DC Village: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ- ರೈತರ ಹೊಲಗಳಿಗೆ ರಸ್ತೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆದ್ಯತೆ- ಶಾಸಕ ರಮೇಶ ಭೂಸನೂರ

ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ನೀರಾವರಿ ಬಂದ ಮೇಲೆ  ಈ ಭಾಗದ ಸಾಕಷ್ಟು ರಸ್ತೆಗಳು ಸುಧಾರಣೆಯಾಗಿವೆ. ರೈತರು ಉತ್ತಮ ಬೆಳೆ ಬೆಳೆಯುವಂತಾದರೂ  ತಾವು ಬೆಳೆದ ಬೆಳೆಗಳನ್ನು ಸೂಕ್ತ ಬೆಲೆಯಲ್ಲಿ ಮಾರಾಟ ಮಾಡಲು ಬೆಳೆಯನ್ನು ಹೊಲದಿಂದ ಮಾರುಕಟ್ಟೆಗೆ ಕೊಂಡೊಯ್ಯಲು ಕೆಲವೊಂದು ಕಡೆಗಳಲ್ಲಿ ರಸ್ತೆ ಇಲ್ಲದೇ ಸಮಸ್ಯೆಯಾಗುತ್ತಿರುವದು ಗಮನಕ್ಕೆ ಬಂದಿದ್ದು ಈಗಾಗಲೇ ಈ ಕುರಿತು ರೈತರ ಹೊಲಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಂದಗಿ ಶಾಸಕ ರಮೇಶ ಭೂಸನೂರ ಹೇಳಿದರು.

ಆಲಮೇಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಅರಿತು ಸಮಸ್ಯೆಗೆ ಪರಿಹಾರ ದೊರಕಿಸುವ ಸದುದ್ದೇಶ ಹೊಂದಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮನ್ನು ಆಯೋಜಿಸಿದೆ.

ಗ್ರಾಮೀಣ ಪ್ರದೇಶದ ಸಾರ್ವಜನಿಕರ, ರೈತರ ಮನೆಗಳಿಗೆ ಹೋಗಿ, ಭೇಟಿ ಮಾಡಿ ಸ್ಥಳದಲ್ಲಿಯೇ ಅವರ ಕುಂದು-ಕೊರತೆಗಳನ್ನು ಆಲಿಸಿ, ಪರಿಹಾರಿ ಕಲ್ಪಿಸುವ ಈ ಕಾರ್ಯಕ್ರಮ ಯಶಸ್ವಿಗೆ ಇಲ್ಲಿನ ಮೂಲಭೂತ ಸೌಲಭ್ಯ, ಜನರ ಕುಂದು ಕೊರತೆಗೆ ಪರಿಹಾರ, ಸೇರಿದಂತೆ ತಾಲೂಕಿನ ಸಕಲ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬೊಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿದ ವಿಜಯಪುರ ಡಿಸಿ ಡಾ. ದಾನಮ್ಮನವರ ಅವರನ್ನು ಗ್ರಾಮಸ್ಥರು ಸ್ವಾಗತಿಸಿದರು

