MBP Help: ಬಡ ಕೃಷಿಕನ ಮಗನ ಎಂಬಿಬಿಎಸ್ ಕನಸು ನನಸಾಗಲು ನೆರವಾದ ಕೊಡುಗೈ ದಾನಿ ಎಂ. ಬಿ. ಪಾಟೀಲ

ವಿಜಯಪುರ: ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ವೈದ್ಯನಾಗುವ ಕನಸು ನನಸಾಗದು ಎಂದು ಕಣ್ಣೀರು ಹಾಕುತ್ತ ಮನೆಯಲ್ಲಿ ಕುಳಿತಿದ್ದ ವಿದ್ಯಾರ್ಥಿಗೆ ಹಣಕಾಸು ನೆರವು ನೀಡುವ ಮೂಲಕ ಬಿ.ಎಲ್.ಡಿ.ಇ. ಸಂಸ್ಥೆಯ ಹಾಗೂ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಮತ್ತೊಮ್ಮೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದ ವಿದ್ಯಾರ್ಥಿ ಯಲ್ಲಾಲಿಂಗ ಭೀಮರಾಯ ಜೈನಾಪುರ ವೈದ್ಯನಾಗುವ ಕನಸು ಹೊಂದಿ ಶ್ರಮಪಟ್ಟು ಓದಿ ನೀಟ್ ಪರೀಕ್ಷೆ ಪಾಸಾಗಿದ್ದರು. ಅಲ್ಲದೇ ಸರಕಾರಿ ಕೋಟಾದಲ್ಲಿ ಮಂಡ್ಯ ಜಿಲ್ಲೆಯ ಬೆಳ್ಳೂರ ತಾಲೂಕಿನ ನಾಗಮಂಗಲದ ಖಾಸಗಿ ಮೆಡಿಕಲ್ ಕಾಲೇಜಾದ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಸೀಟು ಪಡೆದಿದ್ದರು. ಆದರೆ ಪ್ರವೇಶಕ್ಕೆ ಅಗತ್ಯವಾದ ಹಣ ಹೊಂದಿಸಲಾಗದೇ ವೈದ್ಯನಾಗುವ ಕನಸು ನನಸಾಗದೇ ಪರದಾಡುತ್ತಿದ್ದರು.

ಪರೋಪಕಾರಿ ಭೀಮರಾಯ ಜೈನಾಪುರ

ವಿದ್ಯಾರ್ಥಿಯ ತಂದೆ ಭೀಮರಾಯ ಮುಚ್ಚಂಡಿ ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಮುಚ್ಚಂಡಿ ಗ್ರಾಮದವರು. ಇವರ ತಾಯಿ ಸಕ್ರೆವ್ವ ಪರಸಪ್ಪ ಜೈನಾಪುರ ಬಾಬಾನಗರದವರು. ಹೀಗಾಗಿ ಸಕ್ರೆವ್ವಗೆ ಅವರ ತವರು ಮನೆಯವರು ಒಂದು ಎಕರೆ ಜಮೀನನ್ನು ಭಕ್ಷೀಸು ನೀಡಿದ್ದರು. ಹೀಗಾಗಿ ಸುಮಾರು 26 ವರ್ಷಗಳ ಹಿಂದೆ ಭೀಮರಾಯ ತಮ್ಮ ಪತ್ನಿ ಮಹಾದೇವಿ ಜೊತೆ ಬಾಬಾನಗರಕ್ಕೆ ಬಂದು ನೆಲೆಸಿದ್ದರು. ತಮಗೆ ತಾಯಿಯಿಂದ ಬಂದ ಒಂದು ಎಕರೆಯಲ್ಲಿ ಐದು ಗುಂಟೆ ಜಮೀನನ್ನು ಭೀಮರಾಯ ಸರಕಾರಿ ವಸತಿ ಶಾಲೆಗೆ ದಾನ ನೀಡಿ ಇತರ ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಲು ನೆರವಾಗಿದ್ದರು. ಇವರ ಹಿರಿಯ ಪುತ್ರ ನಾಗೇಶ ಬಿಎ ಪದವೀಧರನಾಗಿದ್ದು, ಕೃಷಿ ಕಾರ್ಮಿಕರಾಗಿದ್ದಾರೆ.  ಅಲ್ಲದೇ, ಭೀಮರಾಯ ಮತ್ತು ಅವರ ಪತ್ನಿ ಮಹಾದೇವಿ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ತಮ್ಮ ಹೊಲದ ಜೊತೆಯಲ್ಲಿಯೇ ಬೇರೆಯವರ ಹೊಲಗಳಿಗೂ ತೆರಳಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಅವರ ಪರಿಸ್ಥಿತಿ ಅರಿತಿದ್ದ ಗ್ರಾಮಸ್ಥರು ವಿದ್ಯಾರ್ಥಿ ಮತ್ತು ಆತನ ತಂದೆಯನ್ನು ಎಂ.ಬಿ.ಪಾಟೀಲರ ಬಳಿ ಕರೆತಂದು ಭೇಟಿ ಮಾಡಿಸಿ ವಾಸ್ತವಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದರು.

