Wrestling Championship: ಶಿಕ್ಷಕರ ತವರಿನಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ- ಲಚ್ಯಾಣ ಗ್ರಾಮಸ್ಥರ ಆತಿಥ್ಯಕ್ಕೆ ಮನಸೋತ ಕ್ರೀಡಾಳುಗಳು

ವಿಜಯಪುರ: ಶಾಲಾ ಮಟ್ಟದ ಅದರಲ್ಲೂ ರಾಜ್ಯ ಮಟ್ಟದ ಕ್ರೀಡಾಕೂಟಗಳು ಜಿಲ್ಲಾ ಕೇಂದ್ರಗಳಲ್ಲಿ ನಡೆಯುವುದು ಸಾಮಾನ್ಯ.  ಅದರಲ್ಲೂ ಗ್ರಾಮೀಣ ಕ್ರೀಡೆಗಳೂ ಕೂಡ ನಗರ ಪ್ರದೇಶಗಳಲ್ಲಿ ನಡೆಯುತ್ತಿರುತ್ತವೆ.  ಬೇರೆ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಾಗಿ ಸಂಚಾರ ವ್ಯವಸ್ಥೆ ಉತ್ತಮವಾಗಿರುತ್ತದೆ ಎಂಬ ಕಾರಣಕ್ಕಾಗಿ ಬಹುತೇಕ ಜಿಲ್ಲೆಗಳ ಆಯೋಜಕರು ತಮ್ಮ ಜಿಲ್ಲಾ ಕೇಂದ್ರಗಳಲ್ಲಿಯೇ ಕ್ರೀಡಾಕೂಟಗಳನ್ನು ಸಂಘಟಿಸುವ ಮೂಲಕ ಗಮನ ಸೆಳೆಯುತ್ತಾರೆ.

ಆದರೆ, ಇದಕ್ಕೆ ಅಪವಾದ ಎಂಬಂತೆ ಅದೂ ಕೂಡ ನಾಡಿಗೆ ಸಾವಿರಾರು ಶಿಕ್ಷಕರನ್ನು ನೀಡಿರುವ ಬಸವ ನಾಡು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸುವ ಮೂಲಕ ಅಧಿಕಾರಿಗಳು ಕ್ರೀಡಾ ಮೆರಗು ಹೆಚ್ಚಿಸಿದ್ದಾರೆ.

ಸುಕ್ಷೇತ್ರ ಲಚ್ಯಾಣದಲ್ಲಿ ನಡೆದ ಪ್ರೌಢಶಾಲೆಗಳ ಬಾಲಕ, ಬಾಲಕಿಯರ ಕುಸ್ತಿ ಪಂದ್ಯಾವಳಿ

ಇಂಡಿ ತಾಲೂಕಿನ ಲಚ್ಯಾಣ ಗ್ರಾಮ ಸಿದ್ಧಲಿಂಗ ಮಹಾರಾಜರು 19ನೇ ಶತಮಾನದಲ್ಲಿ ಸ್ಥಾಪಿಸಿದ್ದ ಮಠ ಈ ಭಾಗದಲ್ಲಿ ಹೆಸರುವಾಸಿ.  ಅಲ್ಲದೇ, ಬಿ ಎಲ್ ಡಿ ಇ ಸಂಸ್ಥೆ ಇಲ್ಲಿ 1950ರಲ್ಲಿ ಶ್ರೀ ಬಂಧನಾಳ ಶಿವಯೋಗಿಗಳ ಸಾರಥ್ಯದಲ್ಲಿ ಸ್ಥಾಪಿಸಿರುವ ಶ್ರೀ ಸಿದ್ಧೇಶ್ವರ ಶಿಕ್ಷಕರ ತರಬೇತಿ ಕೇಂದ್ರ ವಿಜಯಪುರ ಜಿಲ್ಲೆಯ ಪ್ರಥಮ ಟಿಸಿಎಚ್ ಕಾಲೇಜು ಕರ್ನಾಟಕವಷ್ಟೇ ಅಲ್ಲ, ನೆರೆಯ ರಾಜ್ಯಗಳಲ್ಲಿಯೂ ಹೆಸರುವಾಸಿ.  ಇಲ್ಲಿ ತರಬೇತಿ ಪಡೆದ ಶಿಕ್ಷಕರು ಇಡೀ ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿಯೂ ಸೇವೆಯಲ್ಲಿದ್ದು, ಉನ್ನತ ಅಧಿಕಾರಿಗಳಾಗಿದ್ದಾರೆ.

