ವಿಜಯಪುರ: ವಿಜಯಪುರ ಜಿಲ್ಲೆಯ ನಾನಾ ಠಾಣೆಗಳ ಪೊಲೀಸರು ಹನಿಟ್ರ್ಯಾಪ್, ಆನಲೈನ್ ವಂಚನೆ ಮತ್ತು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಕೇಸ್ ಗಳನ್ನು ಭೇದಿಸಿದ್ದಾರೆ ಎಂದು ವಿಜಯಪುರ ಎಸ್ಪಿ ಡಾ. ಎಚ್. ಡಿ. ಆನಂದಕುಮಾರ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಲ್ಕೂ ಪ್ರಕರಣಗಳ ತನಿಖೆಗಾಗಿ ವಿಜಯಪುರ ಎಎಸ್ಪಿ ಶಂಕರ ಮಾರಿಹಾಳ ಅವರ ಮಾರ್ಗದರ್ಶನದಲ್ಲಿ ನಾನಾ ತಂಡಗಳನ್ನು ರಚನೆ ಮಾಡಲಾಗಿತ್ತು. ಈ ತಂಡ ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದೆ ಎಂದು ತಿಳಿಸಿದ್ದಾರೆ.
ಮೊದಲ ಪ್ರಕರಣ
ಮದುವೆಯಾಗುವುದಾಗಿ ವಂಚಿಸಿ ಹನಿಟ್ರ್ಯಾಪ್ ಮಾಡಿದ ರೂ. 39,04,870 ವಂಚಿಸಿದ್ದ ಮಹಿಳೆಯನ್ನು ವಿಜಯಪುರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರ ಗ್ರಾಮದ ಪರಮೇಶ್ವರ ನಾನಾಗೌಡ ಹಿಪ್ಪರಗಿ ಎಂಬುವರನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿ ಗ್ರಾಮದ ಮಹಿಳೆ ಮಂಜುಳಾ ಕೆ. ಆರ್. ಸ್ವಾಮಿ ತನ್ನ ಮೊಬೈಲ್ ನೀಡಿದ್ದಳು. ಅಲ್ಲದೇ, ವಾಟ್ಸಾಪ್ ಮೂಲಕ ಚಾಟ್ ಮಾಡುತ್ತ, ತಾನು ಐಎಎಸ್ ಪಾಸ್ ಮಾಡಿದ್ದು, ಮುಂದೆ ಜಿಲ್ಲಾಧಿಕಾರಿ ಆಗುತ್ತೇನೆ. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಯುವಕನನ್ನು ನಂಬಿಸಿ ಆತ ಸ್ನಾನ ಮಾಡುವಾಗ ಬೆತ್ತಲೆ ವಿಡಿಯೋ ಶೂಟ್ ಮಾಡಿ ಅದರ ಸ್ಕ್ರೀನ್ ಶಾಟ್ ನ್ನು ಕಳುಹಿಸಿ ಮಾನ ಹರಾಜು ಮಾಡುವುದಾಗಿ ಬೆದರಿಸಿ ರೂ. 39ಲಕ್ಷ 4 ಸಾವಿರದ 870 ಹಣವನ್ನು ಫೆಡರಲ್ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಆನಲೈನ್ ವಂಚನೆ ಮಾಡಿದ್ದಳು.
