪೂರ್ಣ ಹಾಳಾಗಿವೆ.
ಕುಡಿದ ಮತ್ತಿನಲ್ಲಿದ್ದ ಚಾಲಕ?
ಈ ಮಧ್ಯೆ, ಈ ಕಾರನ್ನು ಓಡಿಸುತ್ತಿದ್ದ ಕಾರನ್ನು ಚಾಲಕ
ಕುಡಿದ ಮತ್ತಿನಲ್ಲಿ ಅತೀ ವೇಗವಾಗಿ ಓಡಿಸುತ್ತಿದ್ದ ಎಂದು ಸಾರವಾಡ ಗ್ರಾಮದ ಪ್ರತ್ಯಕ್ಷ್ಯದರ್ಶಿಗಳು ಆರೋಪಿಸಿದ್ದಾರೆ. ಅಲ್ಲದೇ, ಮದ್ಯದ ಅಮಲಿನಲ್ಲಿದ್ದ ಡ್ರೈವರ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ದ್ದಾರೆ. ಈ ಕಾರು ಚಾಲಕ ಸಂಪೂರ್ಣ ಕುಡಿದ ನಶೆಯಲ್ಲಿ ಕಾರು ಓಡಿಸುತ್ತಿದ್ದ ಎನ್ನಲಾಗಿದೆ.
ಈ ಅಪಘಾತದಲ್ಲಿ ಈಶ್ವರಯ್ಯ ಜಮಖಂಡಿ ಅವರಿಗೆ ಸೇರಿದ ಸದಾಶಿವ ಹೊಟೇಲ ಮತ್ತು ಶಾಂತಮ್ಮ ಮಲ್ಲಿಕಾರ್ಜುನ ಬಟಗಿ ಅವರಿಗೆ ಸೇರಿದ ಕಾವೇರಿ ಹೋಟೇಲುಗಳಿಗೆ ಸುಮಾರು ರೂ. 6 ಲಕ್ಷ ಹಾನಿಯಾಗಿದೆ. ಅಲ್ಲದೇ, ಹೋಟೇಲಿನ ಮುಂದೆ ನಿಲ್ಲಿಸಲಾಗಿದ್ದ ಮಲ್ಲಿಕಾರ್ಜುನ ಬಟಗಿ ಎಂಬುವರಿಗೆ ಸೇರಿದ ಬೈಕ್ ನಂ KA-27/K-2825 ನುಜ್ಜುಗುಜ್ಜಾಗಿದೆ. ಈ ಸಂದರ್ಭದಲ್ಲಿ ಗುಡ್ಡಾಪುರಕ್ಕೆ ಪಾದಯಾತ್ರೆಗೆ ತೆರಳುತ್ತಿದ್ದವರೂ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಕಾರು ವಿಜಯಪುರದಿಂದ ಬಬಲೇಶ್ವರ ಕಡೆಗೆ ತೆರಳುತ್ತಿತ್ತು. ಕಾರಿನ ವೇಗದ ರಭಸಕ್ಕೆ ರಸ್ತೆಯ ಬದಿಯಲ್ಲಿ ಸುಮಾರು ಮೂರು ಅಡಿಗೂ ಹೆಚ್ಚು ಎತ್ತರವಿದ್ದ ಪಾದಯಾತ್ರಿಗಳ ಫುಟಪಾತ್ ಕಲ್ಲುಗಳೂ ಹಾರಿ ಹೋಗಿವೆ. ಹೋಟೇಲಿನಲ್ಲಿದ್ದ ನಾವು ಉಳಿದಿದ್ದೆ ಪವಾಡ ಎಂದು ಮಲ್ಲಿಕಾರ್ಜುನ ಬಟಗಿ ಬಸವ ನಾಡು ವೆಬ್ ಗೆ ದೂರವಾಣಿ ಮೂಲಕ ಆತಂಕದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಘಟನೆಯ ಬಳಿಕ ಪೊಲೀಸರು ಕಾರನ್ನು ವಶಕ್ಕೆ ಪಡೆದು ಚಾಲಕನನ್ನು ಮನೆಗೆ ಕಳುಹಿಸಿದ್ದಾರೆ ಎಂದು ಮಲ್ಲಿಕಾರ್ಜುನ ಬಟಗಿ ಮಾಹಿತಿ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.