ವಿಜಯಪುರ: ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಬಿಜೆಪಿಯ ಹಿರಿಯ ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರ ಹಾಗೂ ಹಿರಿಯರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು. ಬಿ. ಎಸ್. ಯಡಿಯೂರಪ್ಪ ಅವರನ್ನು ಪಕ್ಷ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಯಡಿಯೂರಪ್ಪ ಹಾಗೂ ಹಿರಿಯರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಮತ್ತೆ ಬಿಜೆಪಿಯನ್ನು ರಾಜ್ಯದಲ್ಲಿ ಮರುಸ್ಥಾಪಿಸುವ ಕೆಲಸವನ್ನು ನಾವೆಲ್ಲರೂ ಮಾಡುತ್ತೇವೆ ಎಂದು ಅವರು ಹೇಳಿದರು.
ಪ್ರತಿಪಕ್ಷದವರಿಗೆ ಬೇರೆ ಕೆಲಸವಿಲ್ಲ. ಅವರಿಗೆ ಭಯದ ವಾತಾವರಣ ಕಾಡುತ್ತಿದೆ. ಹಾಗಾಗಿ ಅವರು ಏನೆಲ್ಲಾ ಹೇಳಬೇಕು, ಆ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ನಾವೆಲ್ಲ ಸದೃಢರಾಗಿದ್ದೇವೆ. ಪಕ್ಷದ ಕಾರ್ಯಕರ್ತರು ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಖಂಡಿತವಾಗಿಯೂ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿಲ್ಲ. ಅವರಿಗೆ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಉನ್ನತ ಸ್ಥಾನಮಾನ ನೀಡಲಾಗಿದೆ. ನಾವು ಸಚಿವರು, ಮುಖ್ಯಮಂತ್ರಿಗಳು, ಯಡಿಯೂರಪ್ಪ ಅವರೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದೇವೆ. ಯಡಿಯೂರಪ್ಪ ಅವರನ್ನು ಯಾವುದೇ ರೀತಿಯಲ್ಲಿ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಭೈರತಿ ಬಸವರಾಜ ಹೇಳಿದರು.
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ ರಾಜಕೀಯವಾಗಿ ಮುಗಿಸಲಾಯಿತು. ಅದೇ ರೀತಿ ಸಿದ್ದರಾಮಯ್ಯ ವಿರುದ್ಧ ಬಿ. ವೈ. ವಿಜಯೇಂದ್ರ ಅವರನ್ನು ಕಣಕ್ಕಿಳಿಸಿ ಅವರನ್ನೂ ಕೂಡ ರಾಜಕೀಯವಾಗಿ ಮುಗಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಕ್ಷ ಇನ್ನು ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ. ಮೊನ್ನೆ ಮೈಸೂರಿಗೆ ಹೋದ ಸಂದರ್ಭದಲ್ಲಿ ಬಿ. ವೈ. ವಿಜಯೇಂದ್ರ ಅವರು ನಾನು ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ತಯಾರಾಗಿದ್ದೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಪಕ್ಷ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್ ಮತ್ತು ಹಿರಿಯರು ಯಾರು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರು ಎಲ್ಲರನ್ನೂ ತಮ್ಮ ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಆದರೆ, ಹೋಗುವವರು ಯಾರು ಇಲ್ಲ. ನಾನು ಸೇರಿದಂತೆ ಬಿಜೆಪಿಗೆ ಸೇರಿದವರು ಎಲ್ಲರೂ ಬಿಜೆಪಿಯಲ್ಲಿ ಇರುತ್ತೇವೆ. ಹೈಕಮಾಂಡ್ ಹೇಳಿದ ಕೆಲಸವನ್ನು ಶಿರಸಾವಹಿಸಿ ಚಾಚೂ ತಪ್ಪದೆ ಮಾಡುತ್ತೇವೆ. ಎಲ್ಲ 17 ಜನ ಬಿಜೆಪಿಯಲ್ಲಿಯೇ ಇರುತ್ತವೆ. ಬಿಜೆಪಿಯಿಂದ ಟಿಕೆಟ್ ಪಡೆಯುತ್ತೇವೆ. ಮತ್ತೆ ಗೆದ್ದು ಬಂದು ಬಿಜೆಪಿ ಸರಕಾರವನ್ನು ರಚನೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.
ಗುಜರಾತ ಮಾದರಿ ಚುನಾಚಣೆ
ಕರ್ನಾಟಕದಲ್ಲಿಯೂ ಗುಜರಾತ್ ಮಾದರಿಯಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗುಜರಾತ ಮಾದರಿಯಲ್ಲಿ ಚುನಾವಣೆ ನಡೆದರೂ ನಡೆಯಬಹುದು. ಗುಜರಾತಿನಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ ಎಂದು ಹೇಳಿದರು.
ಜನಾರ್ಧನರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರ
ಮಾಜಿ ಸಚಿವ ಜನಾರ್ದನ್ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಮಾಹಿತಿ ಇಲ್ಲ. ಅವರು ಕೂಡ ಎಲ್ಲಿಯೂ ಆ ರೀತಿ ಹೇಳಿಲ್ಲ. ಹೀಗಾಗಿ ಆ ಬಗ್ಗೆ ಪ್ರತಿಫಲ ನೀಡಲ್ಲ ಎಂದು ಸಚಿವರು ತಿಳಿಸಿದರು.
ವಿಜಯಪುರ ಮೇಯರ್, ಉಪಮೇಯರ್ ಚುನಾವಣೆ ವಿಚಾರ
ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರಚ ಚುನಾವಣೆ ವಿಚಾರ ಕುರಿತು ಈಗಾಗಲೇ ಪ್ರಾದೇಶಿಕ ಆಯುಕ್ತರಿಗೆ ಚುನಾವಣೆ ದಿನಾಂಕ ನಿಗದಿ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಕಾರ್ಪೊರೇಟರ್ ರಾಜು ಮಗಿಮಠ ಮುಂತಾದವರು ಉಪಸ್ಥಿತರಿದ್ದರು.