ಈ ಕುರಿತು ತನಿಖೆ ಕೈಗೊಂಡ ಸಿಇಎನ್ ಸಿಪಿಐ ರಮೇಶ ಅವಜಿ ನೇತೃತ್ವದ ತಂಡ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿ ಮಹಿಳೆ ಮಂಜುಳಾ ಕೆ. ಆರ್. ವಾಸಿಸುತ್ತಿದ್ದ ದಾಸರಹಳ್ಳಿ ಗ್ರಾಮಕ್ಕೆ ತೆರಳಿ ವಿಚಾರಿಸಿದಾಗ ಆಕೆ ತಾನು ಹಾಗೂ ತನ್ನ ಗಂಡ ಸ್ವಾಮಿ ಇಬ್ಬರೂ ಕೂಡಿಕೊಂಡು ಈ ರೀತಿ ಪ್ಲ್ಯಾನ್ ಮಾಡಿ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೇ, ವಂಚನೆ ಮಾಡಿದ ಹಣದಲ್ಲಿ ಒಂದು ಕಾರ್ ಮತ್ತು ಒಂದು ಬೈಕ್ ಖರೀದಿಸಿದ್ದಾಗಿ ಮಾಹಿತಿ ನೀಡಿದ್ದಾಳೆ. ಅಲ್ಲದೇ, ಗ್ರಾಮದಲ್ಲಿ ಎರಡು ಅಂತಸ್ತಿನ ಐಶಾರಾಮಿ ಮನೆ ನಿರ್ಮಿಸುತ್ತಿದ್ದು, ಗಂಡನೊಂದಿಗೆ ಸೇರಿಕೊಂಡು ಸ್ವಾಮಿ ಫೈನಾನ್ಸ್ ಹೆಸರಿನಲ್ಲಿ ಹಣಕಾಸು ವ್ಯವಹಾರ ನಡೆಸುತ್ತ ಸಾರ್ವಜನಿಕರಿಗೆ ಸಾಲ ನೀಡಿದ್ದು, ವಂಚಿಸಿದ ಹಣ ಮತ್ತು ಬಂಗಾರದ ಒಡವೆಗಳನ್ನು ತನ್ನ ಗಂಡ ಸ್ವಾಮಿ ಬಳಿಯಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾಳೆ. ಈಗ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ವಂಚನೆ ಹಣದಲ್ಲಿ ಖರೀದಿಸಿದ ಕಾರು, ಮೊಬೈಲ್ ಜಪ್ತಿ ಮಾಡಿಕೊಂಡು ಆಕೆಯ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡು ಅದರಲ್ಲಿದ್ದ ರೂ. 6 ಲಕ್ಷ ಹಣವನ್ನು ಫ್ರೀಜ್ ಮಾಡಲಾಗಿದೆ. ರುವುದಾಗಿ ಎಸ್ಪಿ ಮಾಹಿತಿ ನೀಡಿದ್ದಾರೆ.
ಎರಡನೇ ಪ್ರಕರಣ
ಸಿಇಎನ್ ಠಾಣೆಯ ಪೊಲೀಸರು ಡಿ ಸಿ ಆರ್ ಬಿ ಡಿವೈಎಸ್ಪಿ ಜೆ. ಎಸ್. ನ್ಯಾಮಗೌಡರ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ನಾನಾ ಆನಲೈನ್ ವಂಚನೆ ಪ್ರಕರಣಗಳನ್ನು ಭೇದಿಸಿ ಹಣವನ್ನು ವಂಚಿತರ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಿಇಎನ್ ಠಾಣೆಯಲ್ಲಿ ದಾಖಲಾದ ಒಟ್ಟು ಆರು ಪ್ರಕರಣಗಳಲ್ಲಿ ರೂ. 8,66,303 ವಂಚನೆಗೆ ಸಂಬಂಧಿಸಿದಂತೆ ತನಿಖೆಗ ನಡೆಸಿ ನ್ಯಾಯಾಲಯದ ಆದೇಶದಂತೆ ಒಟ್ಟು ರೂ. 6,22,383 ಹಣವನ್ನು ವಂಚಿತರ ಖಾತೆಗೆ ಮರಳಿ ಜಮಾ ಮಾಡಿದ್ದಾರೆ.
ಅಲ್ಲದೇ, ಇದೇ ಠಾಣೆಯಲ್ಲಿ ದಾಖಲಾದ ಒಟ್ಟು 15 ಬೇರೆ ಬೇರೆ ಪ್ರಕರಣಗಳಲ್ಲಿ ಒಟ್ಟು ರೂ. 24,94,493 ವಂಚನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಒಟ್ಟು ರೂ. 20,60,077 ಹಣ ವರ್ಗಾವಣೆಯನ್ನು ಫ್ರೀಜ್ ಮಾಡಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕ ದೂರುದಾರರ ಖಾತೆಗಳಿಗೆ ಮರಳಿ ಹಾಕಲು ಪೊಲೀಸರು ನಿರ್ಧರಿಸಿದ್ದಾರೆ.