ಅಂದ ಹಾಗೆ ಲಚ್ಯಾಣ ಗ್ರಾಮ ಗರಡಿ ಮನೆ ಮತ್ತು ಕುಸ್ತಿಗೆ ಹೆಸರುವಾಸಿ.  ಪ್ರತಿ ವರ್ಷ ಇಲ್ಲಿ ಶ್ರೀ ಸಿದ್ಧಲಿಂಗ ಮಹಾರಾಜರ ಜಾತ್ರೆಯ ಸಂದರ್ಭದಲ್ಲಿ ಕುಸ್ತಿ ಪಂದ್ಯಗಳು ನಡೆಯುತ್ತವೆ.  ಆದರೆ, ಈಗ ಆಯೋಜಿಸಲಾದ ಎರಡು ದಿನಗಳ ರಾಜ್ಯ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಬಾಲಕ ಮತ್ತು ಬಾಲಕಿಯರ ಹೊನಲು ಬೆಳಕಿನ ಪಾಯಿಂಟ ಕುಸ್ತಿ ಪಂದ್ಯಾವಳಿ ಕುಸ್ತಿ ಪ್ರೀಯರಿಗೆ ಕ್ರೀಡೆಯ ರಸದೌತಣ ನೀಡಿತು.

ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸ್ಥಳಿಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ಕುಸ್ತಿ ಪಂದ್ಯಾವಳಿ ನಗರ ಪ್ರದೇಶಗಳಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಯನ್ನು ಮೀರಿಸುವಂತಿತ್ತು.  ರಣ ರೋಚಕವಾಗಿ ನಡೆದ ಈ ಕ್ರೀಡಾಕೂಟದಲ್ಲಿ 26 ಶೈಕ್ಷಣಿಕ ಜಿಲ್ಲೆಗಳಿಂದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 950 ವಿದ್ಯಾರ್ಥಿಗಳು ಪಾಲ್ಗೋಂಡು ಗಮನ ಸೆಳೆದರು.

ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳು ಹಾಕುತ್ತಿದ್ದ ನಾನಾ ಪಟ್ಟುಗಳು ಎದುರಾಳಿಗಳು ಬಳಸುತ್ತಿದ್ದ ರಕ್ಷಣಾತ್ಮಕ ಆಟಕ್ಕೆ ನೆರೆದ ಪ್ರೇಕ್ಷಕರು ಚಪ್ಪಾಳೆ ತಟ್ಟುವ ಮೂಲಕ, ಶಿಳ್ಳೆ ಹಾಕುವ ಮೂಲಕ ಮತ್ತು ಜೋರಾಗಿ ಕೂಗುವ ಮೂಲಕ ಹುರುದುಂಬಿಸಿದರು.

ಮ್ಯಾಟ್ ಮೇಲೆ ನಡೆದ ಈ ಪಂದ್ಯಾವಳಿಯಲ್ಲಿ ನಾನಾ ತೂಕದ ತೂಕದ ಆಧಾರದ ಮೇಲೆ ನಡೆದ ಈ ಪಂದ್ಯಾವಳಿಯಲ್ಲಿ 14 ವರ್ಷದ ಒಳಗಿನ ವಿಭಾಗದ ಸ್ಪರ್ಧೆಯಲ್ಲಿ ತಲಾ 10 ಜನ ಬಾಲಕ, ಬಾಲಕೀಯರು ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.  17 ವರ್ಷ ವಯೋಮಾನದ ಒಳಗಿನವರ ಕುಸ್ತಿ ಕಾಳಗದಲ್ಲಿಯೂ ತಲಾ 10 ಜನ ಬಾಲಕ ಮತ್ತು ಬಾಲಕೀಯರು ಪ್ರಥಮ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.

