ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆ ಮತದಾರ ಪಟ್ಟಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಹಮೀದ್ ಮುಶ್ರಿಫ್, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಗರ ಮತಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಈ ಕುರಿತು ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಧಿಕಾರಿಗಳು ತಪ್ಪೆಸಗಿರುವ ಕುರಿತು ತನಿಖೆ ನಡೆಸುವಂತೆ ಚುನಾವಣೆಗೂ ಮುಂಚೆಯೇ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ, ಜಿಲ್ಲಾ ಚುನಾವಣಾಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ. ವಿಜಯಪುರ ನಗರ ಶಾಸಕರು ತಮ್ಮ ಅಧಿಕಾರದ ದುರುಪಯೋಗ ಪಡಿಸಿಕೊಂಡು ಬಿ ಎಲ್ ಓ, ಚುನಾವಣಾಧಿಕಾರಿಗಳು ಹಾಗೂ ಮಹಾನಗರಪಾಲಿಕೆಯ ಆಯುಕ್ತರನ್ನೊಳಗೊಂಡು ಅಧಿಕಾರಿ ವರ್ಗದ ಮೇಲೆ ಪ್ರಭಾವ ಬೀರಿದ್ದಾರೆ. ಈ ಮೂಲಕ ತಮಗೆ ಅನುಕೂಲವಾಗುವಂಥ ಮತದಾರರ ಪಟ್ಟಿಯನ್ನು ತಯಾರಿಸಿ ಬಿಜೆಪಿಯ ಸದಸ್ಯರನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ. ಈ ಕೃತ್ಯ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ ಎಂದು ಅವರು ಆರೋಪಿಸಿದರು.
ಇತ್ತೀಚೆಗೆ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಇದಕ್ಕೂ ಮೊದಲೇ, ಇದರ ಮುಂದುವರೆದ ಭಾಗವಾಗಿ ವಿಜಯಪುರ ಮಹಾನಗರಪಾಲಿಕೆ ಚುನಾವಣೆಯಲ್ಲಿ ಈ ಕುತಂತ್ರವನ್ನು ಪ್ರಯೋಗ ಮಾಡಲಾಗಿದೆ. ಇದರ ಯಶಸ್ಸಿನ ನಂತರ ಬಿಬಿಎಂಪಿ ಚುನಾವಣೆಯಲ್ಲಿಯೂ ಈ ಪ್ರಯೋಗ ಮಾಡಲು ಹೊರಟಾಗ ಈಗ ಈ ಹಗರಣ ಬೆಳಕಿಗೆ ಬಂದಿದೆ. ಈ ಅಕ್ರಮದಲ್ಲಿ ಪಾಲ್ಗೋಂಡ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಮೀದ್ ಮುಶ್ರಿಫ್ ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ರಾಜು ಆಲಗೂರ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರರ ಅವರು ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ತಮ್ಮ ಹಕ್ಕನ್ನು ಚಲಾಯಿಸಲು ಮತದಾನದ ಹಕ್ಕು ನೀಡಿದ್ದಾರೆ. ಇಂದು ಕೇಂದ್ರ ಸರಕಾರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಅಧಿಕಾರದ ದಾಹದಿಂದ ನಾವು ಏನಾದರೂ ಮಾಡಬಹುದು ಎಂಬ ಭ್ರಮೆಯಲ್ಲಿದ್ದಾರೆ. ಸಾರ್ವಜನಿಕರು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಲ್ಲದೇ, ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಬಡವರನ್ನು ತುಳಿಯುವ ನಿಟ್ಟಿನಲ್ಲಿ ಇಂಥ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿದ್ದು, ಮುಂಬಂರುವ ದಿನಗಳಲ್ಲಿ ಜನ ಇವರನ್ನು ಮತದಾನದ ಮೂಲಕವೇ ತಕ್ಕ ಉತ್ತರ ನೀಡಲಿದ್ದಾರೆ. ಇವರು ಮನೆಗೆ ಸೇರುವ ದಿನ ದೂರವಿಲ್ಲ. ಅಧಿಕಾರಿಗಳು ತಮ್ಮ ಅಧಿಕಾರಾವಧಿಯಲ್ಲಿ ಯಾರ ಕೈಗೊಂಬೆಯಾಗಿ ಕೆಲಸ ಮಾಡದೇ ತಮ್ಮ ಕೆಲಸದಲ್ಲಿ ನಿಷ್ಠೆಯನ್ನು ಪ್ರದರ್ಶಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ವಿದ್ಯಾವತಿ ಅಂಕಲಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬೀರ ಜಾಗೀರದಾರ ಮುಂತಾದವರು ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಡಾ. ಗಂಗಾಧರ ಸಂಬಣ್ಣಿ, ಇಲಿಯಾಸಪಟೇಲ ಬಗಲಿ, ಪಿಸಿಸಿ ಸದಸ್ಯ ಪೀರಪ್ಪ ನಡುವಿನಮನಿ, ಜಿಲ್ಲಾ ಸೇವಾದಳ ಅಧ್ಯಕ್ಷ ನಿಂಗಪ್ಪ ಸಂಗಾಪೂರ, ಡಾ. ರವಿಕುಮಾರ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ಸಮದ್ ಸುತಾರ, ಮಹಾನಗರಪಾಲಿಕೆ ಸದಸ್ಯರಾದ ಅಬ್ದುಲ್ ರಜಾಕ ಹೊರ್ತಿ, ಅಪ್ಪು ಪೂಜಾರಿ, ದಿನೇಶ ಹಳ್ಳಿ, ಜಮೀರಅಹ್ಮದ ಬಾಂಗಿ, ಮುಬಿನ್ ಶೇಖ, ಸದ್ದಾಮ ನಾಡೆವಾಲೆ, ಶಬ್ಬೀರ ಮನಗೂಳಿ, ಮಿಲಿಂದ ಚಂಚಲಕರ, ಮೈನುದ್ದೀನ ಬೀಳಗಿ, ಶರಣಪ್ಪ ಯಕ್ಕುಂಡಿ, ಅಕ್ರಮ ಮಾಶಾಳಕರ, ಧನರಾಜ ಎ., ಶಪೀಕ ಬಗದಾದಿ, ಸಂತೋಷ ಪವಾರ, ಸದ್ದಾಮ ಇನಾಮದಾರ, ಮೋದಿ ಶೇಖ, ಶಬ್ಬೀರ ಪಾಟೀಲ, ಇರ್ಫಾನ ಶೇಖ, ಸಲೀಮ ಉಸ್ತಾದ, ಹಸನ್ ಪಟೇಲ ದೊಡಮನಿ, ಸಲೀಮ ಪೀರಜಾದೆ, ಕಾರ್ಯದರ್ಶಿಗಳಾದ ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ತಾಜುದ್ದೀನ ಖಲೀಫಾ, ಡಿ. ಎಚ್. ಮುಲ್ಲಾ, ರವೀಂದ್ರ ಜಾಧವ, ಪೀರಾ ಜಮಖಂಡಿ, ಎಂ. ಎಂ. ಅವಟಿ, ಬಸವರಾಜ ಗಂಗಾಪೂರ, ಮಲ್ಲಿಕಾರ್ಜುನ ಪರಸಣ್ಣವರ, ಚಂದ್ರಗಿರಿ ಹೊನ್ನದ, ಮೀರಾಸಾಬ ಮುಲ್ಲಾ, ಈರಪ್ಪ ಕುಂಬಾರ, ಆರ್. ಎಂ. ಖಾಜಿ, ತಿಪ್ಪಣ್ಣ ಕಮಲದಿನ್ನಿ, ಬಡೇಘರ ಮುಂತಾದವರು ಉಪಸ್ಥಿತರಿದ್ದರು.