ಇದಕ್ಕೆ ಕೂಡಲೇ ಸ್ಪಂದಿಸಿದ ಎಂ.ಬಿ.ಪಾಟೀಲರು, ಬೆಳಿಗ್ಗೆ ತಮ್ಮ ನಿವಾಸಕ್ಕೆ ಆಗಮಿಸಿದ ವಿದ್ಯಾರ್ಥಿ ಮತ್ತು ಆತನ ತಂದೆಗೆ ಎಂಬಿಬಿಎಸ್ ಪ್ರವೇಶಕ್ಕೆ ಅಗತ್ಯವಾಗಿರುವ ಮೊದಲ ಕಂತಿನ ಹಣ ರೂ. 3,43,096 ಮೊತ್ತದ ಚೆಕ್ ವಿತರಿಸಿದರು. ಅಲ್ಲದೇ ಚನ್ನಾಗಿ ಓದಿ ಉತ್ತಮ ಅಂಕಗಳಿಸಿ ಆದರ್ಶ ವೈದ್ಯರಾಗಿ ಬಡವರ ಸೇವೆ ಮಾಡಿ ಬಸವನಾಡಿನ ಕೀರ್ತಿಯನ್ನು ಎತ್ತಿ ಹಿಡಿಯುವಂತೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ.ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ.ಕೊಟ್ನಾಳ, ವಿದ್ಯಾರ್ಥಿಯ ತಂದೆ ಭೀಮರಾಯ ಜೈನಾಪುರ, ಬಾಬಾನಗರದ ಮುಖಂಡರಾದ ಸಿದ್ಧು ಗೌಡನ್ನವರ, ಸಿದಗೊಂಡ ರುದ್ರಗೌಡರ, ರಾಜು ಪೂಜೇರಿ, ಅಶೋಕ ಹಟ್ಟಿ, ಬಾಹುಬಲಿ ಪಂಡಿತ, ವಿಠಲ ಪೂಜಾರಿ, ಕರೆಪ್ಪ ಕಡಪಟ್ಟಿ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂತಸ

ಚೆಕ್ ಪಡೆದ ಬಳಿಕ ಮಾತನಾಡಿದ ಎಂಬಿಬಿಎಸ್ ವಿದ್ಯಾರ್ಥಿ ಯಲ್ಲಾಲಿಂಗ ಭೀ ಜೈನಾಪೂರ, ನಮ್ಮದು ಬಡ ಕುಟುಂಬ. ಒಂದು ಎಕರೆ ಜಮೀನಿದೆ. ನಾನು ಎಸ್.ಎಸ್.ಎಲ್.ಸಿ. ವರೆಗೆ ಸರಕಾರಿ ಶಾಲೆಯಲ್ಲಿ ಓದಿ ಖಾಸಗಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪಾಸಾಗಿದ್ದೇನೆ. ಎಂಬಿಬಿಎಸ್ ಓದಿ ವೈದ್ಯನಾಗುವ ಕನಸು ಹೊಂದಿದ್ದೆ. ಆದರೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇರದ ಕಾರಣ ಕೋರ್ಸಿಗೆ ಪ್ರವೇಶ ಪಡೆಯಲು ಸಾಧ್ಯವಿರಲಿಲ್ಲ. ಬೇರೆ ಏನಾದರೂ ಓದು ಎಂದು ಮನೆಯವರು ಸಲಹೆ ನೀಡಿದ್ದರು. ಆದರೆ ಗ್ರಾಮದ ಮುಖಂಡರು ನಮ್ಮ ಶಾಸಕರಾದ ಎಂ.ಬಿ.ಪಾಟೀಲರ ಬಳಿ ನಮ್ಮನ್ನು ಕರೆದುಕೊಂಡು ಬಂದು ನೆರವು ನೀಡುವಂತೆ ಮನವಿ ಮಾಡಿದರು. ಆಗ ಕೂಡಲೇ ಸ್ಪಂದಿಸಿದ ಶಾಸಕರು ನನಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ತಿಳಿಸಿ ಎಂಬಿಬಿಎಸ್ ಕೋರ್ಸಿನ ವೆಚ್ಚವನ್ನು ಭರಿಸುವುದಾಗಿ ಹೇಳಿ ಈಗ ಚೆಕ್ ನೀಡಿದ್ದಾರೆ. ಇದರಿಂದ ನನ್ನ ಕನಸು ನನಸಾಗುತ್ತಿದೆ. ಶಾಸಕರಿಗೆ ಚಿರಋಣಿಯಾಗಿರುತ್ತೇನೆ. ಅವರ ಆಶೆಯದಂತೆ ಉತ್ತಮ ವೈದ್ಯನಾಗುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಮಗನ ಕನಸು ನನಸಿಗೆ ತಂದೆ ಆನಂದಭಾಷ್ಪ

