ವಿಜಯಪುರ: ವಿಕಲಚೇತನರು ಅಸಾಹಯಕರಲ್ಲ. ಸದೃಢರಿಗಿಂತಲೂ ವಿಶಿಷ್ಟ ಸಾಧನೆ ಮಾಡಬಲ್ಲರು. ಅವರಿಗೆ ಬೇಕಿರುವುದು ಅನುಕಂಪ ಅಲ್ಲ, ಅವಕಾಶ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಹೇಳಿದ್ದಾರೆ.
ನಗರದ ಕಂದಗಲ್ ಹನಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡು, ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ಸಮಾಜಕ್ಕೆ ಮಾದರಿಯಾಗಬೇಕು ಮಾನಸಿಕವಾಗಿ ಸದೃಢರಾಗಿ ಆತ್ಮಸ್ಥೈರ್ಯ ಬೆಳಸಿಕೊಳ್ಳಬೇಕು. ವಿಕಲಚೇತನರಿಗಾಗಿಯೇ ಸರ್ಕಾರ ಅನೇಕ ಸೌಲಭ್ಯ ಒದಗಿಸುತ್ತಿದ್ದು,ಸದ್ಭಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ನಿಂಗಪ್ಪ ಗೋಠೆ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ. ಕೆ. ಚವ್ಹಾಣ ಮಾತನಾಡಿ, ವಿಕಲ ಚೇತನ ವಿದ್ಯಾರ್ಥಿಗಳು ಧೈರ್ಯಗುಂದದೆ ಎಲ್ಲವನ್ನು ಆತ್ಮಸ್ಥೈರ್ಯದಿಂದ ಎದುರಿಸುವ ಪರಿಪಾಠ ಮೈಗೂಡಿಸಿಕೊಳ್ಳಬೇಕು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ದಿಸೆಯಲ್ಲಿ ಗುರಿ ಇರಬೇಕು ಎಂದು ಹೇಳಿದರು.
ವಿಕಲಚೇತನ ಮತದಾರರಲ್ಲಿ ಜಾಗೃತಿ
ಜಿಲ್ಲಾ ಪಂಚಾಯfತಿಯ ಯೋಜನಾ ಉಪ ನಿರ್ದೇಶಕ ಎ. ಬಿ. ಅಲ್ಲಾಪೂರ ಅವರು ಮಾತನಾಡಿ, ಮತದಾರರ ನೋಂದಣಿ ಅಭಿಯಾನ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮನೆ-ಮನೆ ಸಮೀಕ್ಷೆ ಕೈಗೊಂಡಿದ್ದು, 18 ವರ್ಷದ ಯುವ ಮತದಾರರೂ ಸೇರಿದಂತೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಅಗತ್ಯ ದಾಖಲೆ ನೀಡಿ ನೋಂದಾಯಿಸಕೊಳ್ಳುವಂತೆ ತಿಳಿಸಿದರು.
ವಿಕಲಚೇತನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ವೋಟರ್ ಹೆಲ್ಪ್ ಲೈನ್ ಆಫ್ ಅನ್ನು ಡೌನ್‍ಲೋಡ್ ಮಾಡಿ ಅಥವಾ www.nvsp.in ಲಾಗಿನ್ ಆಗಿಯೂ ಮಾಹಿತಿ ಪಡೆದುಕೊಳ್ಳಬಹುದು. ಅದರಂತೆ ನಿಮ್ಮ ಎಫಿಕ್ ಕಾರ್ಡಅನ್ನು ಆಧಾರ ಕಾರ್ಡನೊಂದಿಗೆ ಲಿಂಕ್ ಮಾಡಲು ನಮೂನೆ-6ಬಿ ಅನ್ನು ಭರ್ತಿ ಮಾಡುವಂತೆ ಎಂದು ಎ. ಬಿ. ಅಲ್ಲಾಪೂರ ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಇತ್ತೀಚೆಗೆ ನಗರದ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ 2022-23ನೇ ವರ್ಷದ ವಿಜಯಪುರ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಈ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಸಾಧಕರಿಗೆ ಸನ್ಮಾನ
ಇದೇ ವೇಳೆ ಸಮಾಜ ಸೇವೆ, ಕ್ರೀಡಾ ಕ್ಷೇತ್ರ, ಶಿಕ್ಷಣ ಕೇತ್ರ, ಸ್ವಯಂ ಉದ್ಯೋಗ ಇತ್ಯಾದಿ ಕ್ಷೇತ್ರಗಳಲ್ಲಿ ಮಾಡಿರುವ ಗಣನೀಯ ಸೇವೆ ಗುರುತಿಸಿ ಸಾಧಕರಿಗೆ ಸನ್ಮಾನಿಸಲಾಯಿತು. 10ನೇ ತರಗತಿಯಲ್ಲಿ ಅತೀ ಹೆಚ್ಚ್ರು ಅಂಕ ಪಡೆದ ಶ್ರವಣದೋಷವುಳ್ಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಿವೈ ಎಸ್ಪಿ ಸಿದ್ಧೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್. ಸಿ. ಮ್ಯಾಗೇರಿ, ದೀಪಾಕ್ಷಿ, ಜಾನಕಿ, ಮಾತೃಶ್ರೀ ಅಂಬವ್ವ ಖೇಡ ಕಲಾ ಮತ್ತು ವಾಣಿಜ್ಯ ವಿದ್ಯಾಲಯ ಅಧ್ಯಕ್ಷ ವಿನೋದ ಖೇಡ, ಬಾಗೇವಾಡಿಯ ಶ್ರೀ ಬಸವೇಶ್ವರ ತಾಲೂಕ ವಿಕಲಚೇತನರ ಸಂಘದ ಅಧ್ಯಕ್ಷ ಚನ್ನಯ್ಯ ಸಾರಂಗಮಠ, ನಿಮಿಷ ಆಚಾರ್ಯ, ಮಲ್ಲಿಕಾರ್ಜುನ ಉಮರಾಣಿ ಸೇರಿದಂತೆ ವಿಕಲ ಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಾಥಾ ಕಾರ್ಯಕ್ರಮಕ್ಕೆ ಚಾಲನೆ
ಇದಕ್ಕೂ ಮೊದಲು ವಿಜಯಪುರ ನಗರದ ಸೆಟ್‍ಲೈಟ್ ಬಸ್ ನಿಲ್ದಾಣದಿಂದ ಕಂದಗಲ್ಲ ಶ್ರೀ ಹನುಮಂತರಾಯ ರಂಗ ಮಂದಿರದವರೆಗೆ ನಡೆದ ತ್ರಿಚಕ್ರ ವಾಹನ ಜಾಥಾಕ್ಕೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ ಚಾಲನೆ ನೀಡಿದರು.