ವಿಜಯಪುರ: ಮಹಾರಾಷ್ಟ್ರ ಗಡಿ ವಿವಾದದ ಕಿಚ್ಚನ್ನು ಹೆಚ್ಚಿಸಿರುವ ಮಧ್ಯೆಯೇ ಈಗ ಮಹಾರಾಷ್ಟ್ರದ 28 ಗ್ರಾಮಗಳಿಗೆ ಕರ್ನಾಟಕದಿಂದ ನೀರು ಹರಿದಿದೆ.
ಕರ್ನಾಟಕದ ವ್ಯಾಪ್ತಿಯಲ್ಲಿರುವ ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಮಹಾರಾಷ್‌ಟರ ರಾಜಕೀಯ ಮುಖಂಡರು ಮತ್ತೆ ತಗಾದೆ ತೆಗೆದಿದ್ದಾರೆ. ಈ ವಿಚಾರ ಈಗ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಕಾರಣವಾಗಿರುವ ಮಧ್ಯೆಯೇ ಈಗ ಕರ್ನಾಟಕದಿಂದ ಮಹಾರಾಷ್ಟ್ರದ 28 ಗ್ರಾಮಗಳಿಗೆ ನೀರು ಹರಿದು ಬಂದಿದೆ.
ಮಹಾರಾಷ್ಟ್ರದ ಸಾಗಲಿ ಜಿಲ್ಲೆಯ ಜತ್ ತಾಲೂಕಿನ 28 ಗ್ರಾಮಗಳಿಗೆ ಕರ್ನಾಟಕದಿಂದ ಕೃಷ್ಣಾ ನದಿ ನೀರು ಹರಿದು ಬಂದಿದೆ. ಮಾಜಿ ಸಚಿವ ಎಂ. ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ಬಾಗಲಕೋಟೆ ಜಿಲ್ಲೆಯ ತುಬಚಿ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ವ್ಯಾಪ್ತಿಗೆ ನೀರಾವರಿ ಒದಗಿಸಲು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯ ಮೂಲಕ ಅವರು ಸಚಿವರಾಗಿದ್ದಾಗಲೇ ನೀರು ಹರಿಸಿದ್ದುರ. ಈಗ ಮತ್ತೆ ಇದೇ ಯೋಜನೆ ಮೂಲಕ ನೀರು ಹರಿದಿದ್ದು, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಗಡಿಯಲ್ಲಿರುವ ಯತ್ನಾಳ ಗ್ರಾಮದಿಂದ ಮಹಾರಾಷ್ಟ್ರದ ಗಡಿಯಲ್ಲಿರುವ ತಿಕ್ಕುಂಡಿ ಗ್ರಾಮದ ಕೆರೆಗಳಿಗೆ ಹರಿದ ನೀರು ಬಿಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದರು. ಈಗ ಮಹಾರಾಷ್ಟ್ರದ ಸಚಿವರಿಬ್ಬರು ಡಿ. 6ಕ್ಕೆ ಬೆಳಗಾವಿಗೆ ಬಂದು ಕಾರ್ಯಕ್ರಮ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಅವರು ಕರ್ನಾಟಕಕ್ಕೆ ಆಗಮಿಸುವ ಮುಂಚೆಯೇ ಈಗ ಕರ್ನಾಟಕದ ನೀರು ಮಹಾರಾಷ್ಟ್ರದ 28 ಗ್ರಾಮಗಳಿಗೆ ಹರಿದಿರುವುದು ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಪಾಲಿಗೆ ವರದಾನವಾಗಿದೆ. ಮಾನವೀಯತೆ ಆಧಾರದಲ್ಲಿ ಮಹಾರಾಷ್ಟ್ರಕ್ಕೆ ನೀರು ಬಿಡಲಾಗುತ್ತಿದೆ ಎಂದು ಈಗಾಗಲೇ ಕರ್ನಾಟಕದ ಜನಪ್ರತಿನಿಧಿಗಳು ತಿಳಿಸಿದ್ದಾರೆ.
ಈಗ ಕಾಲುವೆಯ ಮೂಲಕ ತಮ್ಮೂರಿಗೆ ನೀರು ಬಂದಿರುವುದಕ್ಕೆ ಮಹಾರಾಷ್ಟ್ರದ ಗಡಿಯಲ್ಲಿರುವ ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಆದರೆ, ಮಹಾರಾಷ್ಟ್ರ ಸರಕಾರ ಮಾತ್ರ ನಮಗೆ ಸ್ಪಂದಿಸುತ್ತಿಲ್ಲ ಎಂದು ಮಹಾರಾಷ್ಟ್ರದ್ಲಲಿ ಸೌಲಭ್ಯ ವಂಚಿತರ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಈ ಮಧ್ಯೆ, ಮಹಾರಾಷ್ಟ್ರದ ಜತ್ ತಾಲೂಕಿನ 28 ಗ್ರಾಮಗಳಿಗೆ ಕರ್ನಾಟಕದಿಂದ ನೀರು ಹರಿದಿರುವ ಬಗ್ಗೆ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ, ಜತ್ ತಾಲೂಕಿನ ಹಳ್ಳಿಗಳಿಗೆ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಮೂಲಕ ನೀರು ಬಿಡಲಾಗಿದೆ. ಕಳೆದ ಮೂರು ವರ್ಷಗಳಿಂದ ನೀರು ಬಿಡಲಾಗುತ್ತಿದೆ. ಗಡಿ ಭಾಗದ ಕನ್ನಡಿಗರಿಗಾಗಿ ನೀಡು ಬಿಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮಹಿಶಾಳ ಏತ ನೀರಾವರಿ ಯೋಜನೆ ಜಾರಿಗೆ ಅಲ್ಲಿನ ಸರಕಾರಗಳು ವಿಳಂಬ ನೀತಿ ಅನುಸರಿಸುತ್ತಿವೆ. 40 ವರ್ಷಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿದ್ದರೂ ಅಲ್ಲಿನ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ. ಆದರೆ, ನಾವು ಅಧಿಕಾರದಲ್ಲಿದ್ದಾಗ ಕೇವಲ ಮೂರು ವರ್ಷಗಳಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತಂದು ನೀರು ಹರಿಸುವ ಮೂಲಕ ಅನ್ನದಾತರ ಅಳಲಿಗೆ ಸ್ಪಂದಿಸಿದ್ದೇವೆ. ಇದನ್ನು ಮನಗಂಡಿರುವ ಮಹಾರಾಷ್ಟ್ರದ ಗಡಿ ಭಾಗದ ಗ್ರಾಮಸ್ಥರು ಅಲ್ಲಿನ ಸರಕಾರದ ವಿರುದ್ಧ ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ತಮ್ಮನ್ನು ಕರ್ನಾಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ ಎಂದು ಎಂ. ಬಿ. ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.