ವಿಜಯಪುರ: ಸರಕಾರದ ನಾನಾ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಮತ್ತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬುಧವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ವಾರ್ತಾ ಇಲಾಖೆಯಿಂದ ಬೀದಿ ನಾಟಕ- ಜಾನಪದ ಕಲಾ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ, ಸರಕಾರದ ಜನಪ್ರಿಯ ಮತ್ತು ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಹಾಗೂ ಮನವರಿಕೆ ಮಾಡಿಕೊಡುವಲ್ಲಿ ಕಲಾತಂಡಗಳ ಪಾತ್ರ ಬಹುಮುಖ್ಯವಾಗಿದೆ. ಸರಕಾರ ಮತ್ತು ಸಾರ್ವಜನಿಕರ ಮಧ್ಯೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಭಾಗವಾಗಿಯೇ ನಾನಾ ಕಲಾ ತಂಡಗಳನ್ನು ಆಯ್ಕೆ ಮಾಡಿ, ಈ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲ ಕಲಾ ತಂಡಗಳು ಕಲೆಯೊಂದಿಗೆ ಸರಕಾರದ ನಾನಾ ಯೋಜನೆಗಳ ಮಾಹಿತಿಯನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತಲುಪಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಗೋಪಾಲ ನಾಯಕ ಮಾತನಾಡಿ, ಸರಕಾರ ಜಾರಿಗೆ ತಂದಿರುವ ಅನೇಕ ಯೋಜನೆಗಳ ಮಾಹಿತಿಯನ್ನು ತಮ್ಮ ಕಲೆಯ ಮೂಲಕ ಜನರಿಗೆ ತಲುಪಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶ ಫಲಾನುಭವಿಗಳಿಗೆ ಈ ಯೋಜನೆಗಳನ್ನು ಯಥಾವತ್ತಾಗಿ ತಲುಪಿಸಲು ಸಂವಹನ ಮಾಧ್ಯಮವಾಗಿ ಬೀದಿನಾಟಕ ಮತ್ತು ಜಾನಪದ ಕಲಾತಂಡಗಳು, ತಮ್ಮ ವಿಶಿಷ್ಟವಾದ ಕಲೆ, ಶೈಲಿಯಿಂದ ಜನರಿಗೆ ಮನಮುಟ್ಟುವಂತೆ ಪ್ರದರ್ಶಿಸುವ ಮೂಲಕ ಹೆಚ್ಚಿನ ಜನರು ಈ ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ಪ್ರೇರೆಪಿಸಬೇಕು ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಮಾತನಾಡಿ, ಸರಕಾರದ ನಾನಾ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಬೀದಿ ನಾಟಕ ಹಾಗೂ ಜಾನಪದ ಕಲಾ ತಂಡಗಳನ್ನು ಆಯ್ಕೆ ಮಾಡಿ, ಆಯ್ಕೆಯಾದ ಕಲಾ ತಂಡಗಳು ಜಿಲ್ಲೆಯ ಬೇರೆ ಬೇರೆ ಕಡೆ ಸಂಚರಿಸಿ, ಬೀದಿ ನಾಟಕ ಹಾಗೂ ಜಾನಪದ ಸಂಗೀತದ ಮೂಲಕ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಿವೆ ಎಂದು ಹೇಳಿದರು.
ಆಯ್ಕೆ ಪ್ರಕ್ರಿಯೆಯಲ್ಲಿ ವಿಶ್ವಚೇತನ ಕಲಾ ತಂಡ, ಗ್ರಾಮೀಣ ಅಭಿವೃದ್ದಿ ಸಂಸ್ಥೆ, ರಂಗಮೇಳ ಕಲಾ ಸಂಸ್ಥೆ ಬೀದಿ ನಾಟಕ ತಂಡಗಳು ಹಾಗೂ ಸರಸ್ವತಿ ಗಾಯನ ಸಂಘ ಶಿರಬೂರ, ಗುರುಪ್ರಸಾದ ಜಾನಪದ ಕಲಾ ತಂಡ ಸಿದ್ದಾಪುರ, ಜಾನಪದ ತಂಡಗಳು ಭಾಗವಹಿಸಿ ಸರ್ಕಾರದ ಯೋಜನೆಗಳ ಕುರಿತು ಪ್ರದರ್ಶನ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ. ಎಂ. ಕೋಲೂರ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಡಾ. ಅರವಿಂದ ಲಂಬು, ಕ್ರೀಡಾ ಅಧಿಕಾರಿ ಎಸ್. ಜಿ. ಲೋಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಥಮ ದರ್ಜೆ ಸಹಾಯಕಿ ಮಂಜುಳಾ ದುರಗನ್ನವರ ಮುಂತಾದವರು ಉಪಸ್ಥಿತರಿದ್ದರು.
ಸಿನಿ ಚಾಲಕ ಸುರೇಶ ಅಂಬಿಗೇರ ವಂದಿಸಿದರು.