Oldage Home: ವೃದ್ಧರ ನೆಮ್ಮದಿಗಾಗಿ ಆಪ್ಟೆ ಫೌಂಡೇಶನ್ ನಿಂದ ಸ್ವಾಭಿಮಾನ ಹೌಸ್ ನಿರ್ಮಾಣ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಅರಕೇರಿ ಎಲ್. ಟಿ. ಬಳಿ ಆಪ್ಟೆ ಫೌಂಡೇಶನ್ ವೃದ್ಧರ ನೆಮ್ಮದಿಗಾಗಿ ಸ್ವಾಭಿಮಾನ ಹೌಸ್ ನಿರ್ಮಿಸುವ ಮೂಲಕ ಗಮನ ಸೆಳೆದಿದೆ.

ಸುಂದರ ವಾತಾವರಣ ಕಲ್ಪಿಸಲು ನಿರ್ಮಿಸಲಾಗಿರುವ ಈ ಓಲ್ಡ್ಏಜ್ ಹೋಮ್ ರವಿವಾರ ಡಿ. 18ರಂದು ಸೇವಾರ್ಪಣೆಯಾಗಲಿದೆ ಎಂದು ಆಪ್ಟೆ ಫೌಂಡೇಶನ್ ಅಧ್ಯಕ್ಷ ವಿನಯ್ ಆಪ್ಟೆ ಹಾಗೂ ರಾಮಸಿಂಗ್ ರಜಪೂತ ತಿಳಿಸಿದ್ದಾರೆ.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಹಾಗೂ ಮಹಾರಾಷ್ಟ್ರದ ಕೊಲ್ಹಾಪುರದ ಪ್ರತಿಭಾ ಅಪ್ಟೆ ನೆರವೇರಿಸಲಿದ್ದಾರೆ. ವಿಜಯಪುರ ಮಹಾನಗರ ಪಾಳಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮತ್ತು ಬಾಗಲಕೋಟ ಲೋಕಾಯುಕ್ತ ಸಿಪಿಐ ಮಹಿಂದ್ರಕುಮಾರ ನಾಯಿಕ ಅವರು ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಾಲ್ಕು ಎಕರೆ ಸುಂದರ ಪರಿಸರದಲ್ಲಿ ನಿರ್ಮಿಸಲಾಗಿರುವ ನಿಸರ್ಗ ಸ್ನೇಹಿ ಓಲ್ಡ್ ಏಜ್ ಹೋಮ್ ಇದಾಗಿದೆ. ಒಟ್ಟು 30 ಜನ ವೃದ್ಧರು ಇಲ್ಲಿ ಏಕಕಾಲಕ್ಕೆ ವಾಸಿಸಲು ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 12 ಸುಸಜ್ಜಿತ ಕೋಣೆಗಳು ಇಲ್ಲಿದ್ದು, ಅವುಗಳಲ್ಲಿ ಎರಡು ಬೆಡ್‌ಗಳ ಒಂಬತ್ತು ಕೋಣೆಗಳು, ನಾಲ್ಕು ಬೆಡ್‌ಗಳ ಮೂರು ಕೋಣೆಗಳನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಇಲ್ಲಿ ತಂಗುವ ವೃದ್ಧರ ಆರೋಗ್ಯದ ಮೇಲೆ ದಿನದ 24 ಗಂಟೆ ನಿಗಾ ಇಡಲು ಓರ್ವ ಹಿರಿಯ ದಾದಿ(ಸುಶ್ರೂಷಕಿ) ಹಾಗೂ ಅವರ ಅಗತ್ಯ ಸೇವೆಗಳನ್ನು ಪೂರೈಸಲು ಸೇವಾ ಮನೋಭಾವವುಳ್ಳ ಪರಿಚಾರಕರು ಹಾಗೂ ಅಡುಗೆ ತಯಾರಕರು, ಸಹಾಯಕ- ಸಹಾಯಕಿಯರ ವಾಸ್ತವ್ಯಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಲಭ್ಯವಿದೆ. ಇಲ್ಲಿ ಮನೆಯವರಂತೆ ಪ್ರತಿನಿತ್ಯ ಅವರ ಯೋಗಕ್ಷೇಮ ಮತ್ತು ಅಗತ್ಯತೆ ವಿಚಾರಿಸಲು ಜೊತೆಗೆ ಸಮರ್ಪಣೆ ಮನೋಭಾವದಿಂದ ಹಿರಿಯರ ಸೌಖ್ಯ ಕಾಪಾಡಲು ಆಪ್ಟೆ ಫೌಂಡೇಶನ್ ಮುಖ್ಯಸ್ಥ ವಿನಯ್ ಆಪ್ಟೆ ದಂಪತಿ ಸಹ ಈ ಪ್ರದೇಶದಲ್ಲಿಯೇ ವಾಸ್ತವ್ಯ ಹೂಡಿರಲಿದ್ದಾರೆ.

