ವಿಜಯಪುರ: 2014ರಲ್ಲಿ ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ತಳವಾರ ಸಮುದಾಯದ ಮುಖಂಡರು ನನ್ನ ಬಳಿಗೆ ಬಂದು ಮನವಿ ಮಾಡಿದ್ದರಿಂದ ಈ ಸಮುದಾಯವನ್ನು ಎಸ್. ಟಿ. ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗಿತ್ತು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಾನಾ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರತಿ ಮತ್ತು ಕಾರ್ಮಿಕರಿಗೆ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಈ ಭಾಗದ ಮುಖಂಡರಾದ ರವಿಗೌಡ ಪಾಟೀಲ ಧೂಳಖೇಡ ಮತ್ತು ಇತರರು ನನ್ನ ಬಳಿ ಬಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಅವರ ಗಮನಕ್ಕೆ ತಂದು ಕೇವಲ ಒಂದು ವಾರದಲ್ಲಿ ಸಚಿವ ಸಂಪುಟದಲ್ಲಿ ಅದಕ್ಕೆ ಒಪ್ಪಿಗೆ ಸೂಚಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಹಾಲಿ ಸರಕಾರ ಎರಡು ವರ್ಷ ಈ ಸಮುದಾಯದ ಜನರನ್ನು ಸತಾಯಿಸಿ ಈಗ ಎಸ್. ಟಿ. ಮೀಸಲಾತಿ ಪಟ್ಟಿಗೆ ಸೇರಿಸಿದೆ. ಇದು ಬಹಳ ಜನರಿಗೆ ಗೊತ್ತಿಲ್ಲ. ಅಂದು ನಾವು ಕೇಂದ್ರಕ್ಕೆ ಶಿಫಾರಸು ಮಾಡಿರದಿದ್ದರೆ ಇಂದು ಈ ಮೀಸಲಾತಿ ಸಾಧ್ಯವಾಗುತ್ತಿರಲಿಲ್ಲ ಎಂದು ಎಂದು ಅವರು ಹೇಳಿದರು.
ಬರಪೀಡಿತ, ಹಿಂದುಳಿದ ಜಿಲ್ಲೆ ಹಣೆಪಟ್ಟಿ ಅಳಸಿ ಜನರನ್ನು ಬದುಕಿಸಿ ಬದುಕು ಕಟ್ಟಿ ಕೊಡುವ ಕೆಲಸ ಮಾಡಿದ್ದೇನೆ
ಬಬಲೇಶ್ವರ ಮತಕ್ಷೇತ್ರ ಮತ್ತು ವಿಜಯಪುರ ಜಿಲ್ಲೆ ಈ ಹಿಂದೆ ಹೊಂದಿದ್ದ ಬರಪೀಡಿತ ಮತ್ತು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯನ್ನು ಅಳಸಿ ಹಾಕುವ ಕೆಲಸ ಮಾಡಿದ್ದೇವೆ. ನೀರಾವರಿಯ ಫಲವಾಗಿ ಈಗ ರೈತರು ಆರ್ಥಿಕವಾಗಿ ಸ್ಥಿತಿವಂತರಾಗಿದ್ದು, ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಒಂದು ಎಕರೆಗೆ ರೂ. 2 ಲಕ್ಷ ಬೆಲೆಯಿದ್ದ ಭೂಮಿಯ ಬೆಲೆ ಈಗ ಪ್ರತಿ ಎಕರೆಗೆ ರೂ. 20 ಲಕ್ಷಕ್ಕೆ ತಲುಪಿದೆ. ಶಾಸಕನಾಗಿ ನಾನು ಮತ್ತು ನಮ್ಮ ಅಂದಿನ ಸರಕಾರ ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಜನರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಿದ್ದೇವೆ. ಈಗ ರೈತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಹೆಣ್ಣು ಮಕ್ಕಳಿಗೆ ಒಳ್ಳೆಯ ಕುಟುಂಬದವರಿಗೆ ಮದುವೆ ಮಾಡಿ ಕೊಡಬೇಕು. . ಒಳ್ಳೆಯ ಮನೆ ಕಟ್ಟಿ, ಉತ್ತಮ ಪಟ್ಟೆ ಹಾಕಿಕೊಂಡು ಗುಣಮಟ್ಟದ ಊಟ ಮಾಡಬೇಕು ಎಂದು ಎಂ. ಬಿ. ಪಾಟೀಲ ಹೇಳಿದರು.
