ವಿಜಯಪುರ: ಮಹಾರಾಷ್ಟ್ರ ಕರ್ನಾಟಕದ ವಿರುದ್ಧ ತಗಾದೆ ತೆಗೆಯುತ್ತ ಗಡಿ ಮತ್ತು ಜಲ ವಿಷಯಗಳಲ್ಲಿ ಕಿರಿಕಿರಿ ಮಾಡುತ್ತಿರುವುದು ಮಾಮೂಲಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಕರ್ನಾಟಕ ಕೂಡ ಸೂಕ್ತ ತಕ್ಕುತ್ತರ ನೀಡಿತ್ತಲೇ ಇದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಇದರ ಮುಂದುವರೆದ ಭಾಗವಾಗಿ ಕರ್ನಾಟಕ ಕಾಲುವೆಗಳ ಮೂಲಕ ಮಹಾರಾಷ್ಟ್ರದ ಗಡಿಯ 28 ಗ್ರಾಮಗಳಿಗೆ ಮಾನವೀಯತೆ ಆಧಾರದ ಮೇಲೆ ನೀರು ಬಿಡುಗಡೆ ಮಾಡಿದೆ. ಈ ವಿದ್ಯಮಾನಗಳ ನಡುವೆಯೇ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ 42 ಗ್ರಾಮಸ್ಥರು ತಮ್ಮನ್ನು ಕರ್ನಾಟಕಕ್ಕೆ ಸೇರಿಸುವಂತೆ ಠರಾವು ಕೂಡ ಮಾಡಿದ್ದಾರೆ.
ಈ ವಿದ್ಯಮಾನಗಳು ಮಹಾರಾಷ್ಟ್ರದಲ್ಲಿ ಆಡಳಿತರೂಢ ಶಿವಸೇನೆ- ಬಿಜೆಪಿ ಮತ್ತು ಪ್ರತಿಪಕ್ಷಗಳ ಮಧ್ಯೆ ತೀವ್ರ ರಾಜಕೀಯ ಹೇಳಿಕೆ- ಪ್ರತಿ ಹೇಳಿಕೆಗಳಿಗೆ ಕಾರಣವಾಗಿವೆ. ಇದರಿಂದ ಎಚ್ಚೆತ್ತುಕೊಂಡಿರುವ ಮಹಾರಾಷ್ಡ್ರ ಸರಕಾರ ಗಡಿ ಗ್ರಾಮಸ್ಥರ ಮನವೊಲಿಸಲು ತನ್ನ ಸಚಿವರನ್ನು ಕಳುಹಿಸಿಕೊಟ್ಟಿತ್ತು.
ಮಹಾರಾಷ್ಟ್ರದಲ್ಲಿರುವ ಜತ್ ತಾಲೂಕಿನ ಸಂಖ ಮತ್ತು ತಿಕ್ಕುಂಡಿ ಗ್ರಾಮಗಳಿಗೆ ಭೇಟಿ ನೀಡಿದ ಉದ್ಯೋಗ ಸಚಿವ ಉದಯ ಸಾವಂತ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ಅವರನ್ನು ಹೊಗಳುವ ಮೂಲಕ ಮಹಾರಾಷ್ಟ್ರ ಸರಕಾರಕ್ಕೆ ಮಹಾ ಮಂಗಳಾರತಿ ಮಾಡಿದ್ದಾರೆ.
ನಮ್ಮ ಬೇಡಿಕೆ ಈಡೇರಿದಿದ್ದರೆ ನಮಗೆ ಕರ್ನಾಟಕ ಕ್ಕೆ ಹೋಗಲು ಎನ್ಓಸಿ(ನಿರಪೇಕ್ಷಣೆ ಪತ್ರ) ಕೊಡಿ ಎಂದು ಗಡಿ ಕನ್ನಡಿಗರು ಒತ್ತಾಯಿಸಿದ್ದಾರೆ.
ಅದರಲ್ಲಿ ಎಸ್. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಕರ್ನಾಟಕದ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ಅ ಹಾಡಿ ಹೊಗಳಿದ್ದು ಸಚಿವರಿಗೆ ಇರಿಸು- ಮುರಿಸು ಉಂಟಾಗುವಂತೆ ಮಾಡಿದೆ.