ಬದುಕಿನ ಕೊನೆಯ ಕ್ಷಣದ ವರೆಗೂ ಸುಖವಾಗಿ ಇರಬೇಕೆಂಬುದು ಮನುಷ್ಯನ ಸಹಜ ಬಯಕೆ. ಬದುಕಿನ ಮುಸ್ಸಂಜೆಯಲ್ಲಿರುವ ಹಿರಿಯರಿಗೆ ಮನಸ್ಸಿಗೆ ಸಮಾಧಾನ, ಸಂತೃಪ್ತಿ ತರುವಂಥ ವಾತಾವರಣ ಈ ಸ್ವಾಭಿಮಾನ ಹೌಸ್’ನಲ್ಲಿ ಇರಲಿದೆ. ಸೇವಾ ಮನೋಭಾವನೆ, ಮಾನವೀಯತೆ ಹಾಗೂ ಹೃದಯವಂತಿಕೆಯಿಂದ ಸ್ವಾಭಿಮಾನ ಹೌಸಿನಲ್ಲಿ ತಂಗಿರುವ ವೃದ್ಧರ ಸ್ವಾಭಿಮಾನಕ್ಕೆ ಧಕ್ಕೆ ತರದಂತೆ ಅವರೆಲ್ಲರ ಬದುಕಿಗೆ ಘನತೆಯನ್ನು ಕಾಯ್ದುಕೊಂಡು ನೆಮ್ಮದಿಯಿಂದ, ಸೌಖ್ಯದಿಂದ ಬಾಳಲು ಅಗತ್ಯವಿರುವ ಎಲ್ಲ ವಾತಾವರಣ ಇರಲಿದೆ.

ಸಂಪೂರ್ಣವಾಗಿ ಸಾವಯವ ಪದಾರ್ಥಗಳಿಂದ ತಯಾರಿಸಲಾದ ಬಿಸಿಯಾದ, ಹಿತವಾದ ಅಡುಗೆ ಸಮಯಕ್ಕೆ ಸರಿಯಾಗಿ ಒದಗಿಸಿ ಇಲ್ಲಿರುವ ಹಿರಿಯರ ಆರೋಗ್ಯವನ್ನು ವೃದ್ಧಿಸುವ ಉಪಚಾರ ಕೂಡ ಸಿಗಲಿದೆ. ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ನಿತ್ಯ ಧ್ಯಾನ, ಯೋಗ ಸೇರಿದಂತೆ ಅನೇಕ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. ಜೊತೆಗೆ ಆಗಾಗ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ವ್ಯಕ್ತಿತ್ವ ವಿಕಸನಕ್ಕೆ ನೆರವಾಗಬಲ್ಲ ಸಂವಾದಗಳು, ಕಾರ್ಯಕ್ರಮಗಳನ್ನು ಏರ್ಪಡಿಸುವ ಯೋಜನೆ ಹೊಂದಲಾಗಿದೆ. ಮನೋರಂಜನೆ ಒದಗಿಸಲು ಹಾಗೂ ಸಮಯ ಕಳೆಯಲು ಒಳಾಂಗಣ ಕ್ರೀಡೆಗಳ ಸೌಲಭ್ಯ, ಅದಕ್ಕಾಗಿ ಪ್ರತ್ಯೇಕವಾದ, ವಿಶಾಲವಾದ ಕೋಣೆಯನ್ನೇ ಇಲ್ಲಿ ನಿರ್ಮಿಸಲಾಗಿದೆ. ಇಲ್ಲಿಗೆ ಬರುವ ವೃದ್ಧರು ಮನೆಯಲ್ಲಿ ಕಾಣದ, ಸಿಗದ ನೆಮ್ಮದಿಯನ್ನು ಅರಸಿ ಬಂದಿರುತ್ತಾರೆ. ಅವರ ಭಾವನೆಗಳಿಗೆ ಧಕ್ಕೆ ಬಾರದಂತೆ ನಿಗದಿತ ಶುಲ್ಕದಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಅಗತ್ಯ ಸೇವೆ ಒದಗಿಸಲು ವೃದ್ಧರ ಹಿತ ಕಾಪಾಡಲು ಆಪ್ಟೆ ಫೌಂಡೇಶನ್ ಈ ಸ್ವಾಭಿಮಾನ ಆರಂಭಿಸಿದೆ ಎಂದು ವಿನಯ ಆಪ್ಟೆ ತಿಳಿಸಿದರು.

ಈ ಸಂದರ್ಭದಲ್ಲಿ ರೋಹನ್ ಆಪ್ಟೆ, ಚೇತನ್ ರಜಪೂತ ಮತ್ತು ರಾಹುಲ್ ಆಪ್ಟೆ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