KSAWU Convocation: ಮಹಿಳಾ ಶಿಕ್ಷಣ ಸಮಾಜದ ಅಭಿವೃದ್ದಿಗೆ ಪೂರಕವಾಗಿದೆ- ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

ವಿಜಯಪುರ: ಮಹಿಳಾ ಶಿಕ್ಷಣ ಸಮಾಜದ ಅಭಿವೃದ್ದಿಗೆ ಪೂರಕವಾಗಿದ್ದು, ಈ ನಿಟ್ಟಿನಲ್ಲಿ 2003ರಲ್ಲಿ ಆರಂಭಿಸಲಾಗಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಸಶಸ್ತ್ರೀಕರಣಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೊಟ್ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದಲ್ಲಿ ನಡೆದ 13 ಮತ್ತು 14ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜಯಪುರ ಮಹಿಳಾ ವಿವಿಯಲ್ಲಿ 13, 14ನೇ ಘಟಿಕೋತ್ಸವ ನಡೆಯಿತು

ಶ್ರೇಷ್ಠ ಭಾರತ, ನಿರ್ಭರ ಭಾರತ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿ ಪ್ರಧಾನ ಕಾರ್ಯ ನಿರ್ವನಿರ್ವಹಿಸುತ್ತಿದ್ದು, ಮಹಿಳೆಯರು ಅದರ ಸದುಪಯೋಗ ಪಡೆದುಕೊಂಡು ಎಲ್ಲ ರಂಗದಲ್ಲೂ ಮಹಿಳೆ ಕೆಲಸ ಮಾಡಬೇಕು. ಮಹಿಳಾ ಸಶಕ್ತೀಕರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಇದನ್ನು ಎಲ್ಲಾ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಚಿನ್ನದ ಪದಕ ಪಡೆದ ಎಲ್ಲ ಮಹಿಳೆಯರು ರಾಷ್ಟ್ರಕ್ಕೆ ಯೋಗದಾನ ಕೊಡುವುದರ ಜೊತೆಗೆ ಪ್ರೇರಣೆ ನೀಡಬೇಕು. ಈ ವಿಶ್ವವಿದ್ಯಾನಿಲಯದಿಂದ ಉತ್ತಮ ಮಟ್ಟದ ಶಿಕ್ಷಣ ತೆಗೆದುಕೊಂಡು ತಮ್ಮ ಜೀವನದಲ್ಲಿ ಮುಂದೆ ಹೋಗಲು ಹಾಗೂ ಸಬಲೀಕರಣ ಹೊಂದಲು ಈ ವಿಶ್ವವಿದ್ಯಾನಿಲಯ ಸಹಾಯಕವಾಗಿದೆ. ಮಹಿಳಾ ವಿಶ್ವವಿದ್ಯಾನಿಲಯವು ರಾಷ್ಟ್ರಕ್ಕೆ ಆದರ್ಶ ವಿಶ್ವವಿದ್ಯಾನಿಲವಾಗಬೇಕು ಎಂದು ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಹೇಳಿದರು.

 

ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶಾಂತಿಶ್ರೀ ಧೂಳಿಪುಡಿ ಪಂಡಿತ್ ಮಾತನಾಡಿ, ಉನ್ನತ ಮಟ್ಟದ ಮಹಿಳಾ ಶಿಕ್ಷಣದ ಮೂಲಕ ಮಾತ್ರ ಸಮಾಜ ಮತ್ತು ದೇಶವು ಅರ್ಥಪೂರ್ಣ ಪ್ರಗತಿಯನ್ನು ಸಾಧಿಸಲು ಸಾಧ್ಯ. ಹೆಣ್ಣು ಮಗುವಿಗೆ ಶಿಕ್ಷಣ ನೀಡುವುದು ಎಂದರೆ ಆಕೆಯ ಕುಟುಂಬ, ಸಮಾಜ ಮತ್ತು ದೊಡ್ಡ ರಾಷ್ಟ್ರದ ಭವಿಷ್ಯವನ್ನು ಸುಧಾರಿಸುವುದು ಎನ್ನುವುದಾಗಿದೆ. ಭಾರತದ ಪೀಳಿಗೆಯ ಪರಿವರ್ತನೆಗೆ ಮಹಿಳಾ ಶಿಕ್ಷಣ ಅತ್ಯಗತ್ಯ ಎಂದು ಹೇಳಿದರು.