ಗ್ರಾಮಾಂತರ ಪ್ರದೇಶಗಳಲ್ಲಿ ಭೇಟಿ ನೀಡಿದ ಸಂದರ್ಭಗಳಲ್ಲಿ ಅನೇಕ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು, ರೈತರು ಭೇಟಿಯಾಗಿ ವಿಧವಾ ವೇತನ, ಪಿಂಚಣಿ, ವೃದ್ದಾಪ್ಯ ವೇತನ, ಗ್ರಾಮದ ಮೂಲಭೂತ ಸೌಲಭ್ಯಗಳ ಕುರಿತು ಹಾಗೂ ರೈತರ ಹೊಲಗಳಿಗೆ ರಸ್ತೆ ಕಲ್ಪಿಸಲು  ಹಲವಾರು ಜನರು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳುತ್ತಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಇಂದು ತಾಲೂಕಿನ ಬೊಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದು, ಸಾರ್ವಜನಿಕರು ಸಹ ತಾಳ್ಮೆಯಿಂದ ಸಮಸ್ಯೆಗಳನ್ನು ಸಲ್ಲಿಸಬೇಕು. ಅಧಿಕಾರಿಗಳು ಸಹ ಈ ಭಾಗದ ಜನರ ಸಮಸ್ಯೆಗಳನ್ನು ಅರಿತು ಪರಿಹಾರ ದೊರಕಿಸಿ ತಾಲೂಕಿನ ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು ಶಾಸಕ ರಮೇಶ ಭೂಸನೂರ ಹೇಳಿದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾತನಾಡಿ, ಗ್ರಾಮೀಣ ಭಾಗದ ಜನರಲ್ಲಿಗೆ ಆಡಳಿತ ಯಂತ್ರ ಕೊಂಡೊಯ್ಯುವ ಮೂಲಕ ಅವರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಅರಿತು,  ಪರಿಹಾರ ಕಲ್ಪಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿಯೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಕಂದಾಯ ಇಲಾಖೆ ಗ್ರಾಮೀಣ ಭಾಗದ ಜನರಿಗೆ ಅತಿ ಹತ್ತಿರವಾದ ಇಲಾಖೆ. ರೈತರಿಗೆ ಅವಶ್ಯವಿರುವ ಪಹಣಿ, ಸರ್ವೇ ಉತಾರಿ, ರಹವಾಸಿ  ಜಾತಿ, ಆದಾಯ ಸೇರಿದಂತೆ  ಹಲವು ಕಂದಾಯ ಪತ್ರಗಳನ್ನು ಪೂರೈಸುವುದರಿಂದ ರಾಜ್ಯದಾದ್ಯಂತ 2013 ರಲ್ಲಿ ಬಲವರ್ಧನೆ ಮಾಡುವ ಮೂಲಕ ತಾಲೂಕಾ ಮಟ್ಟದಲ್ಲಿ ಸಿಗುವ ಎಲ್ಲ ಕಂದಾಯ ಸೇವೆಗಳು ಸೇರಿದಂತೆ 20ಕ್ಕೂ ಸೇವೆಗಳನ್ನು ನಾಡಕಚೇರಿಯಲ್ಲಿ ಆರಂಭಿಸಲಾಯಿತು. ಪಹಣಿ ಪತ್ರಿಕೆಯನ್ನು ನೀಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ  ಪ್ರತಿ  ಗ್ರಾಮ ಪಂಚಾಯತಿಯಲ್ಲಿ ಬಾಪೂಜಿ ಸೇವಾ ಕೇಂದ್ರ ಆರಂಭಿಸಿ ಅನುಕೂಲ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ನಂತರ ಅಹವಾಲು ಆಲಿಸಿದ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಕಾರ್ಯಕ್ರಮದಲ್ಲಿ ಒಟ್ಟು 107 ಅರ್ಜಿ ಸಲ್ಲಿಕೆಯಾಗಿವೆ.  ಇವುಗಳಲ್ಲಿ 24 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿದೆ.  ಉಳಿದ 83 ಅರ್ಜಿಗಳ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಆಯಾ ಇಲಾಖೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಪಶುಸಂಗೋಪನೆ ಇಲಾಖೆಯ 2,ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 10, ಲೀಡ್ ಬ್ಯಾಂಕ ಮ್ಯಾನೇಜರ್ ಅವರಿಗೆ 2, ಆಹಾರ ಇಲಾಖೆಗೆ 1, ಎಡಿಎಲ್ ಆರ್ 14,  ಪಂಚಾಯಿತಿ ರಾಜ್  ಎಂಜಿನೀಯರಿಂಗ್  ಇಲಾಖೆಗೆ 10, ಶಿಶು ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ 2, ಆರೋಗ್ಯ, ಇಲಾಖೆ  2, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸಂಬಂಧಿಸಿದ 1, ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಗೆ ಸಂಬಂಧಿಸಿದಂತೆ 1, ಅಬಕಾರಿ ಇಲಾಖೆಗೆ 2, ಕಂದಾಯ ಇಲಾಖೆಗೆ ಸಲ್ಲಿಕೆಯಾದ 30 ಅರ್ಜಿಗಳಲ್ಲಿ 24 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಿದೆ.  ಉಳಿದ 6 ಅರ್ಜಿಗಳಿಗೆ ಸೂಚನೆ ನೀಡಿದೆ. ಲೋಕೋಪಯೋಗಿ ಇಲಾಖೆಯ 1, ಹೆಸ್ಕಾಂ 8, ನೋಂದಣಾಧಿಕಾರಿ ಕಚೇರಿಗೆ ಸಂಬಂಧಿಸಿದ 1 ಹಾಗೂ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ 20 ಅರ್ಜಿ ಸಲ್ಲಿಕೆಯಾಗಿವೆ.