ಅಷ್ಟೇ ಅಲ್ಲ, ಸೈಬರ್ ಕ್ರೈಂ ನಲ್ಲಿ ವಂಚನೆಯಾದ ಕೇವಲ ಒಂದು ಗಂಟೆಯಲ್ಲಿ ಅಂದರೆ ಗೋಲ್ಡನ್ ಅವರ್ ನಲ್ಲಿ ನೇರವಾಗಿ ಠಾಣೆಗೆ ಬಂದು ದೂರು ನೀಡಿದ ಆರು ಜನ ದೂರುರಾದರಿಗೆ ಒಟ್ಟು ರೂ. 5, 55,499 ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಮರಳಿ ಜಮೆ ಮಾಡಿಸಲಾಗಿದೆ.
ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಒಟ್ಟು 27 ಪ್ರಕರಣಗಳು ದಾಖಲಾಗಿದ್ದು, ವಂಚನೆಯಾದ ರೂ. 40,91,794 ಹಣದಲ್ಲಿ ಒಟ್ಟು ರೂ. 32,32,959 ಹಣವನ್ನು ದೂರುದಾರರಿಗೆ ಮರಳಿ ಕೊಡಿಸಲಾಗಿದೆ ಎಂದು ಎಸ್ಪಿ ಎಚ್. ಡಿ. ಆನಂದಕುಮಾರ ಮಾಹಿತಿ ನೀಡಿದ್ದಾರೆ.
ಮೂರನೇ ಪ್ರಕರಣ
ವಿಜಯಪುರ ನಗರದಲ್ಲಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ವಿಜಯಪುರ ನಗರದ ದರಬಾರ ದಾಬಾ ಬಳಿ ನಡೆದ ಅನಾಮಧೇಯ ವ್ಯಕ್ತಿಯ ಕೊಲೆಯ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ವಿಜಯಪುರ ಡಿವೈಎಸ್ಪಿ ಸಿದ್ಧೇಶ್ವರ, ಗೋಳಗುಮ್ಮಟ ಪೊಲೀಸ್ ಠಾಣೆಯ ಸಿಪಿಐ ವಿಜಯಮಹಾಂತೇಶ ಬಿ. ಮಠಪತಿ, ಜಲನಗರ ಪಿಎಸ್‌ಐ ಮಲ್ಲಿಕಾರ್ಜುನ ತಳವಾರ, ಅರವಿಂದ ಅಂಗಡಿ ಮತ್ತು ಸಿಬ್ಬಂದಿ ತನಿಖೆ ನಡೆಸಿ ಈ ಕೊಲೆಗೆ ಸಂಬಂಧಿಸಿದ ಇಂಡಿ ತಾಲೂಕಿನ ಹಿರೇಮಸಳಿ ಮೂಲದ ಹಾಗೂ ಸಧ್ಯಕ್ಕೆ ವಿಜಯಪುರ ನಗರದ ವಜ್ರಹನುಮಾನ ಗೇಟ್ ಬಳಿ ವಾಸಿಸುವ ಆರೋಪಿ ಕಲ್ಲಪ್ಪ ಬಸಪ್ಪ ಉರ್ಪ್ ಬಸಣ್ಣ ಸಿಂದಗಿ(36) ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ನಾಲ್ಕನೇ ಪ್ರಕರಣ
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಪಕ್ಕದಲ್ಲಿ ನಡೆದ ನಡೆದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ. ಈ ಸಂಬಂಧ ಇಂಡಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ರವಿ ಉಕ್ಕುಂದ, ಪಿಎಸ್‌ಐ ಸೋಮೇಶ ಗೆಜ್ಜಿ ಮತ್ತು ಸಿಬ್ಬಂದಿ ತನಿಖೆ ನಡೆಸಿ ಯಾದಗಿರಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕೊಂಡಗೂಳಿ ಮೂಲದ ಆರೋಪಿ ಸುರೇಶ ಮಲ್ಲಪ್ಪ ನಾಯ್ಕೋಡಿ ಉರ್ಫ್ ತಳವಾರ ಎಂಬಾತನನು ಬಂಧಿಸಿದ್ದಾರೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಸಿದ್ಧೇಶ್ವರ, ಸಿಪಿಐ ರಮೇಶ ಅವಜಿ ಮುಂತಾದವರು ಉಪಸ್ಥಿತರಿದ್ದರು.