ವಿದ್ಯಾರ್ಥಿಯ ತಂದೆ ಭೀಮರಾಯ ಜೈನಾಪುರ ಮಾತನಾಡಿ, ಮಗ ನೀಟ್ ಪಾಸಾಗಿದ್ದರೂ ಅವನನ್ನು ವೈದ್ಯನನ್ನಾಗಿ ಮಾಡುವ ಆರ್ಥಿಕ ಶಕ್ತಿ ನಮ್ಮಲ್ಲಿರಲಿಲ್ಲ. ಬೇರೆ ಕೆಲಸ ಮಾಡು ಎಂದು ಹೇಳಿದ್ದೇವು ಇದರಿಂದ ಬೇಸರಗೊಂಡ ಮಗ ಮನೆಯಲ್ಲಿ ಅಳುತ್ತ ಕುಳಿತಿದ್ದ. ಆಗ ಗ್ರಾಮದ ಮುಖಂಡರು ಎಂ.ಬಿ.ಪಾಟೀಲರ ಬಳಿ ನಮ್ಮನ್ನು ಕರೆದುಕೊಂಡು ಬಂದು ಪರಿಹಾರ ಒದಗಿಸಿದ್ದಾರೆ. ಈಗ ಶಾಸಕರು ಕೂಡಲೇ ಸ್ಪಂದಿಸಿ ಕೋರ್ಸ ಮುಗಿಯುವವರೆಗೂ ಹಣ ನೀಡಲು ಒಪ್ಪಿ ಮೊದಲ ಕಂತಿನ ಹಣದ ಚೆಕ್ ನೀಡಿದ್ದಾರೆ. ಎಂ.ಬಿ.ಪಾಟೀಲರು ನಮ್ಮ ಪಾಲಿನ ದೇವರು. ನಮಗೆ ಬಹಳ ಉಪಕಾರ ಮಾಡಿದ್ದಾರೆ. ನಮಗೆಲ್ಲರಿಗೂ ಅತೀವ ಸಂತೋಷವಾಗಿದೆ. ಸಾಹೇಬರ ಆಶೀರ್ವಾದದಿಂದ ಮಗ ಡಾಕ್ಟರ್ ಆಗುತ್ತಿರುವುದು ನಮಗೆಲ್ಲರಿಗೂ ಖುಷಿ ನೀಡಿದೆ ಎಂದು ತಿಳಿಸಿದರು.

ಇದೇ ಡಿಸೆಂಬರ 2ರಂದು ಇಬ್ಬರು ಬಡ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪ್ರವೇಶ ಪಡೆಯಲು ಆರ್ಥಿಕವಾಗಿ ನೆರವಾಗುವ ಮೂಲಕ ಎಂ.ಬಿ.ಪಾಟೀಲರು ಸಹಾಯಹಸ್ತ ಚಾಚಿದ್ದರು. ಅಷ್ಟೇ ಅಲ್ಲ, ಈ ಹಿಂದೆಯೂ ಸಾಕಷ್ಟು ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ನೆರವಾಗಿರುವ ಆಧುನಿಕ ಭಗೀರಥ ಎಂ.ಬಿ.ಪಾಟೀಲರು ಕೊಡುಗೈ ದಾನಿ ಎಂದು ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Leave a Reply

ಹೊಸ ಪೋಸ್ಟ್‌