ಸಾಂಪ್ರದಾಯಿಕ ಸ್ವಾಗತ

ಇದಕ್ಕೂ ಮೊದಲು ಬಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರನ್ನು ಗ್ರಾಮದ ಮಹಿಳೆಯರು ಕುಂಭ ಕಳಸದೊಂದಿಗೆ ಸಾಂಪ್ರದಾಯಿವಾಗಿ ಬರಮಾಡಿಕೊಂಡರು. ಡೊಳ್ಳು, ಹಲಗೆ ವಾದನ, ಸಂಗೀತ ವಾದ್ಯದೊಂದಿಗೆ ಕಾರ್ಯಕ್ರಮದ ವೇದಿಕೆಗೆ ಸಡಗರ ಸಂಭ್ರಮದಿಂದ ಕರೆತರಲಾಯಿತು. ನಂತರ ಜಿಲ್ಲಾಧಿಕಾರಿಗಳು ಬಮ್ಮನಹಳ್ಳಿ ಗ್ರಾಮ ವೀರಯೋಧ ದಿ: ಗೊಲ್ಲಾಳಪ್ಪ ಭೀ. ವಾಸೆನಾ ಇವರ ಸಮಾಧಿಗೆ ತೆರಳಿ ಭಾವಚಿತ್ರಕ್ಕೆ ಪುಷ್ರ್ಪಾಚನೆ ಮೂಲಕ ಗೌರವ ಸಲ್ಲಿಸಿದರು.

 

ಗರ್ಭೀಣಿಯರಿಗೆ ಸೀಮಂತ ಕಾರ್ಯಕ್ರಮ : ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಬಾಯಿ ಬಿರಾದಾರ ಸೇರಿದಂತೆ ಊರಿನ ಮಹಿಳೆಯರು 5 ಜನ ಗರ್ಭೀಣಿ ಮಹಿಳೆಯರಿಗೆ ಆರತಿ ಬೆಳಗಿ ಹೂ, ಬಳೆ, ಹಣ್ಣು ನೀಡಿ ಉಡಿ ತುಂಬುವ ಮೂಲಕ ಸೀಮಂತ ಕಾರ್ಯಕ್ರಮ ನಡೆಸಿದ್ದು, ಕಾರ್ಯಕ್ರಮದಲ್ಲಿ ವಿಶಿಷ್ಟ ಹಾಗೂ ವಿಶೇಷವಾಗಿತ್ತು.

ಶಿಶು ಜನ್ಮಾಚರಣೆ

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮದ ಕುಮಾರಿ ವಿಜಯಲಕ್ಷ್ಮೀ ಮತ್ತು ಕುಮಾರಿ ಅಲೀನಾ ಅವರ ಹುಟ್ಟು ಹಬ್ಬವನ್ನು ವೇದಿಕೆಯಲ್ಲಿಯೇ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಬಸ್ ಸಂಚಾರ ಪ್ರಾರಂಭ

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಈ ಭಾಗದ ವಿದ್ಯಾರ್ಥಿಗಳ ಬೇಡಿಕೆಯಾದ ಮಧ್ಯಾಹ್ನ 12.30 ಗಂಟೆಗೆ ಬೊಮ್ಮನಳ್ಳಿ-ದೇವರನಾವದಗಿ-ಸಿಂದಗಿ ಸಂಚರಿಸುವ ನೂತನವಾಗಿ ಆರಂಭಿಸಲಾದ ಬಸ್‍ಗೆ ಶಾಸಕರಾದ ರಮೇಶ ಭೂಸನೂರ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ವಿಕಲಚೇತನರಿಗೆ ಸವಲತ್ತು ವಿತರಣೆ : ಬಮ್ಮನಹಳ್ಳಿಯಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮಲ್ಲಮ್ಮ ರಾಂಪೂರ, ಮೌನಪ್ಪ ಬಡಿಗೇರ ಹಾಗೂ ಅಯ್ಯಪ್ಪ ಕಾಳಗಿ ಇವರಿಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಊರುಗೋಲ ಹಾಗೂ ಅವಶ್ಯಕ ಸಲಕರೆಣೆ ವಿತರಿಸಿದರು.