 

ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ದಾವಣಗೆೆರೆ ಕುಸ್ತಿಪಟುಗಳು

ದಾವಣಗೆರೆ ಜಿಲ್ಲೆಯ ಕುಸ್ತಿಪಟು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡರು.  ಈ ಟೂರ್ನಿಯಲ್ಲಿ ಲಚ್ಯಾಣದ ಮೂರು ಜನ ಕ್ರೀಡಾಪಟುಗಳ ಪೈಕಿ ಓರ್ವ ಕ್ರೀಡಾಪಟು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವದು ಗ್ರಾಮಸ್ಥರನ್ನು ಮಂತ್ರಮುಗ್ದರನ್ನಾಗಿಸಿತು.

ಉತ್ತಮ ಭೋಜನ ವ್ಯವಸ್ಥೆ

ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಮತ್ತು ತರಬೇತುದಾರರಿಗೆ ಆತಿಥ್ಯ ಸತ್ಕಾರಕ್ಕೆ ಹೆಸರುವಾಸಿಯಾಗಿರುವ ಲಚ್ಯಾಣ ಗ್ರಾಮಸ್ಖರು ರುಚಿರುಚಿಯಾದ ಪಾಯಸ, ಭಜಿ, ತರಹೆವಾರಿ ರುಚಿಕಟ್ಚಾದ ಖಾದ್ಯಗಳನ್ನು ಉಣಬಡಿಸುವ ಮೂಲಕ ಮೃಷ್ಟಾನ್ನದ ವ್ಯವಸ್ಥೆ ಮಾಡಿದ್ದು ಪ್ರಶಂಸೆಗೆ ಪಾತ್ರವಾಯಿತು.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೈಕೊಡುವುದು ಮಾಮೂಲು.  ಆದರೆ, ಈ ಕ್ರೀಡಾಕೂಟ ನಡೆದ ಎರಡೂ ದಿನ ಪಂದ್ಯಗಳ ಆರಂಭದಿಂದ ಹಿಡಿದು ಸಮಾರೋಪ ಸಮಾರಂಭದವರೆಗೂ ನಿರಂತರ ವಿದ್ಯುತ್ ಸೌಲಭ್ಯ ಒದಗಿಸುವ ಮೂಲಕ ಹೆಸ್ಕಾಂ ಸಿಬ್ಬಂದಿ ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸಿದರು.

ಗಮನ ಸೆಳೆದ ರೈಲು, ಬಸ್ ಸೇವೆ

ರೈಲು ನಿಲ್ದಾಣವನ್ನೂ ಹೊಂದಿರುವ ಲಚ್ಯಾಣದಲ್ಲಿ ಈ ಕ್ರೀಡಾಕೂಟ ನಡೆದ ಎರಡು ದಿನ ಮಾತ್ರ ಎಕ್ಸಪ್ರೆಸ್ ರೈಲು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.  ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಥಳದಲ್ಲಿಯೇ ಠಿಕಾಣಿ ಹೂಡಿ ಕ್ರೀಡಾಂಗಣದಿಂದ ಬೆಂಗಳೂರು, ಹುಬ್ಬಳ್ಳಿ, ರಾಮನಗರ ಸೇರಿದಂತೆ ಎಲ್ಲ ಜಿಲ್ಲೆಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದೂ ಕೂಡ ಕ್ರೀಡಾಕೂಟದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Leave a Reply

ಹೊಸ ಪೋಸ್ಟ್‌