ವಿಜಯಪುರ: ಗಡಿ ವಿಚಾರದಲ್ಲಿ ಮಹಾರಾಷ್ಟ್ರ ದೇಶದಲ್ಲಿ ಅಶಾಂತಿ ಮೂಡಸುವ ಕಲಸ ಮಾಡುತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿನಗೆ ಮಾತನಾಡಿದ ಅವರು, ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಇದೇ ರೀತಿಯ ಕ್ಯಾತೆ ತೆಗೆಯುತ್ತ ಬಂದಿದೆ. ಮಹಾಜನ್ ವರದಿಯನ್ನು ಮಹಾರಾಷ್ಟ್ರ ಸರಕಾರ ಒಪ್ಪಿಲ್ಲ. ಮಹಾಜನ್ ಆಯೋಗವನ್ನ ರಚನೆ ಮಾಡಿಸಿದವರು ಮಹಾರಾಷ್ಟ್ರದವರು. ನಂತರ ಮಹಾಜನ್ ಆಯೋಗದ ವರದಿಗೆ ತಕರಾರು ಮಾಡಿದರು. ದೇಶದಲ್ಲಿ ಶಾಂತಿಯಿಂದ ಇರಬೇಕೆಂಬ ಇಚ್ಛೆ ಮಹಾರಾಷ್ಟ್ರದವರಿಗಿಲ್ಲ. ಕರ್ನಾಟಕ ಮಹಾರಾಷ್ಟ್ರ ಕನ್ನಡ ಮರಾಠಿ ಎಂಬ ಕ್ಷುಲ್ಲಕ ವಿಚಾರ ಮಾಡಿಕೊಂಡು ಬಂದಿದ್ದಾರೆ. ಈ ಮೂಲಕ ಮಹಾರಾಷ್ಟ್ರದವರು ದೇಶದಲ್ಲಿ ಅಶಾಂತಿಯನ್ನ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ವೋಟ್ ಬ್ಯಾಂಕ್ ಗಾಗಿ ಮಾಡುತ್ತಿರುವ ಕುತಂತ್ರವಾಗಿದೆ. ಮಹಾರಾಷ್ಟ್ರದ ಬಿಜೆಪಿ ಇರಬಹುದು ಅಥವಾ ಶಿವಸೇನೆ ಇರಬಹುದು. ಎಂಇಎಸ್ ಇರಬಹುದು. ಇವರೆಲ್ಲ ವೋಟ್ ರಾಜಕಾರಣದಿಂದ ಈ ರೀತಿ ಮಾತನಾಡುತ್ತಿದ್ದಾರೆ. ಮಹಾಜನ್ ಆಯೋಗದ ವರದಿ ಒಪ್ಪುವುದೊಂದೆ ಇದಕ್ಕೆ ಇರುವ ಪರಿಹಾರ ಎಂದು ಶಾಸಕರು ಸ್ಪಷ್ಟಪಡಿಸಿದರು.
ಗುಜರಾತ ಮಾದರಿಯಲ್ಲಿ ಟಿಕೆಟ್ ಹಂಚಿಕೆ
ಇದೇ ವೇಳೆ, ಗುಜರಾತ್ ಮಾದರಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಟಿಕೆಟ್ ಹಂಚಿಕೆ ನಡೆದರೆ ಅಚ್ಚರಿಯಿಲ್ಲ ಎಂದು ಈ ಹಿಂದೆಯೇ ಹೇಳಿದ್ದೇನೆ. ಕರ್ನಾಟಕದ ಪ್ರತಿ ಕ್ಷೇತ್ರದ ಪ್ರತಿ ಶಾಸಕರ ಮಾಹಿತಿ ಪ್ರಧಾನಿ ಬಳಿ ಇದೆ. ಗುರುವಾರ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಫಲಿತಾಂಶದ ಬಳಿಕ ಮೋದಿ ಅವರು ಕರ್ನಾಟಕದ ಕಡೆ ಚಿತ್ತಹರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಚುನಾವಣೆಗೆ ಏನೆಲ್ಲ ಬೇಕು? ಯಾವೆಲ್ಲ ಬದಲಾವಣೆ ಮಾಡಬೇಕು? ಎಂಬುದನ್ನ ಹೈಕಮಾಂಡ್ ನಿರ್ಧಾರ ಮಾಡಲಿದೆ. ನಮ್ಮ ಹೈಕಮಾಂಡ್ ಸಾಕಷ್ಟು ಸಮೀಕ್ಷೆಗಳನ್ನ ಮಾಡಿರುತ್ತದೆ. ಸಚಿವರ ಹಾಗೂ ಶಾಸಕರ ಪರಿಸ್ಥಿತಿ ಏನಿದೆ ಎಂಬುದರ ಮಾಹಿತಿ ಸಂಗ್ರಹಿಸಿರುತ್ತದೆ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರು ನಾವು ಬದ್ಧರಾಗಿರುತ್ತೇವೆ. ಕರ್ನಾಟಕದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬದಲಾವಣೆ ಮಾಡುತ್ತೇವೆ ಎಂದರೂ ನಮ್ಮ ಒಪ್ಪಿಗೆ ಇದೆ ಬೆಂಬಲವಿದೆ ಎಂದು ಅವರು ತಿಳಿಸಿದರು.
ಪಂಚಮಸಾಲಿ ಹೋರಾಟ ನಕಲಿ ಎಂದ ನಟ ಚೇತನ್ ವಿರುದ್ಧ ಆಕ್ರೋಶ
ಇದೇ ವೇಳೆ, ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿಗಾಗಿ ನಕಲಿ ಹೋರಾಟ ಮಾಡುತ್ತಿದ್ದಾರೆ ಎಂದು ಚಿತ್ರನಟ ಮತ್ತು ಹೋರಾಟಗಾರ ಚೇತನ್ ಹೇಳಿಕೆ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹಾದಿ ಬೀದಿಗಿರೋ ಲೋಫರ್ ಬಗ್ಗೆ ನಾನು ಮಾತನಾಡಲ್ಲ. ನಟ ಚೇತನ್ ನನ್ನ ಲೋಫರ್ ಎಂದು ಹೆಸರು ಹೇಳದೆ ಯತ್ನಾಳ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಇಂಥ ತಲೆ ಹಿಡುಕ ಸಿದ್ಧಾಂತವಿಲ್ಲದ ವ್ಯಕ್ತಿಗಳಿಗೆ ಬಹಳ ಬೆಲೆ ಕೊಡಬೇಡಿ ಎಂದು ಕಿವಿಮಾತು ಹೇಳಿದರು.
ಇಲ್ಲಿಯವರೆಗೆ ಅಂಬೇಡ್ಕರ್ ಅವರ ವಿಚಾರಗಳನ್ನ ಮುಚ್ಚಿಟ್ಟಿದ್ದೆ ದುರಂತ. ಅಂಬೇಡ್ಕರ್ ಅವರ ಜೀವನ ಮತ್ತು ಅವರ ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡಬೇಕಿದೆ. ಕೆಲ ಜನರು ತಮ್ಮ ಉಪಜೀವನಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ಹಾಳು ಮಾಡುತ್ತಿದ್ದಾರೆ. ದಿ ಪಾರ್ಟಿಶನ್ ಆಫ್ ಪಾಕಿಸ್ತಾನ ಎಂಬ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಸ್ಪಷ್ಟವಾಗಿ ಬರೆದಿದ್ದಾರೆ. ಭಾರತ ಇಬ್ಬಾಗಬೇಕಾದರೆ ಇಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು. ಅಲ್ಲಿರುವ ಹಿಂದುಗಳು ಭಾರತಕ್ಕೆ ಬರಬೇಕೆಂದು ಅಂಬೇಡ್ಕರ್ ಹೇಳಿದ್ದರು. ಮುಸ್ಲಿಮರು ಅನ್ಯ ಧರ್ಮದವರನ್ನು ಸಹೋದರತೆಯಿಂದ ನೋಡಲ್ಲ ಎಂದು ಅಂಬೇಡ್ಕರ್ ಅವರು ಬರೆದಿದ್ದಾರೆ. ಆದರೆ, ಕೆಲವು ಜನ ರೋಲ್ ಕಾಲ್ ಲೀಡರ್ ಗಳು ದಲಿತ ಮುಸ್ಲಿಂ ಎಂದು ಹೇಳಿ ಜೀವನ ಮಾಡುತ್ತಿರುವುದು ದುರಂತ. ಅಂಬೇಡ್ಕರ್ ಅವರ ವಿಚಾರವನ್ನು ಅವರ ಕಷ್ಟ ಜೀವನವನ್ನು ಇವರಾರೂ ಅಧ್ಯಯನ ಮಾಡಿಲ್ಲ. ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಇಂಥ ಲೋಫರ್ ಗಳು ಹೇಳಿಕೆಗಳನ್ನು ಕೊಡುತ್ತಾರೆ. ಆ ಲೋಫರ್ ಎಲ್ಲಿವನು ಏನೋ ನಮ್ಮ ದೇಶವನಲ್ಲ ಎಂದು ಪರೋಕ್ಷವಾಗಿ ನಟ ಚೇತನ ನಮ್ಮ ದೇಶದವನಲ್ಲ. ಇಂಥವರಿಗೆ ಬಾಳ ಬೆಲೆ ಕೊಟ್ಟರೆ ಮಂಗ್ಯಾಗೆ ದಾರು (ಮಧ್ಯ) ಕುಡಿಸಿದಂತಾಗುತ್ತದೆ ಎಂದು ಚಿತ್ರನಟ ಚೇತನ್ ಹೆಸರು ಹೇಳದೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.