 

ಆರೋಗ್ಯ ಶಿಬಿರದಲ್ಲಿ ತಪಾಸಣೆ

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಇಂದು ಬಮ್ಮನಹಳ್ಳಿಯಲ್ಲಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಲಘಾಣ ಇವರ ಆಶ್ರಯದಲ್ಲಿ ಆಯೋಜಿಸಲಾದ ಆರೋಗ್ಯ ಶಿಬಿರದಲ್ಲಿ 119 ಎಬಿಎಚ್‍ಎ ಕಾರ್ಡಗಳನ್ನು ಮಾಡಲಾಯಿತು. 69 ಜನರ ಸಕ್ಕರೆ ಖಾಯಿಲೆ ತಪಾಸಣೆ, ಈ ಪೈಕಿ ಚಿಕಿತ್ಸೆ ಅವಶ್ಯಕತೆ ಇರುವ  9 ಜನರಿಗೆ ಚಿಕಿತ್ಸೆ ನೀಡಲಾಯಿತು. ಅದರಂತೆ 89 ಜನರ ರಕ್ತದೊತ್ತಡವನ್ನು ಪರಿಶೀಲಿಸಿ ಸೂಕ್ತ  ವೈದ್ಯಕೀಯ ಸಲಹೆ ಸೂಚನೆಗಳನ್ನು ನೀಡಲಾಯಿತು.

ರೂ. 10ಲಕ್ಷ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ

2022-23ನೇ ಆರ್ಥಿಕ ವರ್ಷದಲ್ಲಿ ನರೇಗಾ ಯೋಜನೆ ಬಮ್ಮನಹಳ್ಳಿ ಗ್ರಾಮದಿಂದ ಕುಮಸಗಿ ಗ್ರಾಮಕ್ಕೆ ಹೋಗುವ ಚಂದಪ್ಪ ದೇಸಾಯಿ ಇವರ ಜಮೀನಿನಿಂದ ಶಿವರಾಜ ಮಡಿವಾಳಪ್ಪ ದೇಸಾಯಿ ಇವರ ಹೊಲದವರೆಗೆ ಚರಂಡಿ ನಿರ್ಮಾಣದ ಅಂದಾಜು 10 ಲಕ್ಷ ರೂ. ಕಾಮಗಾರಿಗೆ ಶಾಸಕ ರಮೇಶ ಭೂಸನೂರ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೂಮಿ ಪೂಜೆ ನೆರವೇರಿಸಿದರು.

ಆಲಮೇಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಡಿಸಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಾನಾ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು

ಸರಕಾರದ ಯೋಜನೆಗಳ ಮಾಹಿತಿ ಮಳಿಗೆ

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಆಲಮೇಲ ತಾಲೂಕಿನ ಬಮ್ಮನಹಳ್ಳಿಯಲ್ಲಿ ಕೌಶಲ್ಯಾಭಿವೃದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಬಮ್ಮನಹಳ್ಳಿ ಸಂಜೀವಿನಿ, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಂಜೀವಿನಿ ಮಾರಾಟ ಮಳಿಗೆ, ಕೃಷಿ ಇಲಾಖೆಯ ಕೃಷಿ ವಸ್ತು ಪ್ರದರ್ಶನ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷನಾ ಅಭಿಯಾನದ ಪೌಷ್ಠಿಕ ಆಹಾರ ಪದಾರ್ಥ ಮಳಿಗೆ, ಪಶು ಸಂಗೋಪನೆ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಯೋಜನೆಗಳ ಮಾಹಿತಿ ತಲುಪಿಸುವ ವಸ್ತು ಪ್ರದರ್ಶನ  ಮಳಿಗೆಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ 6 ಜನರಿಗೆ ಪಡಿತರ ಚೀಟಿ,  8 ಜನರಿಗೆ ಸಾಮಾಜಿಕ ಭದ್ರತಾ ಪಿಂಚಣಿ ಆದೇಶ ಪತ್ರ, 5ಜನ ರೈತರಿಗೆ  ಜಂತುನಾಶಕ ಮತ್ತು ಮಿನರಲ್ ಮಿಕ್ಸರ್ ಪೌಡರ್ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿ. ಬಿ. ದೇವರಮನಿ, ಬಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಾಬಾಯಿ ಬಿರಾದಾರ, ಉಪಾಧ್ಯಕ್ಷ ಸಂತೋಷ ಕಲ್ಲೂರ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ, ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆ ಉಪನಿರ್ದೇಶಕ ಕೆ. ಕೆ. ಚವ್ಹಾಣ, ಆಹಾರ ಇಲಾಖೆ ಉಪನಿರ್ದೇಶಕ ಎಸ್. ಎಂ. ಮಾರಿಹಾಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಆಲಮೇಲ ತಹಶೀಲ್ದಾರ ಸುರೇಶ ಚವಲರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಬಮ್ಮನಹಳ್ಳಿ ಗ್ರಾಮಸ್ಥರು, ಶಾಲಾ ಮಕ್ಕಳು ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