ವಿಜಯಫುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರನ್ನು ತಳವಾರ ಸಮಾಜದ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ವಿಜಯಪುರ ನಗರದರಲ್ಲಿರುವ ಎಂ. ಬಿ. ಪಾಟೀಲ ಅವರ ನಿವಾಸಕ್ಕೆ ಆಗಮಿಸಿದ ತಳವಾರ ಸಮಾಜದ ಮುಖಂಡರು, ಬಬಲೇಶ್ವರ ಮತಕ್ಷೇತ್ರದಲ್ಲಿ ತಳವಾರ ಸಮುದಾಯಕ್ಕೆ ಎಸ್. ಟಿ. ಪ್ರಮಾಣ ಪತ್ರ ಒದಗಿಸುವಲ್ಲಿ ಶಾಸಕರು ಪ್ರಾಮಾಣಿಕ ಪ್ರಯತ್ನಾ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸನ್ಮಾನಿಸುತ್ತಿರುವುದಾಗಿ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ. ಬಿ. ಪಾಟೀಲ, ತಳವಾರ ಸಮುದಾಯ ಪ್ರಾಮಾಣಿಕ ಸಮುದಾಯ. ಈ ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಅವರಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಈ ಮೂಲಕ ಇಡೀ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ತಳವಾರ ಸಮುದಾಯದವರು ಸರಕಾರದ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಿದಾಗ ಮಾತ್ರ ಸರಕಾರದ ಉದ್ದೇಶಗಳು ಈಡೇರುತ್ತವೆ. ಈಗ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಎಲ್ಲರೂ ಅಭಿವೃದ್ಧಿ ಹೊಂದಬೇಕು ಎಂದು ಎಂ. ಬಿ. ಪಾಟೀಲ ಕರೆ ನೀಡಿದರು.
ತಳವಾರ ಸಮುದಾಯದ ಹೋರಾಟಗಾರ ಸಾಹೇಬಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸಮುದಾಯಕ್ಕೆ ಎಸ್. ಟಿ. ಪ್ರಮಾಣ ಪತ್ರ ನೀಡಲು ಹೋರಾಟ ನಡೆಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ನಿರ್ದೇಶಕ ಪ್ರಕಾಶ ಸೊನ್ನ, ಮುಖಂಡರಾದ ಶ್ರೀಮಂತ ತಳವಾರ, ಅಂಬಣ್ಣ ತಳವಾರ, ಸಾಹೇಬಗೌಡ ಪಾಟೀಲ, ಚಂದ್ರಕಾಂತ ಕೋಳಿ, ಚೆನ್ನಪ್ಪ ಕೊಪ್ಪದ, ಎಚ್. ಎಸ್. ಕೊರಡ್ಡಿ, ಶರಣು ಸೊನ್ನದ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಬಾಬುಗೌಡ ಪಾಟೀಲ, ಹರೀಶ ರವಿಗೌಡ ಪಾಟೀಲ(ಧೂಳಕೇಡ), ಸುರೇಶ ಕನಮಡಿ, ಸಂಗಮೇಶ ಕೋಲಕಾರ, ಅಭಿಲಾಶ ಅಂಬಿಗೇರ, ಕಾವ್ಯ ತಟಗಾರ ಮುಂತಾದವರು ಉಪಸ್ಥಿತರಿದ್ದರು.