ಭಾರತವು ಜಗತ್ತಿನಲ್ಲಿ ತನ್ನ ಸರಿಯಾದ ಸ್ಥಾನವನ್ನು ಪಡೆಯಬೇಕಾದರೆ ಮಹಿಳೆಯರ ಪ್ರಗತಿ ಮತ್ತು ಸಬಲೀಕರಣವು ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಉನ್ನತ ಶಿಕ್ಷಣವು ಮಹಿಳೆಯರ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಯ ಎಂಜಿನ್ ಇದ್ದಂತೆ. ದೇಶದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಹಿಳಾ ಶಿಕ್ಷಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಎಲ್ಲರೂ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಶಾತಿಶ್ರೀ ಧೂಳಿಪುಡಿ ಪಂಡಿತ್ ಹೇಳಿದರು.

ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಮಾತನಾಡಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವುದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದೆ ದೂರದ ಜಿಲ್ಲೆಗಳ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ಸೃಷ್ಟಿಸುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸ ಮಹಾವಿದ್ಯಾಲಯಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆಯ ಆದೇಶದಂತೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನಗೊಳಿಸಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕ ಕೋರ್ಸುಗಳನ್ನು ಆರಂಭಿಸಿದೆ. ಹೊಸ ಶಿಕ್ಷಣ ನೀತಿಯ ಪಠ್ಯಕ್ರಮದನುಸಾರ ಭಾಷಾ ಪಠ್ಯಪುಸ್ತಕಗಳನ್ನು ಪ್ರಸಾರಾಂಗದಿಂದ ಪ್ರಕಟಿಸಲು ತೀರ್ಮಾನಿಸಲಾಗಿದ್ದು ಪ್ರಕಟಣಾ ಕಾರ್ಯ ಪ್ರಗತಿಯಲ್ಲಿದೆ, ಈಗ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಒಟ್ಟು 04 ನಿಕಾಯಗಳಲ್ಲಿ 350 ಸ್ನಾತಕ ವಿದ್ಯಾರ್ಥಿನಿಯರು ಅಧ್ಯಯನದಲ್ಲಿ ತೊಡಗಿದ್ದಾರೆ ಎಂದು ಪ್ರೊ. ಬಿ. ಕೆ. ತುಳಸಿಮಾಲ ವಿವರಿಸಿದರು.

ಈ ಘಟಿಕೋತ್ಸವದಲ್ಲಿ ಪಾಲ್ಗೋಂಡ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಮೂಲಕ ಅತ್ಯಂತ ಜನಪ್ರಿಯತೆ ಗಳಿಸಿರುವ ಸಮಾಜ ಸೇವಕಿ ಡಾ. ಎಸ್. ಜಿ. ಸುಶೀಲಮ್ಮ ಹಾಗೂ ದಕ್ಷ ಆಡಳಿತಗಾರ್ತಿ ಎಂದು ಹೆಸರುವಾಸಿಯಾಗಿರುವ ಬೀದರಿನ ಗುರುನಾನಕ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ರೇಶ್ಮಾ ಕೌರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

ಈ ಘಟಿಕೋತ್ಸವದಲ್ಲಿ ನಾನಾ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 167 ವಿದ್ಯಾರ್ಥಿನಿಯರಿಗೆ 202 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ. ಬಿ. ಎಸ್. ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ ಕೆ, ನಾನಾ ನಿಕಾಯಗಳ ಡೀನರು, ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