ವಿಜಯಪುರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಇಂಡಿ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ನಾನಾ ಸಾರ್ವಜನಿಕರು ದಾರಿ ಸಮಸ್ಯೆ ಕುರಿತು ಒಂಬತ್ತು ಅರ್ಜಿಗಳನ್ನು ಸಲ್ಲಿಸಿದ್ದು, ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಡಿಸಿ ಸೂಚಿಸಿದರು. ಇಂಡಿ ಸರಕಾರಿ ಆಸ್ಪತ್ರೆಗೆ ಅಂಬ್ಯೂಲೆನ್ಸ್ ವ್ಯವಸ್ಥೆ, ಭೂಯ್ಯಾರ ನದಿ ಹಿನ್ನೀರಿನಿಂದ ಹಾಳಾದ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಮಿನಿ ವಿಧಾನಸೌಧ ಪಕ್ಕದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ವಸತಿ ಗೃಹ ಕಂಪೌಂಡ್ ಪರಿಶೀಲನೆ ನಡೆಸಿ, ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಕೇಂದ್ರದಲ್ಲಿ ಆದ್ಯತೆಯ ಮೇರೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ನಂತರ ಡಾ. ವಿಜಯಮಹಾಂತೇಶ ಬಿ. ದಾನಮ್ಮವರ ಅವರು ಲಚ್ಯಾಣದಲ್ಲಿ ಆಯೋಜಿಸಿರುವ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲೆ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡಾದೆ, ತಹಸೀಲ್ದಾರ ನಾಗಯ್ಯ ಹಿರೇಮಠಸ ಟಿಎಚ್‍ಓ ಡಾ. ಅರ್ಚನಾ ಕುಲಕರ್ಣಿ ಸೇರಿದಂತೆ ನಾನಾ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.