ಈ ಭಾಗದಲ್ಲಿ ಒಂದು ಕಾಲದಲ್ಲಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇತ್ತು. ರೈತರು ನೂರಾರು ಬೋರವೆಲ್ ಕೊರೆದು ಮತ್ತು ನೂರಾರು ಟ್ಯಾಂಕರ್ ಗಳನ್ನು ಬಳಸಿ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಆದರೆ, ಈಗ ಈ ಭಾಗದಲ್ಲಿ ಬರಗಾಲ ಎಂಬುದೇ ಮಾಯವಾಗಿದೆ. ಟ್ಯಾಂಕರ್ ಗಳಿಂದ ನೀರು ಖರೀದಿಸುವುದು ತಪ್ಪಿದೆ ಹಳೆಯ ಕೊಳವೆ ಭಾವಿಗಳು ಪುನಶ್ಚೇತನವಾಗಿವೆ. ಈಗ ಜಿಲ್ಲೆಯಲ್ಲಿ ರೈತರು ಕಬ್ಬಿಗೆ ಮೊರೆ ಹೋಗಿದ್ದು, ಜಿಲ್ಲೆಯಲ್ಲಿ ನೀರಾವರಿ ವಿಸ್ತರಣೆಯಾಗಿರುವುದರಿಂದ ಈಗ ಸುಮಾರು 20 ಕಾರ್ಖಾನೆಗಳಿಗೆ ಸಾಕಾಗುವಷ್ಟು ಕಬ್ಬನ್ನು ಬೆಳೆಯಲಾಗುತ್ತಿದೆ. ಇದಕ್ಕೆಲ್ಲ ಬಬಲೇಶ್ವರ ಮತಕ್ಷೇತ್ರದ ಜನತೆ ನನಗೆ ಮೇಲಿಟ್ಟಿರುವ ಪ್ರೀತಿ, ಮಾಡುತ್ತಿರುವ ಆಶೀರ್ವಾದ ಕಾರಣ ಎಂದು ಎಂ. ಬಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ 250 ಜನರಿಗೆ ಮಂಜೂರಾದ ಪಿಂಚಣಿ ಆದೇಶ ಪತ್ರವನ್ನು ವಿತರಿಸಲಾಯಿತು. ಅಲ್ಲದೇ, ಕಾರ್ಮಿಕ ಇಲಾಖೆ ವತಿಯಿಂದ 250 ಜನರಿಗೆ ಕಿಟ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿ. ಎಸ್. ಪಾಟೀಲ, ವಿ. ಎನ್. ಬಿರಾದಾರ, ಮಲ್ಲಪ್ಪ ಕೆಂಪವಾಡ, ಸೋಮನಾಥ ಕಳ್ಳಿಮನಿ, ಧರ್ಮರಾಜ ಬಿಳೂರ, ಪ್ರಕಾಶ ಸೊನ್ನದ, ಮಹೇಶಗೌಡ ಪಾಟೀಲ, ಅಶೋಕ ಕಾಖಂಡಕಿ, ಆನಂದ ಬೂದಿಹಾಳ, ಹರೀಶ ಕುಲಕರ್ಣಿ, ವಿದ್ಯಾರಾಣಿ ತುಂಗಳ, ಬಿ. ಜಿ. ಬಿಳೂರ, ಕಾವ್ಯಾ ತಟಗಾರ, ನಿಂಗನಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.