Udyog Mela: ಮಹಿಳಾ ವಿವಿ ಉದ್ಯೋಗ ಮೇಳದಲ್ಲಿ 140 ಅಭ್ಯರ್ಥಿಗಳು ಆಯ್ಕೆ, 378 ಅಭ್ಯರ್ಥಿಗಳು 2ನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆ

ವಿಜಯಪುರ: ಕರ್ನಾಟಕ ಸರಕಾರದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಜಿಲ್ಲಾಡಳಿತ, ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ವಿವಿ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 140 ಅಭ್ಯರ್ಥಿಗಳು ಆಯ್ಕೆಯಾಗಿದ್ದು, 378 ಅಭ್ಯರ್ಥಿಗಳು ಎರಡನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾಗಿರುತ್ತಾರೆ.

ಈ ಉದ್ಯೋಗ ಮೇಳದಲ್ಲಿ 25 ಕಂಪನಿಗಳು/ ಸಂಸ್ಥೆಗಳು ಭಾಗವಹಿಸಿದ್ದವು.  2000 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಸುಮಾರು 800ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು ಎಂದು ವಿವಿಯ ಪ್ಲೇಸಮೆಂಟ್ ಅಧಿಕಾರಿ ಡಾ. ಬಾಬು ಲಮಾಣಿ ಇಲ್ಲಿ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಬಿ. ಕೆ ತುಳಸಿಮಾಲ ಮಾತನಾಡಿ, ಮಹಿಳಾ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಮೇಳದಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂತೋಷಕರ ವಿಷಯ.  ವಿಶ್ವವಿದ್ಯಾಲಯದಲ್ಲಿ ಕಲಿಕೆಯಷ್ಟೆ ಅಲ್ಲದೇ ಅವರು ಉದ್ಯೋಗಸ್ಥರಾಗಬೇಕು,  ಸ್ವಾವಲಂಬಿಗಳಾಗಬೇಕು, ಸಶಕ್ತರಾಗಬೇಕೆಂಬ ಆಶಯದೊಂದಿಗೆ ಈ ಉದ್ಯೋಗ ಮೇಳವನ್ನು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದೆ.  ಇದು ನಮ್ಮ ವಿವಿಯ ವಿದ್ಯಾರ್ಥಿನಿಯರಿಗೆ ಸದವಕಾಶ ಒದಗಿಸಿಕೊಟ್ಟಿದೆ ಎಂದು ಹೇಳಿದರು.

ಈಗಿನ ಪರಿಸ್ಥಿತಿಗೆ ತಕ್ಕಂತೆ ಉದ್ಯೋಗದಾತರಿಗೆ ಅವಶ್ಯವಿರುವ ನಾನಾ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲಗಳ ಅವಶ್ಯಕತೆಯಿದೆ.  ಆದರೆ ಕೌಶಲ್ಯಗಳ ಕೊರತೆಯಿಂದ ಉದ್ಯೋಗದಾತರಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ನಡುವೆ ಅಂತರ ಸೃಷ್ಟಿಯಾಗಿದ್ದು, ಇದನ್ನು ಕೌಶಲ್ಯ ಅಭಿವೃದ್ಧಿ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳು ಹೆಚ್ಚು ಮುತುವರ್ಜಿ ವಹಿಸಿ ಕಾರ್ಯಕ್ರಮಗಳನ್ನು ರೂಪಿಸುವುದು ಅತಿ ಅವಶ್ಯಕವಾಗಿದೆ ಎಂದು ಪ್ರೊ. ಬಿ. ಕೆ. ತುಳಸಿಮಾಲಾ ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯು ನಿರುದ್ಯೋಗ ಯುವಕ ಯುವತಿಯರಿಗೆ ಕೌಶಲ್ಯಗಳನ್ನು ನೀಡಿ ಉದ್ಯಮಶೀಲರನ್ನಾಗಿ ಮಾಡುವುದು ಹಾಗೂ ಅವರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ.  ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗುರುಪಾದಯ್ಯ ಹಿರೇಮಠ, ಇಲಾಖೆಯಲ್ಲಿ ನಾನಾ ಯೋಜನೆಗಳಿದ್ದು ಪ್ರಮುಖವಾಗಿ, ಸಿಎಂ. ಕೆಕೆವೈ, ಪಿಎಂಕೆವಿವೈ, ದೀನದಯಾಳ ಅಂತ್ಯೋದಯ ಯೋಜನೆ, ಸ್ಕಿಲ್ ಕನೆಕ್ಟ್, ಅಂತರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ-ಕರ್ನಾಟಕ, ವಲ್ರ್ಡ್ ಸ್ಕಿಲ್ ಕಾಂಪಿಟೇಷನ್, ಸಂಕಲ್ಪ ಮುಂತಾದ ಯೋಜನೆಗಳು ನಿರುದ್ಯೋಗ ಯುವಕ ಯುವತಿಯರಿಗೆ ಕೌಶಲ್ಯಗಳನ್ನು ಹೊಂದಲು ಮತ್ತು ಕೌಶಲ್ಯಗಳನ್ನು ಪ್ರಸ್ತುತಪಡಿಸಲು ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಅದರ ಜೊತೆಯಾಗಿ ಈ ಉದ್ಯೋಗ ಮೇಳ ಕೂಡಾ ಒಂದಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರದಲ್ಲಿ ಡಾ. ಸುರೇಖಾ ರಾಠೋಡ, ಸುನಂದಾ ಬಾಲಪ್ಪನವರ, ಸಂತೋಷ ಕಾಮನಕೇರಿ, ಶಶಿಕಾಂತ ಕಟ್ಟಿ, ಸೋಮಶೇಕರ ಆಲಮೇಲ, ರಾಹುಲ ರೆಡ್ಡಿ, ಮುಸ್ತಾಕ್ ಗುಂಡಬಾವಡಿ, ಮಹೆಬುಬ ಬಾಗೇವಾಡಿ ಹಾಗೂ ವಿವಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಿಲ್ಲಾ ಕೌಶಲ್ಯ ಇಲಾಖೆ, ಸಹಾಯಕ ನಿರ್ದೇಶಕ ದೇವಿಂದ್ರ ಧನಪಾಲ ಸ್ವಾಗತಿಸಿದರು. ವಿವಿಯ ಪ್ಲೇಸ್ಮೆಂಟ್ ಅಧಿಕಾರಿ ಡಾ.ಬಾಬು ಲಮಾಣಿ ವಂದಿಸಿದರು.

Leave a Reply

ಹೊಸ ಪೋಸ್ಟ್‌