ಎಂ. ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ದೇಶದಲ್ಲಿ ಅತೀ ಹೆಚ್ಚ ಬರಪೀಡಿತ ಎರಡನೇ ಜಿಲ್ಲೆ ಎಂದು ಹಣೆಪಟ್ಟಿ ಹೊತ್ತಿದ್ದ ವಿಜಯಪುರ ಜಿಲ್ಲೆಯಲ್ಲಿ ಸಹಸ್ರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಾನಾ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು. ಈ ಸಂದರ್ಭದಲ್ಲಿ ಅವರ ಸ್ವಕ್ಷೇತ್ರ ಬಬಲೇಶ್ವರ ಮತಕ್ಷೇತ್ರದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ್ದರು. ಈ ಗ್ರಾಮಗಳಲ್ಲಿ ಬಹುತೇಕ ಕನ್ನಡಿಗರೇ ವಾಸಿಸುತ್ತಿದ್ಸು, ನೀರಿಲ್ಲದೇ ಪರದಾಡುತ್ತಿದ್ದರು. ತಮಗೂ ಕುಡಿಯಲು ನೀರು ಕೊಡಿ ಎಂದು ಬಂದು ಮನವಿ ಮಾಡಿದಾಗ ಮಾತೃಹೃದಯಿ ಎಂ. ಬಿ. ಪಾಟೀಲರು ಕರ್ನಾಡಕದ ಗಡಿಯ ಯತ್ನಾಳ ಕೆರೆಯನ್ನು ತುಂಬಿಸಿ ಆ ನೀರು ನೈಸರ್ಗಿಕವಾಗಿ ಮಹಾರಾಷ್ಟ್ರದ ತಿಕ್ಕುಂಡಿ ಸೇರಿದಂತೆ 22 ಗ್ರಾಮಸ್ಥರ ಜಲದಾಹ ತೀರುವಂತೆ ಮಾಡಿದ್ದರು. ಈ ಕ್ರಮ ಜತ್ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನಲ್ಲಿಯೂ ಪ್ರಮುಖ ಪಾತ್ರ ವಹಿಸಿತ್ತು. ಪಕ್ಷಾತೀತವಾಗಿ ಜನ ತಮಗೆ ನೀರುಕೊಟ್ಟ ಎಂ. ಬಿ. ಪಾಟೀಲರ ಮಾತಿಗೆ ಕೃತಜ್ಞತೆ ಸಲ್ಲಿಸಲು ಕಾಂಗ್ರೆಸ್ ಅಭ್ಯರ್ಥಿ ಗೆಲುವಿನಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಎಂ. ಬಿ. ಪಾಟೀಲರ ಈ ಋಣವನ್ನು ಈಗ ನಡೆದ ಸಭೆಯಲ್ಲಿ ಪ್ರಸ್ತಾಪಿಸಿ ಗುಣಗಾನ ಮಾಡುವ ಮೂಲಕ ಮಹಾರಾಷ್ಟ್ರ ಸರಕಾರ ತಮ್ಮ ಬಗ್ಗೆ ತಾಳಿರುವ ನಿರ್ಲಕ್ಷ್ಯ ಧೋರಣೆಯ ಬಗ್ಗೆ ನೇರವಾಗಿಯೇ ಛಾಟಿ ಬೀಸಿದ್ದಾರೆ. ಇದು ಅಲ್ಲಿನ ಸಚಿವ ಉದಯ ಸಾವಂತ ಅವರಿಗೆ ಇರುಸು ಮುರುಸು ತಂದಿತು.
ಬಳಿಕ ಪ್ರತಿಕ್ರಿಯೆ ನೀಡಿದ ಸಚಿವರು ಶೀಘ್ರದಲ್ಲಿಯೇ ಗಡಿ ನಾಡು ಕನ್ನಡಿಗರ ಸಮಸ್ಯೆ ಬಗೆ ಹರಿಸುವದಾಗಿ ಭರವಸೆ ನೀಡಿದರು.